ADVERTISEMENT

₹800 ಕೋಟಿ ಮೊತ್ತದ ನೀರಿನ ಯೋಜನೆ, ಮಾರ್ಚ್‌ ಅಂತ್ಯದಲ್ಲಿ ಟೆಂಡರ್‌ಗೆ ಸೂಚನೆ

24/7 ಯೋಜನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:02 IST
Last Updated 25 ಜನವರಿ 2019, 13:02 IST

ಕಲಬುರ್ಗಿ: ಕಲಬುರ್ಗಿ ನಗರದ ಎಲ್ಲ ವಾರ್ಡ್‌ಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ₹800 ಕೋಟಿ ಮೊತ್ತದ ಯೋಜನೆಗೆ ಮಾರ್ಚ್‌ ಅಂತ್ಯದೊಳಗಾಗಿ ಟೆಂಡರ್‌ ಕರೆಯುವಂತೆ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಸೂಚಿಸಿದರು.

ಗುರುವಾರ ಇಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ನಗರದ ಜನಸಂಖ್ಯೆ ಹೆಚ್ಚಳಕ್ಕೆಅನುಗುಣವಾಗಿ ಯೋಜನೆ ಇರಬೇಕು. ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಎಂಜಿನಿಯರ್ ದಿನೇಶ್ ಮಾತನಾಡಿ, ಬೆಣ್ಣೆತೊರಾ ಜಲಾಶಯದಿಂದ ಕಲಬುರ್ಗಿ ನಗರಕ್ಕೆ ನೀರು ಸರಬರಾಜು ಮಾಡುವ ಮಾರ್ಗ ಮಧ್ಯದ ಸೋರಿಕೆ ತಡೆಯುವ ಕೆಲಸ ಪ್ರಗತಿಯಲ್ಲಿದೆ. 6 ಕಿ.ಮೀ. ಪೈಪ್‌ಲೈನ್‌ ಮಾರ್ಚ್‌ ಅಂತ್ಯದ ವೇಳೆಗೆ ಬದಲಿಸಲಾಗುವುದು. ಇದರಿಂದ ನಿತ್ಯ 3 ಕೋಟಿ ಲೀಟರ್‌ನಷ್ಟು ಹೆಚ್ಚುವರಿ ನೀರು ಲಭ್ಯವಾಗಲಿದೆ’ ಎಂದರು.

ADVERTISEMENT

ಸದ್ಯ ನಗರದಲ್ಲಿ ಬೆಣ್ಣೆತೊರಾ ಜಲಾಶಯದಿಂದ ನೀರು ಸರಬರಾಜಾಗುವ ವಾರ್ಡ್‌ಗಳಿಗೆ 4-5 ದಿನಕ್ಕೊಂದು ಬಾರಿ ನೀರು ಪೂರೈಸಲಾಗುತ್ತಿದೆ. ಪೈಪ್‌ಲೈನ್‌ ಬದಲಿಸಿದ ನಂತರ ಏಪ್ರೀಲ್‌ ತಿಂಗಳಿನಿಂದ 3-4 ದಿನಗಳಿಗೊಮ್ಮೆ ನೀರು ಪೂರೈಸಬಹುದು. ಭೀಮಾ ನದಿಯಿಂದ ನೀರು ಸರಬರಾಜು ಆಗುವ ವಾರ್ಡ್‌ಗಳಿಗೆ 2–3 ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ ಎಂದು ಹೇಳಿದರು.

ಕಲಬುರ್ಗಿ ನಗರಕ್ಕೆ ಫೆಬ್ರುವರಿ ಅಂತ್ಯದ ವರೆಗೆ ಪೂರೈಸುವಷ್ಟು ನೀರು ಬೆಣ್ಣೆತೊರಾ, ಭೀಮಾ ನದಿಯಲ್ಲಿದೆ. ಮಾರ್ಚ್‌ ಮತ್ತು ಏಪ್ರೀಲ್‌ ತಿಂಗಳಿಗಾಗಿ ಭೀಮಾನದಿಗೆ ಕಲ್ಲೂರ್ ಬ್ಯಾರೇಜಿನಿಂದ ಹಾಗೂ ಬೆಣ್ಣೆತೊರಾಕ್ಕೆ ಗಂಡೋರಿ ನಾಲಾದಿಂದ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಕಲಬುರ್ಗಿ ನಗರದಲ್ಲಿ ಬೋರ್‌ವೆಲ್‌ ಕೊರೆಯುವ ಮತ್ತು ಫ್ಲಷಿಂಗ್ ಮಾಡುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ್ ಬಿ. ಪಾಟೀಲ, 2011ರ ಜನಗಣತಿಗೆ ಅನುಗುಣವಾಗಿ ಕಲಬುರ್ಗಿ ನಗರದಲ್ಲಿ 5.5 ಲಕ್ಷ ಜನಸಂಖ್ಯೆ ಇದೆ. 2031 ರ ವೇಳೆಗೆ 8.72 ಲಕ್ಷ ಜನಸಂಖ್ಯೆ ಇರುವ ಸಾಧ್ಯತೆ ಇದೆ. ಕಳೆದ ತಿಂಗಳು ವಿಶ್ವ ಬ್ಯಾಂಕ್ ಪ್ರತಿನಿಧಿಗಳ ತಂಡ ಭೇಟಿ ನೀಡಿ ಯೋಜನೆ ಪರಿಶೀಲಿಸಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಶಿವನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.