ADVERTISEMENT

5, 600 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:31 IST
Last Updated 24 ನವೆಂಬರ್ 2024, 15:31 IST
ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ (ಎನ್) ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿದರು
ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ (ಎನ್) ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿದರು   

ಚಿಂಚೋಳಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆಗಳ 5,600 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ತಾಲ್ಲೂಕಿನ ವೆಂಕಟಾಪುರ (ಎನ್) ಗ್ರಾಮದಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ವಾದ್ಯಮೇಳದೊಂದಿಗೆ ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ADVERTISEMENT

‘ರಾಜ್ಯ ಸರ್ಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದೆ. ಇದಕ್ಕೆ ಉಪ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದ ಅವರು, ರಾಜ್ಯದ ಮತದಾರರು ಬಿಜೆಪಿ, ಜೆಡಿಎಸ್‌ನ ಸುಳ್ಳು ಆರೋಪಗಳಿಗೆ ಕಪಾಳ ಮೋಕ್ಷ ಮಾಡಿದ್ದಾರೆ’ ಎಂದು ಕುಟುಕಿದರು.

ತಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಸಮರ್ಥಿಸಿದ ಸಚಿವರು, ‘ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಬಡವರ ಕಲ್ಯಾಣಕ್ಕಾಗಿ ಬೊಕ್ಕಸದಿಂದ ₹ 56 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಉತ್ತಮ ಆಡಳಿತದ ಜತೆಗೆ ಅಭಿವೃದ್ಧಿಗೂ ಒತ್ತು ನೀಡಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತಿವರ್ಷ ನೀಡುತ್ತಿರುವ ದಾಖಲೆಯ ₹ 5 ಸಾವಿರ ಕೋಟಿ ಅನುದಾನವೇ ಸಾಕ್ಷಿ’ ಎಂದರು.

‘ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ನೀವು ಹೆದರಬೇಕಿಲ್ಲ. ನಾನು ನಿಮ್ಮ ಜತೆಗಿದ್ದೇನೆ. ನಿಮ್ಮ ಊರಿನ ಜನರ ಸಾರ್ವಜನಿಕ ಸಮಸ್ಯೆ ನಿವಾರಿಸುವುದರ ಜತೆಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ’ ಎಂದರು.

ಗ್ರಾ.ಪಂ. ಅಧ್ಯಕ್ಷೆ ಲಕ್ಷಮ್ಮ ಶ್ರೀಶೈಲ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರಡ್ಡಿ ಪಾಟೀಲ, ರೇವಣಸಿದ್ದಪ್ಪ ಅಣಕಲ್, ನಿಡಗುಂದಾ ಗ್ರಾ.ಪಂ. ಉಪಾಧ್ಯಕ್ಷ ಸಿದ್ಧರಾಮೇಶ ನಿಷ್ಠಿ, ಆನಂದರಡ್ಡಿ ಚತ್ರಸಾಲ, ವಿಶ್ವನಾಥರಡ್ಡಿ ಪಾಟೀಲ, ಬಿಚ್ಚರಡ್ಡಿ ಪಾಟೀಲ, ವೆಂಕಟರಡ್ಡಿ ಪಾಟೀಲ, ಸೋಮನಾಥರಡ್ಡಿ ವಂಗಾ, ಲಿಂಗಶೆಟ್ಟಿ ತಟ್ಟೆಪಳ್ಳಿ, ಜಗದೀಶ ಪಾಟೀಲ ಶಿರೋಳ್ಳಿ, ಅರವಿಂದರಡ್ಡಿ, ಶ್ರೀನಿವಾಸರಡ್ಡಿ, ಅಶೋಕರಡ್ಡಿ ಕೆರೋಳ್ಳಿ, ಸುಭಾನರಡ್ಡಿ ಶೇರಿಕಾರ, ನಾರಾಯಣ, ಜಗನ್ನಾಥರಡ್ಡಿ ರೋಂಪಳ್ಳಿ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.