ADVERTISEMENT

69 ಕಳವು ಪ್ರಕರಣ ಪತ್ತೆ: ₹56.40 ಲಕ್ಷ ಮೌಲ್ಯದ ಸ್ವತ್ತು ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 4:56 IST
Last Updated 19 ನವೆಂಬರ್ 2024, 4:56 IST
ಕಲಬುರಗಿಯಲ್ಲಿ ಸೋಮವಾರ ವಾರಸುದಾರರಿಗೆ ಚಿನ್ನದ ಸರವನ್ನು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಹಸ್ತಾಂತರ ಮಾಡಿದರು. ಎಎಸ್‌ಪಿ ಶ್ರೀನಿಧಿ, ಡಿವೈಎಸ್ಪಿ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಸೋಮವಾರ ವಾರಸುದಾರರಿಗೆ ಚಿನ್ನದ ಸರವನ್ನು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಹಸ್ತಾಂತರ ಮಾಡಿದರು. ಎಎಸ್‌ಪಿ ಶ್ರೀನಿಧಿ, ಡಿವೈಎಸ್ಪಿ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು   

ಕಲಬುರಗಿ: ಜಿಲ್ಲೆಯ ವ್ಯಾಪ್ತಿಯಲ್ಲಿ ಸುಲಿಗೆ, ಸರಗಳ್ಳತನ, ದರೋಡೆ, ವಾಹನ, ಮನೆ ಕಳವು ಪ್ರಕರಣ ಸೇರಿ ಒಟ್ಟು 176 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 69 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ಪರೇಡ್‌ ಮೈದಾನದಲ್ಲಿ ಸೋಮವಾರ ಪ್ರಾಪರ್ಟಿ ರಿಟರ್ನ್‌ ಪರೇಡ್ ಕಾರ್ಯಕ್ರಮ ನಡೆಯಿತು. 29 ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ನಗದು, ಚಿನ್ನ–ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನಗಳು, ಕೃಷಿ ಪಂಪ್‌ಸೆಟ್, ಬುಲೆರೊ, ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹56.40 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು ಹಸ್ತಾಂತರಿಸಿದರು.

ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ನಿಂಬರ್ಗಾ, ಕಮಲಾಪುರ, ಜೇವರ್ಗಿ, ಚಿಂಚೋಳಿ, ಶಹಾಬಾದ್, ಮಾದನಹಿಪ್ಪರಗಾ, ಆಳಂದ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 176 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 69 ಅಪರಾಧ ಪ್ರಕರಣಗಳನ್ನು ಭೇದಿಸಿ, ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಕಳವು ಮಾಡಿದ್ದ ಸ್ವತ್ತುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ’ ಎಂದರು.

ADVERTISEMENT

‘29 ಪ್ರಕರಣಗಳಿಗೆ ಸಂಬಂಧಿಸಿದಂತೆ ₹4.23 ಲಕ್ಷ ನಗದು, ₹10.58 ಲಕ್ಷ ಮೌಲ್ಯದ ಬಂಗಾರ, ₹36,786 ಮೌಲ್ಯದ 85 ಗ್ರಾಂ. ಬೆಳ್ಳಿ, ₹33.20 ಲಕ್ಷ ಮೌಲ್ಯದ 58 ದ್ವಿಚಕ್ರ ವಾಹನಗಳು, ₹92 ಸಾವಿರ ಮೌಲ್ಯದ ಮೊಬೈಲ್‌ಗಳು, ₹60 ಸಾವಿರ ಮೌಲ್ಯದ ಎರಡು ಕೃಷಿ ಪಂಪ್‌ಸೆಟ್, ₹4.50 ಲಕ್ಷ ಮೌಲ್ಯದ ಬುಲೆರೊ ಹಾಗೂ ₹2 ಲಕ್ಷ ಮೌಲ್ಯದ ಆಟೊ ಸೇರಿ ₹56.40 ಮೌಲ್ಯದ ವಸ್ತುಗಳನ್ನು ಸೋಮವಾರ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಭೇದಿಸಲಾದ 69 ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು ₹86.30 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ₹6.25 ಲಕ್ಷ ನಗದು, ₹21.91 ಲಕ್ಷ ಮೌಲ್ಯದ 388 ಗ್ರಾಂ. ಚಿನ್ನ, ₹59 ಸಾವಿರ ಮೌಲ್ಯದ 388 ಗ್ರಾಂ. ಬೆಳ್ಳಿ ಒಡವೆ, ₹49.52 ಲಕ್ಷ ಮೌಲ್ಯದ 88 ದ್ವಿಚಕ್ರ ವಾಹನಗಳೂ ಸೇರಿವೆ’ ಎಂದರು.

ಕಳೆದುಕೊಂಡ ವಸ್ತುಗಳನ್ನು ಮತ್ತೆ ಪಡೆದ ವಾರಸುದಾರರು ಸಂತಸ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅಭಿನಂದಿಸಿ, ಪ್ರಶಂಸೆ ಪತ್ರಗಳನ್ನು ನೀಡಿದರು.

ಎಎಸ್‌ಪಿಗಳಾದ ಬಿಂದುಮಣಿ, ಶ್ರೀನಿಧಿ, ಡಿವೈಎಸ್ಪಿ ಶಂಕರಗೌಡ ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

‘ಕಾರು ಬೆನ್ನತ್ತಿ ಆರೋಪಿ ಬಂಧನ’
ಕುಸನೂರು ರಸ್ತೆಯಲ್ಲಿ ನವೆಂಬರ್ ತಡರಾತ್ರಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕ ವೇಗವಾಗಿ ಹೋಗುತ್ತಿದ್ದರು. ಭಂಕೂರ ಕ್ರಾಸ್‌ನಲ್ಲಿ ನಿಂತಿದ್ದ ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಾರು ಬೆನ್ನತ್ತಿ ಆರೋಪಿಯನ್ನು ಬಂಧಿಸುವಲ್ಲಿ ನೆರವಾಗಿದ್ದಾರೆ’ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ‘ವೇಗವಾಗಿ ಬರುತ್ತಿದ್ದ ಕಾರು ಚಾಲಕನಿಗೆ ಭಂಕೂರ ಕ್ರಾಸ್‌ನಲ್ಲಿ ಕಾಳಗಿ ಠಾಣೆಯ ಎಎಸ್‌ಐ ಎಫ್‌.ಎ ಖಾನ್ ಹಾಗೂ ಕಾನ್‌ಸ್ಟೆಬಲ್ ಶಿವಾಜಿ ಅವರು ನಿಲ್ಲುವಂತೆ ಕೈ ಮಾಡಿದರು. ಕೈ ಸನ್ನೆಯನ್ನು ಲೆಕ್ಕಿಸದೆ ಅದೇ ವೇಗದಲ್ಲಿ ಕಾರು ಚಲಾಯಿಸಿದನು. ಅನುಮಾನದಿಂದ ಕಾರು ಚೇಸ್ ಮಾಡಿ ವಾಡಿ ಸಮೀಪದ ಶಂಕರವಾಡಿ ರಸ್ತೆಯಲ್ಲಿ ಕಾರು ಚಾಲಕನನ್ನು ಹಿಡಿದರು. ತಕ್ಷಣವೇ ಕಂಟ್ರೋಲ್‌ ರೂಂಗೆ ಕರೆ ಮಾಡಿದಾಗ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗೊತ್ತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.