ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಬರುವ 499 ಪೈಕಿ 457 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
2019ರಲ್ಲಿ 478 ಅಂಗನವಾಡಿ ಕೇಂದ್ರಗಳಿದ್ದವು. ಮಕ್ಕಳ ಸಂಖ್ಯೆ ಹೆಚ್ಚಾದಂತೆ 2021ರಲ್ಲಿ ಮತ್ತೆ 10 ಕೇಂದ್ರಗಳು ಮಂಜೂರಾಗಿವೆ. ನಗರ ವ್ಯಾಪ್ತಿಯಲ್ಲಿ ಒಟ್ಟು 488 ಮುಖ್ಯ ಮತ್ತು 11 ಮಿನಿ ಅಂಗನವಾಡಿ ಕೇಂದ್ರಗಳು ಇವೆ. 41 ಮುಖ್ಯ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಮತ್ತು 447 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿವೆ.
1 ಮಿನಿ ಅಂಗನವಾಡಿ ಕೇಂದ್ರ ಸ್ವಂತ ಕಟ್ಟಡದಲ್ಲಿ, ಉಳಿದ 10 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮನಗೌಡ ಪರಗೊಂಡ ಅವರು ಕೋರಿದ ಅರ್ಜಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದ್ದಾರೆ.
ನಗರ ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಕಚೇರಿ ವ್ಯಾಪ್ತಿ ಯಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 499 ಅಂಗನವಾಡಿ ಕೇಂದ್ರಗಳಲ್ಲಿ 38,746 ಮಕ್ಕಳ ದಾಖಲಾತಿ ಇದೆ. 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯ, ಪೌಷ್ಟಿಕ ಮಟ್ಟ ವೃದ್ಧಿಸುವುದು ಈ ಕೇಂದ್ರಗಳ ಉದ್ದೇಶ. ನಗರದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಬದಲು ನರ್ಸರಿ ಶಾಲೆಗಳಿಗೆ ಕಳುಹಿಸುತ್ತಾರೆ.
‘ಸರ್ಕಾರ ಒಂದು ಅಂಗನವಾಡಿ ಕೇಂದ್ರಕ್ಕೆ ₹ 4,000 ಬಾಡಿಗೆ ನೀಡುತ್ತದೆ. ಆದರೆ, ಈ ಮೊತ್ತದಲ್ಲಿ ನಗರಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ಸಿಗುವುದಿಲ್ಲ. ಇದರಿಂದ ಮಕ್ಕಳ ಬಾಲ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ನಗರದ ಜಗತ್ ಬಡಾವಣೆಯ ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಂಗನವಾಡಿ ಕೇಂದ್ರಗಳಿಗೆ ಕೂಲಿಕಾರ್ಮಿಕರು, ಬಡವರು ಮತ್ತು ಜನಸಾಮಾನ್ಯರ ಮಕ್ಕಳು ಹೆಚ್ಚು ಹೋಗುತ್ತಾರೆ. ಈ ಕೇಂದ್ರಗಳಲ್ಲೇ ಬಡಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಆಗುತ್ತದೆ. ಗುಣಮಟ್ಟದ ಕಟ್ಟಡಗಳೂ ಮುಖ್ಯ. ಸರ್ಕಾರವು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳ ಜೊತೆಗೆ ಸೌಲಭ್ಯ ಒದಗಿಸಬೇಕು’ ಎಂದು ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ ಒತ್ತಾಯಿಸಿದರು.
‘ನಗರ ವ್ಯಾಪ್ತಿಯಲ್ಲಿ ಶೇ 91ರಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ರಾಜ್ಯ ಸರ್ಕಾರ ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕೂಡ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿಲ್ಲ’ ಎಂದು ದೂರಿದರು.
ನಗರ ಪ್ರದೇಶದ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವುದಿಲ್ಲ. ಹೀಗಾಗಿ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬಾಡಿಗೆ ಕಟ್ಟಡಗಳಿಂದ ಭ್ರಷ್ಟಾಚಾರಕ್ಕೆ ಅವಕಾಶ ಆಗುತ್ತದೆ.
-ಭೀಮನಗೌಡ ಪರಗೊಂಡ, ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ
ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಕೋಣೆ, ದಾಸ್ತಾನು, ಮಕ್ಕಳ ಆಟ–ಪಾಠದ ಕೋಣೆ ಮತ್ತು ಶೌಚಾಲಯದ ವ್ಯವಸ್ಥೆ ಇರಬೇಕು. ಆದರೆ, ಬಾಡಿಗೆ ಕಟ್ಟಡಗಳಲ್ಲಿ ಇದು ಸಾಧ್ಯವಿಲ್ಲ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗುಣಮಟ್ಟದ ಸರ್ಕಾರಿ ಕಟ್ಟಡಗಳು ಅಗತ್ಯವಾಗಿವೆ.
-ಗೌರಮ್ಮ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ
39 ಹೊಸ ಕಟ್ಟಡ ಮಂಜೂರು
‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ವತಿಯಿಂದ 39 ಹೊಸ ಅಂಗನವಾಡಿ ಕಟ್ಟಡ ಮಂಜೂರಾಗಿವೆ. ಟೆಂಡರ್ ಹಂತದಲ್ಲಿದ್ದು, ಒಂದು ವರ್ಷದಲ್ಲಿ ನಿರ್ಮಾಣ ಆಗಲಿವೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ ಮಾಹಿತಿ ನೀಡಿದರು.
‘ಶಾಸಕರು, ಪಾಲಿಕೆ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಮುತುವರ್ಜಿಯಿಂದ ಎರಡೇ ತಿಂಗಳಲ್ಲಿ ಯಾವುದೇ ತಕರಾರು ಇಲ್ಲದೆ ಈ 39 ಅಂಗನವಾಡಿಗಳಿಗೆ ನಿವೇಶನಗಳನ್ನು ಗುರುತಿಸಲಾಗಿದೆ. ಇನ್ನಷ್ಟು ಅಂಗನವಾಡಿ ಕೇಂದ್ರಗಳು ಮಂಜೂರಾಗುತ್ತವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.