ADVERTISEMENT

ಕಲಬುರಗಿ: ಜಿಲ್ಲೆಯಾದ್ಯಂತ 1,925 ಬಿಪಿಎಲ್ ಕಾರ್ಡ್‌ಗಳು ಅನರ್ಹ

360 ಸರ್ಕಾರಿ ನೌಕರರು, 1,565 ಆದಾಯ ಮಾನದಂಡದಡಿ ಕತ್ತರಿ

ಮಲ್ಲಿಕಾರ್ಜುನ ನಾಲವಾರ
Published 21 ನವೆಂಬರ್ 2024, 6:47 IST
Last Updated 21 ನವೆಂಬರ್ 2024, 6:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಜಿಲ್ಲೆಯಾದ್ಯಂತ ಆದಾಯ ತೆರಿಗೆ ಪಾವತಿದಾರರ, ಸರ್ಕಾರಿ/ ಅರೆ ಸರ್ಕಾರಿ ನೌಕರರ ಹಾಗೂ ₹1.20 ಲಕ್ಷಕ್ಕೂ ಮೀರಿದ ಆದಾಯ ಹೊಂದಿರುವ ಒಟ್ಟು 1,925 ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್‌ಗಳನ್ನು ಎಪಿಎಲ್ (ಬಡತನ ರೇಖೆಗಿಂತ ಮೇಲಿರುವವರು) ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಕಳೆದ ಎರಡು ತಿಂಗಳಿಂದ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರ ಸ್ಥಾನಮಾನವನ್ನು ಆಧರಿಸಿ ಅವರ ಕಾರ್ಡ್‌ಗಳನ್ನು ಪರಿಷ್ಕರಿಸುವ ಕಾರ್ಯಯನ್ನು ಕೈಗೆತ್ತಿಕೊಂಡಿದೆ. ಈ ಅವಧಿಯಲ್ಲಿ ಸರ್ಕಾರಿ/ ಅರೆ ಸರ್ಕಾರಿ ನೌಕರರ 360 ಹಾಗೂ ಆದಾಯ ತೆರಿಗೆ ಪಾವತಿ ಮತ್ತು ₹1.20 ಲಕ್ಷಕ್ಕೂ ಮೀರಿದ ಆದಾಯದ ಮಾನದಂಡದಡಿ 1,565 ಕಾರ್ಡ್‌ಗಳು ಎಪಿಎಲ್‌ ಆಗಿವೆ.

ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದು ಅವುಗಳನ್ನು ದುರುಪಯೋಗ ಮಾಡಿಕೊಂಡಿದ್ದ 12 ಮಂದಿ ಸರ್ಕಾರಿ ನೌಕರರಿಂದ ₹18 ಸಾವಿರ ದಂಡ ವಸೂಲಿ ಮಾಡಲಾಗಿದೆ. 60ಕ್ಕೂ ಹೆಚ್ಚು ನೌಕರರಿಗೆ ನೋಟಿಸ್ ಸಹ ಕೊಡಲಾಗಿದೆ. ಬದಲಾವಣೆಯಾದ 1,565 ಕಾರ್ಡ್‌ದಾರರಲ್ಲಿ 70 ಜನರಿಗೆ ನೋಟಿಸ್ ಹೋಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಅಫಜಲಪುರ ತಾಲ್ಲೂಕಿನ 82, ಆಳಂದದ 197, ಚಿಂಚೋಳಿಯ 75, ಚಿತ್ತಾಪುರದ 145, ಜೇವರ್ಗಿಯ 66, ಕಲಬುರಗಿಯ 769, ಕಾಳಗಿಯ 36, ಕಮಲಾಪುರದ 55, ಸೇಡಂನ 59, ಶಹಾಬಾದ್‌ನ 39 ಹಾಗೂ ಯಡ್ರಾಮಿ ತಾಲ್ಲೂಕಿನ 42 ತೆರಿಗೆ ಪಾವತಿದಾರರ ಬಿಪಿಎಲ್‌ ಕಾರ್ಡ್‌ಗಳು ಅನರ್ಹವಾಗಿವೆ.

ಅಫಜಲಪುರದ 11, ಆಳಂದದ 48, ಚಿಂಚೋಳಿಯ 14, ಚಿತ್ತಾಪುರದ 15, ಜೇವರ್ಗಿಯ 7, ಕಲಬುರಗಿಯ 224, ಕಾಳಗಿಯ 5, ಕಮಲಾಪುರದ 21, ಸೇಡಂನ 3, ಶಹಾಬಾದ್‌ನ 2 ಹಾಗೂ ಯಡ್ರಾಮಿ ತಾಲ್ಲೂಕಿನ 10 ಸರ್ಕಾರಿ/ ಅರೆ ಸರ್ಕಾರಿ ನೌಕರರು ತಮ್ಮ ಬಿಪಿಎಲ್‌ ಕಾರ್ಡ್‌ಗಳ ಮಾನ್ಯತೆಯನ್ನು ಕಳೆದುಕೊಂಡಿದ್ದಾರೆ.

