ADVERTISEMENT

ಕಲಬುರಗಿ: ಪಾಲಿಕೆ ಸಹಾಯವಾಣಿಗೆ ದಿನಕ್ಕೆ 80 ದೂರು

ಭೀಮಣ್ಣ ಬಾಲಯ್ಯ
Published 11 ಜುಲೈ 2024, 3:18 IST
Last Updated 11 ಜುಲೈ 2024, 3:18 IST
ಕಲಬುರ್ಗಿ ಮಹಾನಗರ ಪಾಲಿಕೆ ಕಟ್ಟಡ
ಕಲಬುರ್ಗಿ ಮಹಾನಗರ ಪಾಲಿಕೆ ಕಟ್ಟಡ   

ಕಲಬುರಗಿ: ಜನರ ಕುಂದುಕೊರತೆಯನ್ನು ಆಲಿಸಿ ಅವುಗಳನ್ನು ಪರಿಹರಿಸಲು ಮಹಾನಗರ ಪಾಲಿಕೆ ಆರಂಭಿಸಿರುವ ಸಹಾಯವಾಣಿ 18004251364ಗೆ ಪ್ರತಿದಿನ 80 ದೂರುಗಳು ಬರುತ್ತಿವೆ. ಕಳೆದ ವಾರ ಸರಾಸರಿ 600 ಜನರು ಕರೆ ಮಾಡಿದ್ದಾರೆ.

ಸಹಾಯವಾಣಿ ಕೇಂದ್ರದ ಸಿಬ್ಬಂದಿ ಜನರ ಸಮಸ್ಯೆ ಆಲಿಸಿ ಸಂಬಂಧಿಸಿದ ವಿಭಾಗದವರ ಗಮನಕ್ಕೆ ತರುತ್ತಾರೆ. ಸಮಸ್ಯೆಗಳ ಸ್ವರೂಪದ ಆಧಾರದ ಮೇಲೆ ಆದ್ಯತೆ ಮೇರೆಗೆ ಅಧಿಕಾರಿಗಳು ಸಿಬ್ಬಂದಿ ಸಹಾಯದಿಂದ ಅವುಗಳನ್ನು ಪರಿಹರಿಸುತ್ತಾರೆ.

ಯಾವ್ಯಾವ ದೂರು: ಸಾಮಾನ್ಯವಾಗಿ ಚರಂಡಿ ಕಟ್ಟಿರುವುದು, ಕಸ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ, ಪೈಪ್‌ಲೈನ್‌ನಲ್ಲಿ ಸೋರಿಕೆ, ಒಳ ರಸ್ತೆ ಹದಗೆಟ್ಟಿರುವುದು, ಉದ್ಯಾನದ ಸಮಸ್ಯೆ, ಪರಿಸರ ಮಾಲಿನ್ಯ, ಯುಜಿಡಿ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ನಾಯಿ, ಹಂದಿ ಮತ್ತು ದನಗಳ ಹಾವಳಿ, ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದು ಹಾಗೂ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ದೂರು ನೀಡಲು ಜನರು ಕರೆ ಮಾಡುತ್ತಾರೆ.

ADVERTISEMENT

ಯುಜಿಡಿ ದೂರಿನ ಪ್ರಮಾಣ ಹೆಚ್ಚಳ: ನಗರದಲ್ಲಿ ಮೇಲಿಂದ ಮೇಲೆ ಮ್ಯಾನ್‌ಹೋಲ್‌ಗಳು ತುಂಬಿ ಕೊಳಚೆ ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತದೆ. ವಾಹನಗಳಿಗೆ ಜನ ಕಸ ನೀಡದ ಕಾರಣ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸದ ರಾಶಿಗಳು ತಲೆ ಎತ್ತುತ್ತವೆ. ಆದ್ದರಿಂದ ಸಹಾಯವಾಣಿಗೆ ಬರುವ ಬಹುತೇಕ ದೂರು ಯುಜಿಡಿ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ್ದಾಗಿವೆ.

