ADVERTISEMENT

ಜಿಮ್ಸ್‌ ಸೇರಿ 16 ಆಸ್ಪತ್ರೆಗಳಿಗೆ ‘ರಾಷ್ಟ್ರೀಯ ಪ್ರಮಾಣೀಕರಣ’ ಗರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:29 IST
Last Updated 25 ಅಕ್ಟೋಬರ್ 2024, 14:29 IST
ಕಲಬುರಗಿಯ 16 ಆಸ್ಪತ್ರೆಗಳಿಗೆ ‘ರಾಷ್ಟ್ರೀಯ ಪ್ರಮಾಣೀಕರಣ’ ಲಭಿಸಿದೆ ಅಂಗವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಭಿನಂದಿಸಿ, ಪ್ರಮಾಣ ಪತ್ರ ನೀಡಿದರು
ಕಲಬುರಗಿಯ 16 ಆಸ್ಪತ್ರೆಗಳಿಗೆ ‘ರಾಷ್ಟ್ರೀಯ ಪ್ರಮಾಣೀಕರಣ’ ಲಭಿಸಿದೆ ಅಂಗವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಭಿನಂದಿಸಿ, ಪ್ರಮಾಣ ಪತ್ರ ನೀಡಿದರು   

ಕಲಬುರಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಸೇರಿ ಜಿಲ್ಲೆಯ 16 ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಪ್ರಮಾಣೀಕರಣ’ ಲಭಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ‘ರಾಷ್ಟ್ರೀಯ ಪ್ರಮಾಣೀಕರಣ’ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಜಿಲ್ಲೆಯ 12 ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ (ಎನ್‌ಕ್ಯೂಎಎಸ್‌), ಮೂರು ತಾಲ್ಲೂಕು ಆಸ್ಪತ್ರೆಗಳಿಗೆ ‘ಲಕ್ಷ್ಯ’ ಹಾಗೂ ಜಿಮ್ಸ್‌ಗೆ ಮುಸ್ಕಾನ್ ಅಡಿಯಲ್ಲಿ ‘ರಾಷ್ಟ್ರೀಯ ಪ್ರಮಾಣೀಕರಣ’ ನೀಡಲಾಗಿದೆ.

ಡ್ರೆಸ್ಸಿಂಗ್‌ ಹಾಗೂ ತುರ್ತು ಚಿಕಿತ್ಸಾ ಕೊಠಡಿ, ತಾಯಂದಿರ ಆರೋಗ್ಯ ಸೇವೆ, ಮಕ್ಕಳು ಹಾಗೂ ಶಿಶುಗಳಿಗೆ ನೀಡುವ ಚಿಕಿತ್ಸೆ, ಲಸಿಕಾ ಅಭಿಯಾನಗಳು, ಕುಟುಂಬ ಯೋಜನೆ, ಸಾಂಕ್ರಾಮಿಕ ರೋಗಗಳು ಹಾಗೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಆಡಳಿತ ವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ, ಔಷಧಾಲಯ, ಪ್ರಯೋಗಾಲಯಗಳು ಸೇರಿದಂತೆ ಎಲ್ಲ ವಿಭಾಗಗಳನ್ನು ಪರಿಶೀಲಿಸಿ ಗುಣಮಟ್ಟ ಖಾತ್ರಿಪಡಿಸಿಕೊಂಡು ಅಂಕಗಳನ್ನು ನೀಡಲಾಗಿತ್ತು.

ADVERTISEMENT

‘ಮುಸ್ಕಾನ್’ ಅಡಿ ಜಿಮ್ಸ್‌ಗೆ ಶೇ 92, ‘ಎನ್‌ಕ್ಯೂಎಎಸ್‌’ ಅಡಿ ಸೇಡಂ ತಾಲ್ಲೂಕು ಆಸ್ಪತ್ರೆಗೆ ಶೇ 87, ಗೊಬ್ಬುರ (ಬಿ) ಪಿಎಚ್‌ಸಿಗೆ ಶೇ 94.39, ಮಾಶಾಳ ಪಿಎಚ್‌ಸಿಗೆ ಶೇ 90.84, ಗಂವ್ಹಾರ ಪಿಎಚ್‌ಸಿಗೆ ಶೇ 90.82, ಮಳ್ಳಿ ಪಿಎಚ್‌ಸಿಗೆ ಶೇ 90.76, ಹಿರೆ ಸಾವಳಗಿ ಪಿಎಚ್‌ಸಿಗೆ ಶೇ 83.97, ಶಿವಾಜಿನಗರ ಯುಪಿಎಚ್‌ಸಿಗೆ ಶೇ 76.6, ನಂದರ್ಗ ಪಿಎಚ್‌ಸಿಗೆ ಶೇ 87.19, ಭೋಸಗ ಪಿಎಚ್‌ಸಿಗೆ ಶೇ 87.2, ಬೈರಮಡಗಿ ಪಿಎಚ್‌ಸಿಗೆ ಶೇ 84.45, ಬಳ್ಳೂರ್ಗಿ ಪಿಎಚ್‌ಸಿಗೆ ಶೇ 84 ಹಾಗೂ ಚಿಂಚೋಳಿ ರೇವೂರ (ಬಿ) ಪಿಎಚ್‌ಸಿಗೆ ಶೇ 79.78 ಅಂಕ ಲಭಿಸಿವೆ.

‘ಲಕ್ಷ್ಯ’ ಅಡಿ ಆಳಂದ ತಾಲ್ಲೂಕು ಆಸ್ಪತ್ರೆಗೆ ಶೇ 94.25, ಜೇವರ್ಗಿ ತಾಲ್ಲೂಕು ಆಸ್ಪತ್ರೆಗೆ ಶೇ 83.5 ಹಾಗೂ ಚಿಂಚೋಳಿ ತಾಲ್ಲೂಕು ಆಸ್ಪತ್ರೆಗೆ ಶೇ 82ರಷ್ಟು ಶ್ರೇಯಾಂಕ ದೊರೆತಿದೆ.

‘ರಾಷ್ಟ್ರೀಯ ಗುಣಮಟ್ಟ ನಿರ್ವಹಣಾ ಪ್ರಮಾಣ ಪತ್ರ’ ಲಭಿಸಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸನ್ಮಾನಿಸಿದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಗುಣಮಟ್ಟ ಭರವಸೆ ಕಾರ್ಯಕ್ರಮದ ಡಾ. ಶಿವಶರಣಪ್ಪ ಎಂ.ಡಿ., ಜಿಲ್ಲಾ ಆರ್‌ಸಿಎಚ್‌ಒ ಡಾ.ವಿವೇಕಾನಂದ್ ರೆಡ್ಡಿ , ಸಮೀಕ್ಷಣಾಧಿಕಾರಿ ಡಾ. ರಾಕೇಶ್ ಕಾಂಬಳೆ, ತಾಲ್ಲೂ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.