ADVERTISEMENT

ಕಲಬುರಗಿ | ಕಳೆದುಕೊಂಡಿದ್ದ 200 ಮೊಬೈಲ್ ಹಸ್ತಾಂತರ

10 ತಿಂಗಳಲ್ಲಿ ₹38 ಲಕ್ಷ ಮೌಲ್ಯದ 672 ಮೊಬೈಲ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:16 IST
Last Updated 24 ಅಕ್ಟೋಬರ್ 2024, 5:16 IST
ಕಲಬುರಗಿಯಲ್ಲಿ ಬುಧವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ವಾರಸುದಾರರಿಗೆ ಮೊಬೈಲ್ ಹಸ್ತಾಂತರ ಮಾಡಿದರು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್, ‘ಸೆನ್‌’ ಠಾಣೆಯ ಎಸಿಪಿ ಮಡೋಳಪ್ಪ ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಬುಧವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ವಾರಸುದಾರರಿಗೆ ಮೊಬೈಲ್ ಹಸ್ತಾಂತರ ಮಾಡಿದರು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್, ‘ಸೆನ್‌’ ಠಾಣೆಯ ಎಸಿಪಿ ಮಡೋಳಪ್ಪ ಉಪಸ್ಥಿತರಿದ್ದರು   

ಕಲಬುರಗಿ: ಬಸ್ ನಿಲ್ದಾಣ, ಮಾರುಕಟ್ಟೆಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದ 200 ಮಂದಿಯ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ಪೊಲೀಸರು, ಅವುಗಳನ್ನು ಬುಧವಾರ ವಾರಸುದಾರರಿಗೆ ಹಸ್ತಾಂತರಿಸಿದರು.

ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್‌ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್‌ಪಿ ಇ–ಲಾಸ್ಟ್‌ನಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿನ ಸೆನ್ ಸೇರಿದಂತೆ ವಿವಿಧ ಠಾಣೆಗಳ ಸಿಬ್ಬಂದಿ ₹38 ಲಕ್ಷ ಮೌಲ್ಯದ 672 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಈಗಾಗಲೇ 472 ಮೊಬೈಲ್‌ಗಳನ್ನು ವಾರಸುದಾರರಿಗೆ ನೀಡಿದ್ದಾರೆ.

200 ಮೊಬೈಲ್‌ಗಳನ್ನು ಹಸ್ತಾಂತರಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ., ‘ಕಳೆದ ಮೂರು ವರ್ಷಗಳಲ್ಲಿ 4,968 ಮೊಬೈಲ್‌ ಕಳೆದುಕೊಂಡ ಪ್ರಕರಣ ದಾಖಲಾಗಿವೆ. ಈ ವರ್ಷದ 10 ತಿಂಗಳಲ್ಲಿ 2,041 (ಶೇ 41ರಷ್ಟು) ಪ್ರಕರಣ ದಾಖಲಾಗಿವೆ. ಅವುಗಳಲ್ಲಿ 1,153 ಮೊಬೈಲ್‌ಗಳನ್ನು (ಶೇ 56ರಷ್ಟು) ಪತ್ತೆ ಮಾಡಲಾಗಿದೆ’ ಎಂದರು.

ADVERTISEMENT

‘ವಾರಸುದಾರರಿಗೆ ಹಸ್ತಾಂತರ ಮಾಡಲಾದ 200 ಮೊಬೈಲ್‌ಗಳಲ್ಲಿ ವಿವೋ 25, ಸ್ಯಾಮ್‌ಸಂಗ್ 30, ರೆಡ್‌ಮಿ 55, ಒಪ್ಪೊ 29, ಒನ್‌ಪ್ಲಸ್ 4, ರಿಯಲ್‌ಮೀ 21, ಇತರೆ ಕಂಪನಿಗಳಿಗೆ 36 ಮೊಬೈಲ್‌ಗಳಿವೆ. ಪೊಲೀಸ್ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ₹38 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಬಹುತೇಕ ಮೊಬೈಲ್‌ಗಳನ್ನು ಬೇರೆ ಜಿಲ್ಲೆಗಳು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ ರಾಜ್ಯಗಳಿಂದ ಪತ್ತೆ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮೊಬೈಲ್ ಕಳೆದುಕೊಂಡವರು ಠಾಣೆಗೆ ಹೋಗಿ ದೂರು ನೀಡಬೇಕಾದ ಅಗತ್ಯವಿಲ್ಲ. ‘ಸಿಇಐಆರ್ ಪೋರ್ಟಲ್‌’ ಅಥವಾ ‘ಕೆಎಸ್‌ಪಿ ಆ್ಯಪ್‌ನ ಇ–ಲಾಸ್ಟ್‌’ ಮೂಲಕವೂ ದೂರು ದಾಖಲಿಸಬಹುದು. ಮೊಬೈಲ್ ಕಳ್ಳತನ ಅಥವಾ ಕಳೆದು ಹೋದ ತಕ್ಷಣವೇ ಆ್ಯಪ್‌ ಅಥವಾ ಪೋರ್ಟಲ್‌ನಲ್ಲಿ ಮೊಬೈಲ್‌ನ ಐಎಂಇಐ ನಂಬರ್‌, ಒಟಿಪಿ, ಅಗತ್ಯ ವಿವರ ಸಹಿತ ದೂರು ಸಲ್ಲಿಸಬೇಕು. ಸಂಬಂಧಪಟ್ಟ ಠಾಣೆಗೆ ದೂರಿನ ಮಾಹಿತಿ ರವಾನಿಯಾಗಿ, ಕಳೆದು ಹೋಗಿರುವ ಮೊಬೈಲ್‌ ಬ್ಲಾಕ್‌ ಆಗುತ್ತದೆ’ ಎಂದು ತಿಳಿಸಿದರು.

