ಕಲಬುರಗಿ: ಹಗಲು–ರಾತ್ರಿ ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲು ಪರದಾಡುವ ಅನ್ನದಾತರ ಸಂಕಟ ಹೆಚ್ಚುತ್ತಿದೆ. ವಿಷಜಂತುಗಳೂ ರೈತ ಕುಟುಂಬದ ಸಂಕಷ್ಟಕ್ಕೆ ಕಾರಣವಾಗುತ್ತಿವೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿದ ವೇಳೆ ವಿಷಜಂತು ಕಚ್ಚಿ ಮೃತಪಡುತ್ತಿರುವ ರೈತರು ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಮನೆಗೆ ಆಧಾರವಾದವರನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿವೆ.
8,65,855 ಹೆಕ್ಟೇರ್ ಮುಂಗಾರು ಹಾಗೂ 2,17,635 ಹೆಕ್ಟೇರ್ ಹಿಂಗಾರು ಬಿತ್ತನೆ ಕ್ಷೇತ್ರ ಹೊಂದಿರುವ ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 66 ರೈತರು, ಕೃಷಿ ಕಾರ್ಮಿಕರು ಆಕಸ್ಮಿಕವಾಗಿ ಹಾವು ಕಚ್ಚಿ ಪ್ರಾಣ ಕಳೆದುಕೊಂಡಿದ್ದಾರೆ. 2023–24ರಲ್ಲಿ ಹಾವು ಕಚ್ಚಿ 54 ಜನ, ಪ್ರಸಕ್ತ ಸಾಲಿನಲ್ಲಿ 12 ಜನ ಸಾವನ್ನಪ್ಪಿರುವುದು ವರದಿಯಾಗಿದೆ.
ಚಿತ್ತಾಪುರ ತಾಲ್ಲೂಕಿನಲ್ಲಿ ಹೆಚ್ಚು ಜನ, ಅಂದರೆ 11 ಮಂದಿ ಆಕಸ್ಮಿಕ ಅವಘಡಗಳಿಗೆ ಬಲಿಯಾಗಿದ್ದಾರೆ. ಜೇವರ್ಗಿ 8, ಆಳಂದ, ಅಫಜಲಪುರ ತಲಾ 7, ಸೇಡಂ ಹಾಗೂ ಚಿಂಚೋಳಿ ತಲಾ 6, ಯಡ್ರಾಮಿ 5, ಕಲಬುರಗಿ 5, ಶಹಾಬಾದ್ ಮತ್ತು ಕಮಲಾಪುರ ತಲಾ 4 ಹಾಗೂ ಕಾಳಗಿ ತಾಲ್ಲೂಕಿನಲ್ಲಿ ಮೂವರು ಮೃತಪಟ್ಟಿದ್ದಾರೆ.
ಮೃತಪಟ್ಟವರ ವಿವರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯೊಂದಿಗೆ ಕೃಷಿ ಇಲಾಖೆಯು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುತ್ತದೆ. ಜಿಲ್ಲಾಧಿಕಾರಿ ಕಚೇರಿಯ ಪಿಂಚಣಿ ವಿಭಾಗ ತಲಾ ₹1 ಲಕ್ಷ ಪರಿಹಾರವನ್ನು ಮೃತರ ಅವಲಂಬಿತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
ಪರಿಹಾರಕ್ಕೆ ವರದಿ ಕಡ್ಡಾಯ: ಹಾವು ಕಚ್ಚಿ ಮೃತಪಟ್ಟ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ. ಬಳಿಕ ಯುಡಿಆರ್ ದಾಖಲಾಗುತ್ತದೆ. ಸಂಬಂಧಿಸಿದ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಮಹಜರು ಮಾಡುತ್ತಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಾವು ಕಚ್ಚಿದ್ದು ದೃಢಪಟ್ಟಿದ್ದರೆ ಆ ವರದಿಯನ್ನು ಎಸಿ ನೇತೃತ್ವದ ಸಮಿತಿಗೆ ಕಳುಹಿಸಲಾಗುತ್ತದೆ. ಉಪವಿಭಾಗಾಧಿಕಾರಿ ಪರಿಹಾರಕ್ಕೆ ಅನುಮೋದನೆ ನೀಡುತ್ತಾರೆ.
‘ರಾತ್ರಿ ಕರೆಂಟ್ ಕಾರಣ’
‘ಸರ್ಕಾರ ರಾತ್ರಿ ತ್ರಿ–ಫೇಸ್ ವಿದ್ಯುತ್ ನೀಡುತ್ತದೆ. ಕಾರಣ ಬೆಳೆ ಉಳಿಸಿಕೊಳ್ಳಲು ರಾತ್ರಿ ಸಂದರ್ಭದಲ್ಲಿ ಹೊಲಕ್ಕೆ ತೆರಳಿ ನೀರು ಹಾಯಿಸುವುದು ಅನಿವಾರ್ಯ. ಕತ್ತಲೆಯಲ್ಲಿ ವಿಷಜಂತುಗಳು ಇರುವುದು ಕಾಣಿಸುವುದಿಲ್ಲ. ಆಕಸ್ಮಿಕವಾಗಿ ಅವಘಡಗಳು ಸಂಭವಿಸುತ್ತವೆ. ಆದ್ದರಿಂದ ಸರ್ಕಾರ ಹಗಲಿನಲ್ಲಿಯೇ ತ್ರಿ–ಫೇಸ್ ವಿದ್ಯುತ್ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರಪ್ಪ ಥಂಬೆ ಆಗ್ರಹಿಸುತ್ತಾರೆ.
‘ರೈತರು ಎಚ್ಚರಿಕೆ ವಹಿಸಲಿ’
‘ರಾತ್ರಿ ವೇಳೆ ಬೆಳೆಗಳಿಗೆ ನೀರು ಹಾಯಿಸಲು ತೆರಳುವ ರೈತರು ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಟಾರ್ಚ್‌ಗಳನ್ನು ತೆಗೆದುಕೊಂಡು ಹೋಗಬೇಕು. ಬೂಟು ಧರಿಸಬೇಕು. ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಜಾಗೃತರಾಗಿದ್ದರೆ ಹಾವು ಕಡಿತದಿಂದ ತಪ್ಪಿಸಿಕೊಳ್ಳಬಹುದು’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮನವಿ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.