ADVERTISEMENT

‌‘ಓಂಕಾರ ಶೇರಿಕರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 12:19 IST
Last Updated 16 ಮಾರ್ಚ್ 2022, 12:19 IST
ಮಹಾಂತೇಶ ಕೌಲಗಿ
ಮಹಾಂತೇಶ ಕೌಲಗಿ   

ಕಲಬುರಗಿ: ಗೊಂಡ ಪರಿಶಿಷ್ಟ ಜಾತಿಯ ಸಿಂಧುತ್ವ ಪ್ರಮಾಣಪತ್ರ ಸಿಗದೇ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆ ಹುಮನಾಬಾದ್‌ನ ಚಾಲಕ ಕಂ ನಿರ್ವಾಹಕ ಓಂಕಾರ ಶೇರಿಕರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಜಿಲ್ಲಾ ಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕೌಲಗಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಕಲ್ಯಾಣ ಇಲಾಖೆಯಿಂದ ಗೊಂಡ, ಟೋಕರೆ ಕೋಳಿ, ತಳವಾರ, ಕಾಡು ಕುರುಬ, ಜೇನು ಕುರುಬ ಜಾತಿಗಳು ಸಿಂಧುತ್ವ ಪ್ರಮಾಣಪತ್ರ ಪಡೆಯಬೇಕೆಂದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಸಿಆರ್‌ಇ ಘಟಕ) ವರದಿ ಕಡ್ಡಾಯ ಎಂಬ ತಾರತಮ್ಯದಿಂದ ಕೂಡಿದ, ಅಸಂವಿಧಾನಿಕ ಆದೇಶವನ್ನು ಮಾಡಿತ್ತು. ಇದರ ವಿರುದ್ಧ ಜಿಲ್ಲಾ ಸಂಘವು ನಿರಂತರವಾಗಿ ಹೋರಾಟ ಮಾಡುತ್ತಿದೆ. ಓಂಕಾರ ಶೇರಿಕರ ಅವರ ಆತ್ಮಹತ್ಯೆಯ ಬಳಿಕ ಸುಳ್ಳು ವರದಿ ಕೊಟ್ಟು ಕಿರುಕುಳ ನೀಡುತ್ತಿರುವ ಸಿಆರ್‌ಇ ಸೆಲ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಪ್ರಕರಣದ ಗಂಭೀರತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಆರ್‌ಇ ಸೆಲ್ ಶಿಫಾರಸು ಇರಬೇಕು ಎಂಬ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ. ಸಿಆರ್‌ಇ ಸೆಲ್‌ ಬಳಿ ಇರುವ ಸಿಂಧುತ್ವ ಪ್ರಮಾಣಪತ್ರದ ಎಲ್ಲಾ ಅರ್ಜಿಗಳನ್ನು ಕಲಬುರಗಿ ಹಾಗೂ ಬೀದರ್ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ತೆಗೆದುಕೊಳ್ಳಬೇಕು. ಎಲ್ಲ ಅರ್ಜಿದಾರರಿಗೆ ಸಿಂಧುತ್ವ ಪ್ರಮಾಣಪತ್ರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಮರತೂರ, ದಲಿತ ಸಂಘರ್ಷ ಸಮಿತಿ ಸಂಚಾಲಕ ಭೀಮಶಾ ಖನ್ನಾ, ಕೋಲಿ ಸಮಾಜದ ಮುಖಂಡ ಶಿವು ಧಣಿ, ಕುರುಬ ಸಮಾಜದ ಮುಖಂಡ ನಿಂಗಪ್ಪ ಹೇರೂರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.