15,535 ಬಿಪಿಎಲ್‌ ಕಾರ್ಡ್‌ಗಳು ತಾತ್ಕಾಲಿಕ ಅಮಾನತು: ವಿವಿಧ ಕಾರಣಗಳಿಗಾಗಿ ಕಳೆದ ಆರು ತಿಂಗಳಿನಿಂದ ಪಡಿತರ ಪಡೆಯದ 15,535 ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.  ಕಾರ್ಡ್ ಹೊಂದಿದವರು ಮುಂದೆ ಬಂದು ಇನ್ನು ಮುಂದೆ ತಾವು ಪಡಿತರ ಪಡೆಯುವುದಾಗಿ ತಿಳಿಸಿದರೆ, ತಾತ್ಕಾಲಿಕ ಅಮಾನತು ರದ್ದು ಹಿಂಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗೌಂಡಿ ಕೆಲಸಗಾರನ ಕಾರ್ಡ್ ಬಿಪಿಎಲ್‌ನಿಂದ ಎಪಿಎಲ್‌!
ವಾರ್ಷಿಕ ವರಮಾನ ₹70 ಸಾವಿರ ಇರುವ ಗೌಂಡಿ ಕೆಲಸ ಮಾಡುವ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ಸಮೀಪದ ಚಂದು ನಾಯಕ್ ತಾಂಡಾದ ಧನರಾಜ್ ಅವರ ಕುಟುಂಬದ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿದೆ. ‘ಆದಾಯ ತೆರಿಗೆ ಪಾವತಿಯ ಕಾರಣಕ್ಕೆ ಬಿಪಿಎಲ್ ಮಾನ್ಯತೆ ತೆಗೆದು ಎಪಿಎಲ್ ಕಾರ್ಡ್ ಕೊಟ್ಟಿದ್ದಾರೆ. ನಾನು ಗೌಂಡಿ ಕೆಲಸ ಪತ್ನಿ ಕೂಲಿ ಮಾಡುತ್ತಾರೆ. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಒಂದು ರೂಪಾಯಿಯೂ ತೆರಿಗೆ ಕಟ್ಟಿಲ್ಲ. ಆದರೆ ಬಿಪಿಎಲ್ ಮಾನ್ಯತೆಯನ್ನು ಕಸಿದುಕೊಂಡಿದ್ದು ಎರಡು ತಿಂಗಳಿಂದ ಸರಿಯಾಗಿ ಪಡಿತರ ಸಿಗುತ್ತಿಲ್ಲ’ ಎಂದು ಧನರಾಜ್ ಹೇಳುತ್ತಾರೆ.

‘ಕುಟುಂಬದ ಮುಖ್ಯಸ್ಥರ ಆದಾಯ ಮಾತ್ರ ಪರಿಗಣನೆ’

‘ಕುಟುಂಬದ ಸದಸ್ಯರು ಹೊಂದಿರುವ ಆದಾಯ ಪ್ರಮಾಣ ಪತ್ರಗಳಲ್ಲಿನ ಎಲ್ಲ ಆದಾಯವನ್ನು ಒಗ್ಗೂಡಿಸಿ ₹1.20 ಲಕ್ಷಕ್ಕೂ ಅಧಿಕ ಆದಾಯವೆಂದು ಪರಿಗಣನೆಗೆ ತೆಗೆದುಕೊಂಡಿದ್ದರಿಂದ ಕೆಲವು ಅರ್ಹ ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ಗೆ ಬದಲಾವಣೆಯಾಗಿವೆ. ಇದು ಸರಿಯಾದ ಮಾನದಂಡ ಅಲ್ಲ ಎಂಬುದನ್ನು ಈಗಾಗಲೇ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಭೀಮರಾಯ ಕಲ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾರ್ಷಿಕ ಆದಾಯದ ಮಿತಿಯನ್ನು ಕುಟುಂಬದ ಮುಖ್ಯಸ್ಥರು ಹೊಂದಿರುವ ಆದಾಯವನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಹೀಗಾಗಿ ಅರ್ಹ ಬಿಪಿಎಲ್‌ ಕಾರ್ಡ್‌ದಾರು ತಾವು ಆದಾಯ ತೆರಿಗೆ ಪಾವತಿದಾರರಲ್ಲ ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿಲ್ಲ ಎಂದು ಅರ್ಜಿ ಕೊಟ್ಟರೆ ಅದನ್ನು ಇಲಾಖೆಯ ಆಯುಕ್ತರಿಗೆ ಕಳುಹಿಸುತ್ತೇವೆ. ಬಳಿಕ ಬಿಪಿಎಲ್‌ ಕಾರ್ಡ್‌ ಮಾನ್ಯತೆ ನೀಡಲಾಗುವುದು’ ಎಂದರು. ‘ಇಂತಹ ಎಂಟೊಂಬತ್ತು ಪ್ರಕರಣಗಳು ಗಮನಕ್ಕೆ ಬಂದಿದ್ದು ಅವುಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ. ಒಂದೇ ಒಂದು ಬಿಪಿಎಲ್ ಕಾರ್ಡ್‌ ರದ್ದು ಮಾಡಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.