ಕಲಬುರಗಿ: ಸೌರ ಪಂಪ್‌ಸೆಟ್‌ಗಾಗಿ ಕುಸುಮ್ ಯೋಜನೆ ಅಡಿಯಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ) ವ್ಯಾಪ್ತಿಯಲ್ಲಿ 3,958 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜೆಸ್ಕಾಂ ತಿಳಿಸಿದೆ.
ಕುಸುಮ್ (ಬಿ) ಯೋಜನೆಯಡಿ ಜಾಲಮುಕ್ತ ಸೌರ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ 30ರಿಂದ 50ಕ್ಕೆ ಹೆಚ್ಚಿಸಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈವರೆಗೆ ರಾಜ್ಯದ 24 ಸಾವಿರ ರೈತರು ಸೌರ ಪಂಪ್‌ಸೆಟ್ ಪಡೆಯಲು ‘ಸೌರಮಿತ್ರ’ ವೆಬ್‌ಸೈಟ್, ಆ್ಯಪ್‌ನಲ್ಲಿ ನೋಂದಣಿ ಮಾಡಿದ್ದಾರೆ.
ಜೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯಿಂದ 1,495 ಅರ್ಜಿಗಳು ಬಂದಿದ್ದು, 293 ಫಲಾನುಭವಿಗಳು ಐಪಿ ಸೆಟ್ ಹೊಂದುವ ಮೂಲಕ ಅತಿ ಹೆಚ್ಚು ಅರ್ಜಿಗಳು ಮತ್ತು ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ 203 ಅರ್ಜಿಗಳ ಪೈಕಿ 5 ಫಲಾನುಭವಿಗಳು, ಬೀದರ್‌ನಲ್ಲಿ 416 ನೋಂದಾಯಿತರಲ್ಲಿ 30, ಕೊಪ್ಪಳ 438 ನೋಂದಣಿಯಲ್ಲಿ 4 ಐಪಿ ಸೆಟ್‌ಗಳು ರಾಯಚೂರು ಜಿಲ್ಲೆಯಲ್ಲಿ 768 ಅರ್ಜಿಗಳಲ್ಲಿ 67 ಫಲಾನುಭವಿಗಳು ಯಾದಗಿರಿ 423 ನೋಂದಣಿ ಪೈಕಿ 94 ಹಾಗೂ ವಿಜಯನಗರ 215 ಅರ್ಜಿಗಳಲ್ಲಿ 86 ಫಲಾನುಭವಿಗಳು ಐಪಿ ಸೆಟ್‌ಗಳನ್ನು ಹೊಂದಿದ್ದಾರೆ.
ರೈತರು ತಮ್ಮ ಜಮೀನಿನಲ್ಲಿ ಸೌರ ಚಾಲಿತ ಪಂಪ್‌ಸೆಟ್ ಅಳವಡಿಸಿಕೊಳ್ಳಬಹುದು. ಈ ಮೂಲಕ ಸಾಂಪ್ರದಾಯಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳವರೆಗೆ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್, ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಸೌರ ಪಂಪ್‌ಸೆಟ್ ಬಳಕೆಯಿಂದ 8 ಗಂಟೆಗಳವರೆಗೆ ಹಗಲಿನಲ್ಲಿ ವಿದ್ಯುತ್ ಪೂರೈಕೆಯಾಗಲಿದೆ.
ನೋಂದಣಿ ಹೇಗೆ?: ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು. ರೈತರ ನೋಂದಣಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ 080-22202100 ಅನ್ನು ಸ್ಥಾಪಿಸಲಾಗಿದೆ. ರೈತರನ್ನು ದಾರಿತಪ್ಪಿಸುವ ಲಿಂಕ್‌ಗಳು ಇದ್ದು, ರೈತರು ಗೊಂದಲ ಕಂಡರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಕುಸುಮ್ ಬಿ ಯೋಜನೆ ಅಡಿ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸಬ್ಸಿಡಿಗಳನ್ನು ನೀಡುತ್ತಿದೆ. ಎಲ್ಲ ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕುರವೀಂದ್ರ ಕರಲಿಂಗಣ್ಣವರ ವ್ಯವಸ್ಥಾಪಕ ನಿರ್ದೇಶಕ ಜೆಸ್ಕಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.