ಚಿತ್ತಾಪುರ: ತಾಲ್ಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ಗುರುವಾರ ರಾತ್ರಿ ವನ್ಯಮೃಗದ ದಾಳಿಯಿಂದ ಹೋರಿ ಕರು ಮೃತಪಟ್ಟಿದೆ.
‘ರಾತ್ರಿ 9ರ ಸುಮಾರಿಗೆ ಎತ್ತು ಹಾಗೂ ಹೋರಿ ಜತೆಗೆ ಮನೆಗೆ ಬರುತ್ತಿದ್ದೆ. ಒಂದು ಹೋರಿ ಹಿಂದೆ ಉಳಿದಿದ್ದು, ಹಿಂದಿರುಗಿ ಹೋಗಿ ನೋಡಿದಾಗ ರಕ್ತಸ್ರಾವದಿಂದ ಸತ್ತುಬಿದ್ದಿತ್ತು. ಅದರ ಎದೆಯ ಭಾಗವನ್ನು ಯಾವುದೋ ಮೃಗ ಬಗೆದು ತಿಂದಿದೆ. ದೂರದಲ್ಲಿ ನನಗೆ ಹುಲಿ ಘರ್ಜಿಸಿದ ಶಬ್ದ ಕೂಡ ಕೇಳಿಸಿತು. ಹುಲಿ ಘರ್ಜನೆಯಿಂದ ಬೆದರಿದ ನನ್ನ ಎರಡು ಎತ್ತುಗಳೂ ಮನೆಗೆ ಓಡಿ ಬಂದವು’ ಎಂದು ರೈತಭೀಮರಾಯ ಚಾಮನೂರು ತಿಳಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ್, ‘ಅಲ್ಲೂರ್(ಬಿ) ಗ್ರಾಮದಲ್ಲಿ ಹೋರಿಯ ಮೇಲೆ ಚಿರತೆ ದಾಳಿ ಮಾಡಿರಬಹುದು. ಈ ಭಾಗದಲ್ಲಿ ಹುಲಿಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಯಾದಗಿರಿ ಗಡಿಗೆ ಹೊಂದಿಕೊಂಡಿರುವ ಕಾಡಿನಿಂದ ಆಹಾರ ಹುಡುಕಿಕೊಂಡು ಹುಲಿಯೂ ಬಂದಿರಬಹುದು. ಈಗಲೇ ಖಚಿತವಾಗಿ ಯಾವ ಪ್ರಾಣಿ ಎಂದು ಹೇಳುವುದು ಕಷ್ಟ. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಶೀಘ್ರ ಕಾರ್ಯಾಚರಣೆ ನಡೆಸಿ ವನ್ಯಮೃಗ ಸೆರೆ ಹಿಡಿಯುತ್ತೇವೆ’ ಎಂದರು.
ಈಚೆಗಷ್ಟೇ ರಾಮಾನಾಯಕ ತಾಂಡಾದ ಹೊಲದಲ್ಲಿ ಚಿರತೆ ಹಸುವನ್ನು ಕೊಂದು ತಿಂದಿದೆ. ಅದನ್ನು ಸೆರೆಹಿಡಿಯಲು ಬೋನ್‌ನಲ್ಲಿ ನಾಯಿ ಮರಿ ಕಟ್ಟಿ ಇಡಲಾಗಿದೆ. ಈಗ ಮತ್ತೆ ಹೋರಿ ಸತ್ತಿರುವ ಪ್ರಕರಣದಿಂದ ಈ ಭಾಗದಲ್ಲಿ ವನ್ಯಮೃಗ ಓಡಾಡುತ್ತಿರುವುದು ಖಚಿತವಾದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.