‘ಕಳ್ಳತನ ಮಾಡಿದವರು ಮೊಬೈಲ್‌ಗೆ ಹೊಸ ಸಿಮ್ ಹಾಕಿದ ತಕ್ಷಣವೇ ಪೊಲೀಸ್ ಠಾಣೆಗೆ ಎಚ್ಚರಿಕೆ ಸಂದೇಶ ಬರುತ್ತದೆ. ಆಗ, ಪೊಲೀಸರು ಕಾರ್ಯಪ್ರವೃತ್ತರಾಗಿ ಮೊಬೈಲ್‌ ಸಿಮ್ ಲೊಕೇಶನ್ ಜಾಡು ಹಿಡಿದು ಪತ್ತೆ ಹಚ್ಚುತ್ತಾರೆ. ಪ್ರಕರಣ ದಾಖಲಿಸುವ ವೇಳೆ ದೂರುದಾರರು ಪರ್ಯಾಯ ನಂಬರ್ ನೀಡಿದ್ದರೆ ಅವರಿಗೂ ಎಚ್ಚರಿಕೆಯ ಮೆಸೇಜ್ ಬರುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್, ಸೆನ್‌ ಠಾಣೆಯ ಎಸಿಪಿ ಮಡೋಳಪ್ಪ ಉಪಸ್ಥಿತರಿದ್ದರು.

Quote - ಸಾರ್ವಜನಿಕರು ಕೆಎಸ್‌ಪಿ ಆ್ಯಪ್‌ ಡೌನ್‌ಲೋಟ್‌ ಮಾಡಿಕೊಂಡು ಕಳುವಾದ ತಮ್ಮ ಸ್ವತ್ತುಗಳ ಬಗ್ಗೆ ಆನ್‌ಲೈನ್‌ ಮೂಲಕವೇ ದೂರು ದಾಖಲಿಸಬಹುದು ಶರಣಪ್ಪ ಎಸ್‌.ಡಿ. ಪೊಲೀಸ್ ಕಮಿಷನರ್

Cut-off box - ‘ಕಡಿಮೆ ಬೆಲೆಯ ಮೊಬೈಲ್‌ ಖರೀದಿಸಬೇಡಿ’ ‘ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಯಾರೂ ಮೊಬೈಲ್‌ಗಳನ್ನು ಖರೀದಿಸಬಾರದು. ಅತಿ ಕಡಿಮೆ ಬೆಲೆಯ ಶೇ 99ರಷ್ಟು ಮೊಬೈಲ್‌ಗಳು ಕಳವು ಅಥವಾ ಕಳೆದುಕೊಂಡ ಮೊಬೈಲ್‌ಗಳೇ ಆಗಿರುತ್ತವೆ. ದಯವಿಟ್ಟು ಅವುಗಳನ್ನು ಬಳಸಬಾರದು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಎಚ್ಚರಿಕೆ ನೀಡಿದರು. ‘ಕದ್ದ ಸ್ವತ್ತು ಮರಳಿ ಪಡೆಯುವ ಕಾಯ್ದೆ ಪ್ರಕಾರ ದರೋಡೆ ಕಳ್ಳತನದ ವಸ್ತುಗಳನ್ನು ಪೊಲೀಸರ ಮುಂದೆ ಹಾಜರಿಪಡಿಸಬೇಕು. ಹಸ್ತಾಂತರಕ್ಕೆ ಹಿಂಜರಿದರೆ ಮತ್ತು ನಿರಂತರವಾಗಿ ಕದ್ದ ವಸ್ತುಗಳನ್ನು ಖರೀದಿಸಿದ್ದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.