ಅಫಜಲಪುರ: ‘ನಮ್ಮ ಭಾಗದ ಜನರಿಗೆ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ. ಸಾಹಿತ್ಯ ಬೆಳೆದಾಗ ಮಾತ್ರ ಸಂಸ್ಕೃತಿಯ ಬೆಳವಣಿಗೆಯಾಗಲಿದೆ. ನಮ್ಮಿಂದ ಹರಿದು ಹಂಚಿ ಹೋಗಿರುವ ನಮ್ಮ ಪ್ರದೇಶಗಳಾದ ಜತ್ತ, ದಕ್ಷಿಣ ಸೋಲಾಪೂರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾಗಬೇಕು. ಕನ್ನಡ ಜಲ ನೆಲ ಭಾಷೆ ರಕ್ಷಣೆ, ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಅದಕ್ಕಾಗಿ ಹೋರಾಟ ಮಾಡಲು ಸಿದ್ಧರಾಗಬೇಕು’ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪಟ್ಟಣದ ಮಳೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಮೊಬೈಲ್ ಹಿಂದೆ ಬಿದ್ದು ಪುಸ್ತಕ ಬಿಟ್ಟರೆ ಸಾಹಿತ್ಯ ಕ್ಷೇತ್ರಕ್ಕೆ ಪೆಟ್ಟು ಬೀಳಲಿದೆ. ವ್ಯವಹಾರಕ್ಕಾಗಿ ಬೇರೆ ಭಾಷೆಯನ್ನು ಬಳಸಿ ಆದರೆ, ನಿತ್ಯ ಜೀವನದಲ್ಲಿ ಅಭಿಮಾನದಿಂದ ಕನ್ನಡವನ್ನು ಬಳಸಬೇಕು. ನಮ್ಮ ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮಲ್ಲಿನ ಯುವ ಸಾಹಿತಿಗಳು ಬರೆದ ಪುಸ್ತಕಗಳನ್ನು ಖರೀದಿಸಿ ಸಾಹಿತಿಗಳಿಗೆ ಪ್ರೋತ್ಸಹಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
‘ಬಚಾವತ್ ಆಯೋಗದ ವರದಿಯಂತೆ ಭೀಮಾ ನದಿಯ ನಮ್ಮ ಪಾಲಿನ ನೀರನ್ನು ಕೊಡದೆ ಮಹಾರಾಷ್ಟ್ರ ಮೊಂಡುತನ ಮಾಡಿ ಅಕ್ರಮವಾಗಿ ನೀರು ಬಳಸುತ್ತಿದೆ. ನಮ್ಮ ಪಾಲಿನ ನೀರಿನ ಹಕ್ಕನ್ನು ಪಡೆಯಲು ನಾವು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನಮ್ಮಿಂದ ಒಡೆದು ಹೋದ ಕನ್ನಡ ಪ್ರದೇಶಗಳು ಪುನಃ ಸೇರಬೇಕು’ ಎಂದರು.
ಕಸಾಪ ಅಧ್ಯಕ್ಷ ಪ್ರಭು ಫುಲಾರಿ ಮಾತನಾಡಿ, ‘ನಮ್ಮ ನೆಲ, ಜಲ, ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಿರಬೇಕು. ಏಕತೆ, ಸಹೋದರತ್ವ ಹಾಗೂ ಸಾಮಾಜಿಕ ಸಾಮಾರಸ್ಯ ಉತ್ತೇಜಿಸುವ ಮೂಲಕ ನಮ್ಮ ಪರಂಪರೆಯನ್ನು ಶ್ರೀಮಂತಗೊಳಿಸೋಣ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಹಣಮಂತರಾವ ದೊಡ್ಡಮನಿ, ವಿಜ್ಞಾನಿ ಎಂ.ಎಸ್.ಜೋಗದ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಡಾ.ಶರಣಬಸಪ್ಪ ದಾಮಾ ಪ್ರಮುಖರಾದ ದೇವಯ್ಯ ಗುತ್ತೇದಾರ, ಭೀಮಾಶಂಕರ ಹೊನ್ನಕೇರಿ, ಶಿವಾನಂದ ಗಾಡಿಸಾಹುಕಾರ, ದಯಾನಂದ ದೊಡ್ಡಮನಿ, ಬಸಣ್ಣ ಗುಣಾರಿ, ನಾಗೇಶ ಕೊಳ್ಳಿ, ಡಾ.ಸಂಗಣ್ಣ ಸಿಂಗೆ, ಶಂಕರ ಮ್ಯಾಕೇರಿ, ಶಂಕರರಾವ ಹುಲ್ಲೂರ, ವಿಶ್ವನಾಥ ಕಾರ್ನಾಡ್, ಶರಣಬಸಪ್ಪ ಅವಟೆ, ಡಾ.ಜಾಫರ ಪಟೇಲ್, ಸುರೇಶ ದೇಶಪಾಂಡೆ, ಕೆ.ಜಿ.ಪೂಜಾರಿ, ಪ್ರಭು ಪಟ್ಟಣಕರ, ರಾಜು ಆರೇಕರ, ಮರೆಪ್ಪ, ರವಿ ಗೌರ, ಗೌತಮ ಸಕ್ಕರಗಿ, ಪ್ರಭಾವತಿ ಮೇತ್ರಿ, ಬಾಹುಬಲಿ ಮಾಲಗತ್ತಿ, ಅರ್ಚನಾ ಜೈನ್, ಭೀಮಾಶಂಕರ ಝಳಕಿ ಇತರರಿದ್ದರು.