‘ಚರಂಡಿ ಕಟ್ಟಿರುವುದು ಹಾಗೂ ವಿದ್ಯುತ್ ದೀಪಗಳಿಗೆ ಸಂಬಂಧಿಸಿದ ದೂರುಗಳೂ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ. ವಿದ್ಯುತ್‌ ದೀಪಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಣೆ ಹೊಣೆ ಹೊತ್ತ ಏಜೆನ್ಸಿಯವರ ಗಮನಕ್ಕೆ ತರಲಾಗುತ್ತದೆ’ ಎಂದು ಸಹಾಯವಾಣಿ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ನೀರಿನ ಸಮಸ್ಯೆಗೆ ಸಂಬಂಧಿಸಿದ ದೂರುಗಳನ್ನು ಎಲ್‌ ಆಂಡ್ ಟಿ ಕಂಪನಿಗೆ ವರ್ಗಾಯಿಸಲಾಗುತ್ತದೆ. ಅವರೂ ಸಹಾಯವಾಣಿ ತೆರೆದಿದ್ದರೂ ಕೆಲವರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿ ನೀರಿನ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುತ್ತಾರೆ’ ಎಂದು ಅವರು ಹೇಳಿದರು.

ದೂರುಗಳ ವಿಲೇವಾರಿ ಹೇಗೆ?

ಸಹಾಯವಾಣಿಗೆ ಕರೆ ಮಾಡಿದವರ ವಾರ್ಡ್‌, ಹೆಸರು ಹಾಗೂ ದೂರಿನ ವಿವರಗಳನ್ನು ಸಿಬ್ಬಂದಿಯು ಪಡೆದುಕೊಳ್ಳುತ್ತಾರೆ.  ದೂರಿನ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ರವಾನಿಸಲಾಗುತ್ತದೆ. ಅದನ್ನು ಸಂಬಂಧಿಸಿದ ವಾರ್ಡ್‌ಗಳ ಕಿರಿಯ ಎಂಜಿನಿಯರ್ ಹಾಗೂ ಮೇಲ್ವಿಚಾರಕರಿಗೆ ಕಳುಹಿಸುತ್ತಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದು ಪಾಲಿಕೆ ಅಧಿಕಾರಿಗಳ ಮಾಹಿತಿ.

ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೂ ಸಮಸ್ಯೆ ಶೀಘ್ರವೇ ಪರಿಹರಿಸುವುದಿಲ್ಲ. ಮನೆ ಬಳಿ ಮ್ಯಾನ್‌ಹೋಲ್ ತುಂಬಿದ ಕುರಿತು ದೂರು ನೀಡಲಾಗಿತ್ತು. ಪರಿಹರಿಸಿರಲಿಲ್ಲ. ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿದ ಮೇಲೆ ಮೂರು–ನಾಲ್ಕು ದಿನಗಳ ಬಳಿಕ ಸಮಸ್ಯೆ ಪರಿಹರಿಸಲಾಯಿತು
ಚೇತನ್, ಹೀರಾಪುರ ನಿವಾಸಿ

ಸಿಬ್ಬಂದಿ ಕೊರತೆ

ಸಹಾಯವಾಣಿ ಕೇಂದ್ರವು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈ ಹಿಂದೆ ಸಹಾಯವಾಣಿ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಇಬ್ಬರು. ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಇಬ್ಬರು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಒಬ್ಬರು ಕಾರ್ಯನಿರ್ವಹಿಸುತ್ತಿದ್ದರು. ಈಗ ಕೆಲವು ನೌಕರರು ನಿವೃತ್ತರಾದ ಕಾರಣ ಪಾಳಿ ಸಂಖ್ಯೆ ಎರಡಕ್ಕಿಳಿದಿದೆ. ಆದ್ದರಿಂದ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.