ಕಾಳಗಿ: ಹೊರವಲಯದ ಕೋಡ್ಲಿ ಮಾರ್ಗದ ಲಕ್ಷ್ಮಣ ನಾಯಕ ತಾಂಡಾದ ಬಾಬಾಸಾಹೇಬ ಗುಡ್ಡದ ಮೇಲೆ ಬುಧವಾರ ಸಿಡಿಲು ಬಡಿದು 16 ಜಾನುವಾರು ಮೃತಪಟ್ಟು, 8 ಅಸ್ವಸ್ಥಗೊಂಡಿವೆ.
ಮೃತಪಟ್ಟ 16 ಜಾನುವಾರುಗಳ ಪೈಕಿ 10 ಹಸುಗಳಿದ್ದು, 6 ಎತ್ತುಗಳಿವೆ. ಮಧ್ಯಾಹ್ನ 3.30ರ ಸುಮಾರಿಗೆ ಗುಡುಗು ಸಹಿತ ಮಳೆ ಬರುತ್ತಿರುವಾಗ 26 ಜಾನುವಾರುಗಳಲ್ಲಿ 10 ಬೇರೆಡೆ ಓಡಿಹೋಗಿ ಹುಣಸೆ ಮರದ ಅಡಿ ಆಶ್ರಯ ಪಡೆದಿದ್ದವು.
ದನಗಾಹಿ ಅರುಣ ರಾಠೋಡ್ ಅವರು ಬಾಬಾಸಾಹೇಬ ದರ್ಗಾದಲ್ಲಿ ರಕ್ಷಣೆ ಪಡೆದಿದ್ದ. ಸಿಡಿಲಿನಿಂದ ಅರುಣನ ಕಿವಿಗೂ ಹಾನಿಯಾಗಿದೆ. ಜಾನುವಾರುಗಳು ಲಕ್ಷ್ಮಣನಾಯಕ ತಾಂಡಾದ 12 ರೈತರಿಗೆ ಸೇರಿವೆ.
ತಹಶೀಲ್ದಾರ್ ನಾಗನಾಥ ತರಗೆ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಅಣ್ಣಾರಾವ ಪಾಟೀಲ, ಹೆಡ್ ಕಾನ್‌ಸ್ಟೆಬಲ್ ಹುಸೇನ್, ಚನ್ನಬಸವ, ಅಂಬರೀಶ ಭೇಟಿ ನೀಡಿ ಪರಿಶೀಲಿಸಿದರು. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.