ಗೋಷ್ಠಿ: ‘ತಾಲ್ಲೂಕಿನ ಕಲೆ ಮತ್ತು ಸಂಸ್ಕೃತಿಕ ಪರಂಪರೆ’ ಕುರಿತು ವಿಚಾರ ಗೋಷ್ಠಿ, ಕವಿಗೋಷ್ಠಿ ನಡೆಯಿತು.
ಗೋಷ್ಠಿಯಲ್ಲಿ ಪಾರು ಜಮಾದ ಬಾಪುಗೌಡ ಬಿರಾದಾರ ಹಾಗೂ ಕವಿಗೋಷ್ಠಿಯಲ್ಲಿ ಶಂಕರ ಹುಲ್ಲೂರು, ಡಾ. ಜಾಫರ್ ಪಟೇಲ್, ಎ.ಬಿ.ಪಟೇಲ್ ಸೊನ್ನ ಮತ್ತಿತರರು ಭಾಗವಹಿಸಿದ್ದರು.
ಜಿಲ್ಲಾಮಟ್ಟದ ತಾಲ್ಲೂಕಿನ ಹಿರಿಯ ಪತ್ರಕರ್ತರಿಗೆ ಹಾಗೂ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ವಲಯ ಕಸಾಪ ಅಧ್ಯಕ್ಷರಾದ ಪಟ್ಟಣದ ಅರ್ಜುನ ಜೈನ, ಮಣ್ಣೂರಿನ ಚಂದ್ರಶೇಖರ್ ಹೊಸೂರ, ಮಾಶಾಳದ ಭಾಗ್ಯಶಿಲ್ಪ ಅಲೆಗಾವ್, ಕರಜಿಗಿಯ ದೊಳಪ್ಪ ಈಶ್ವರಗೊಂಡ, ಚೌಡಾಪುರದ ಭೀಮಶಂಕರ ಮೇಳಕುಂದಿ, ಗೊಬ್ಬೂರು ವಲಯದ ಮಹದೇವ ವಿಶ್ವಕರ್ಮ, ಅತನೂರಿನ ಶಂಕರ್ ಶೆಟ್ಟಿ ಇದ್ದರು.
ಇದಕ್ಕೂ ಮುನ್ನ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಮುಖಂಡರಾದ ದಯಾನಂದ ದೊಡ್ಡಮನಿ, ಲಕ್ಷ್ಮಿ ಪುತ್ರ ಜಮಾದಾರ ನೇತೃತ್ವ ವಹಿಸಿದ್ದರು.
ಕೃತಿ ಲೋಕಾರ್ಪಣೆ: ಸಾಹಿತಿ ಸಂಗಣ್ಣ ಸಿಂಗೆ ವಿರಚಿತ ಹಾಗೂ ಪ್ರಭಾವತಿ ಮೆತ್ರೆ ಅವರು ವಿರಚಿತ ಸೂರ್ಯೋದಯ ಮಾತು ಬಿಡಿಗವನಗಳು, ಬಸವರಾಜ ಹೂಗಾರ ಕೊರಳಿ ಅವರು ವಿರಚಿತ ನಾಡ ಅಭಿಮಾನ ಗೀತೆಗಳು ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳಾದ ಏಕೆ ರಾಮೇಶ್ವರ್ ಅವರು ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.