ಬೆಂಗಳೂರು: ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ವತಿಯಿಂದ ಇದೇ 12ರಂದು ಕಲಬುರಗಿಯಲ್ಲಿ ನಡೆಸಿದ ಉದ್ಯೋಗ ಮೇಳದಲ್ಲಿ ಒಟ್ಟು 2,240 ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಭಾನುವಾರ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಬಿ.ಟೆಕ್. ಮತ್ತು ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಒಟ್ಟು 8,670 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು, ಸಂದರ್ಶನವನ್ನು ಎದುರಿಸಿದ್ದರು’ ಎಂದಿದ್ದಾರೆ.
‘ಮೇಳದಲ್ಲಿ ಒಟ್ಟು 83 ಕಂಪನಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದವು. ಅಂತಿಮವಾಗಿ ಉದ್ಯೋಗ ದೊರಕಿಸಿಕೊಂಡಿರುವ ಅಭ್ಯರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯುಳ್ಳ 382, ಪಿಯುಸಿ ಮಟ್ಟದ 342, ಐಟಿಐ ವಿದ್ಯಾರ್ಹತೆಯುಳ್ಳ 520, ಡಿಪ್ಲೊಮಾ ಓದಿರುವ 343, ಪದವಿ ಓದಿರುವ 425, ಸ್ನಾತಕೋತ್ತರ ಶಿಕ್ಷಣ ಹೊಂದಿರುವ 72, ಬಿ.ಇ, ಬಿ.ಟೆಕ್ ಓದಿರುವ 133 ಮತ್ತು ಎಂ.ಟೆಕ್ ವಿದ್ಯಾಭ್ಯಾಸವುಳ್ಳ 23 ಮಂದಿ ಇದ್ದಾರೆ’ ಎಂದು ವಿವರಿಸಿದ್ದಾರೆ.
ಸಂದರ್ಶನವನ್ನು ಎದುರಿಸಿದ ಆಸಕ್ತರಲ್ಲಿ 298 ಅಭ್ಯರ್ಥಿಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆಲ್ಲ ಸೂಕ್ತ ಕೌಶಲ ತರಬೇತಿ ನೀಡಿ, ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುವುದು. ಇದಕ್ಕೆ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮೇಳದಲ್ಲಿ ಭಾಗವಹಿಸಿದ್ದ ಕಂಪನಿಗಳಲ್ಲಿ ಸಿಂಪ್ಲಿಫೈ3ಎಕ್ಸ್, ಬಾಶ್, ಟೊಯೊಟಾ ಕಿರ್ಲೋಸ್ಕರ್, ಬೈಜೂಸ್, ಎನ್.ಟಿ.ಟಿ.ಎಫ್., ಗ್ರೀಟ್ ಟೆಕ್ನಾಲಜೀಸ್, ಟೆಕ್ ವೈಸ್ ಐಟಿ ಸೊಲ್ಯೂಶನ್ಸ್, ಸಿನಾಪ್ಟೆಕ್ಸ್, ಗ್ರಾಮ ವಿಕಾಸ ಸೊಸೈಟಿ, ಸಾಯಿ ಫಾರ್ಮಿಕಲ್ಚರ್, ಹಿಮಾಲಯ ವೆಲ್ನೆಸ್ ಕಂಪನಿ, ಪ್ರಾಣ ಹೆಲ್ತ್ ಕೇರ್, ಯೂನಿಬಿಕ್, ಅಜೀಂ ಪ್ರೇಮ್‌ಜಿ ಫೌಂಡೇಶನ್, ಯೋನೆಕ್ಸ್ ಮುಂತಾದವು ಇದ್ದವು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.