ADVERTISEMENT

ನನಸಾದ ಕನಸು: ಕಲಬುರಗಿಯಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರಕ್ಕೆ ಬಲ

ಕಲಬುರಗಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಕಾಯಂ ಪೀಠ

ಭೀಮಣ್ಣ ಬಾಲಯ್ಯ
Published 17 ಸೆಪ್ಟೆಂಬರ್ 2024, 7:23 IST
Last Updated 17 ಸೆಪ್ಟೆಂಬರ್ 2024, 7:23 IST
ಗ್ರಾಹಕರು
ಗ್ರಾಹಕರು   

ಕಲಬುರಗಿ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಲ್ಯಾಣ ಕರ್ನಾಟಕ ಉತ್ಸವದ ದಿನದಂದು ಕಾರ್ಯಾರಂಭ ಮಾಡಲಿದ್ದು, ವಕೀಲರ ಮತ್ತು ಗ್ರಾಹಕರ ಹಕ್ಕುಗಳ ಹೋರಾಟಗಾರರ ದಶಕದ ಕನಸು ಈಡೇರಿದಂತಾಗಿದೆ.

₹ 50 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಕೋರಿ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪರಿಹಾರ ಕಾಣದವರು ಮೇಲ್ಮನವಿ ಸಲ್ಲಿಸಲು ಕಲ್ಯಾಣ ಕರ್ನಾಟಕದ ಜನರು ದೂರದ ಬೆಂಗಳೂರಿಗೆ ತೆರಳಬೇಕಿತ್ತು. ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿತ್ತು. ಪ್ರಕರಣಗಳೂ ಬೇಗ ಇತ್ಯರ್ಥವಾಗುತ್ತಿರಲಿಲ್ಲ. ಆದ್ದರಿಂದ ಇಲ್ಲಿನ ಕಲಬುರಗಿ ಹೈಕೋರ್ಟ್‌ ಪೀಠದ ವಕೀಲರ ಸಂಘ, ಮಹಾತ್ಮ ಗಾಂಧೀಜಿ ಗ್ರಾಹಕರ ಹಿತ ರಕ್ಷಣಾ ವೇದಿಕೆ, ವಿವಿಧ ಸಂಘ–ಸಂಸ್ಥೆಗಳವರು ಹೋರಾಟ ನಡೆಸಿ ಪೀಠ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು.

ಒತ್ತಡಕ್ಕೆ ಮಣಿದ ಸರ್ಕಾರ 2022ರ ಜೂನ್‌ನಲ್ಲಿ 22 ಹುದ್ದೆಗಳಿಗೆ ಮಂಜೂರಾತಿ ನೀಡುವ ಮೂಲಕ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಆರಂಭದ ಮುನ್ಸೂಚನೆ ನೀಡಿತ್ತು. ಬಳಿಕ ಆ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ಮತ್ತೆ ಸಂಘ–ಸಂಸ್ಥೆಗಳವರು ಹೋರಾಟ ಆರಂಭಿಸಿದರು. ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ADVERTISEMENT

ನಂತರ ಸರ್ಕಾರ ಹುದ್ದೆಗಳ ಮಂಜೂರಾತಿ ಆದೇಶದಲ್ಲಿ ಮಾರ್ಪಾಡು ಮಾಡಿತು. ಹುದ್ದೆಗಳ ಸಂಖ್ಯೆಯನ್ನು 12ಕ್ಕೆ ಇಳಿಸಿತು. ಸರ್ಕಾರ ಸೆಪ್ಟೆಂಬರ್ 13ರಂದು ಕಾರ್ಯಾರಂಭದ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 17ರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೀಠ ಕಾರ್ಯನಿರ್ವಹಿಸಲಿದೆ.

ಸಿಬ್ಬಂದಿ ನಿಯೋಜನೆ: ಸದ್ಯ ಪೀಠಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರು ಪೀಠದ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ. 

900 ಪ್ರಕರಣ: ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಗ್ರಾಹಕರ ಸುಮಾರು 900 ಮೇಲ್ಮನವಿ ಹಾಗೂ ನೇರ ಪ್ರಕರಣಗಳು ಬಾಕಿ ಇವೆ. ಪೀಠ ಆರಂಭವಾಗುವುದರಿಂದ ಪ್ರಕರಣಗಳಿಗೆ ಮುಕ್ತಿ ಸಿಗುವ ನಿರೀಕ್ಷೆಯಲ್ಲಿದ್ದಾರೆ ಗ್ರಾಹಕರು.

ಹುದ್ದೆಗಳ ಭರ್ತಿಗೆ ಆಗ್ರಹ: ಈಗಾಗಲೇ 12 ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಅವುಗಳನ್ನು ಭರ್ತಿ ಮಾಡಿಲ್ಲ. ಅವುಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ವಕೀಲರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.