ADVERTISEMENT

ಕಲಬುರಗಿ: ‘ಅಮೃತ ಭಾರತ ನಿಲ್ದಾಣ’ಕ್ಕಿಲ್ಲ ವೇಗ

ಯೋಜನೆಯಡಿ ಜಿಲ್ಲೆಯ ನಾಲ್ಕು ರೈಲು ನಿಲ್ದಾಣಗಳ ಅಭಿವೃದ್ಧಿಗೆ ₹ 113 ಕೋಟಿ ಮಂಜೂರು

ಭೀಮಣ್ಣ ಬಾಲಯ್ಯ
Published 17 ಅಕ್ಟೋಬರ್ 2024, 5:58 IST
Last Updated 17 ಅಕ್ಟೋಬರ್ 2024, 5:58 IST
ಶಹಾಬಾದ್ ರೈಲು ನಿಲ್ದಾಣದಲ್ಲಿ ಉದ್ಯಾನ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಶಹಾಬಾದ್ ರೈಲು ನಿಲ್ದಾಣದಲ್ಲಿ ಉದ್ಯಾನ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಕಲಬುರಗಿ: ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಮೃತ ಭಾರತ ನಿಲ್ದಾಣ ಯೋಜನೆ ಜಿಲ್ಲೆಯಲ್ಲಿ ಇನ್ನೂ ವೇಗ ಪಡೆದಿಲ್ಲ.

2023ರಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಈ ಯೋಜನೆಗೆ ಕೇಂದ್ರ ರೈಲ್ವೆ ವಲಯದ ಸೋಲಾಪುರ ವಿಭಾಗದ ಒಟ್ಟು 15 ನಿಲ್ದಾಣಗಳು ಆಯ್ಕೆಯಾಗಿದ್ದವು. ಜಿಲ್ಲೆಯ ವಾಡಿ, ಕಲಬುರಗಿ, ಶಹಾಬಾದ್ ಹಾಗೂ ಗಾಣಗಾಪುರ ರೋಡ್ ನಿಲ್ದಾಣಗಳೂ ಈ ಪಟ್ಟಿ ಸೇರಿದ್ದವು.

ಈ ಯೋಜನೆಯಡಿ ಕಲಬುರಗಿ ರೈಲು ನಿಲ್ದಾಣಕ್ಕೆ ₹ 29.55 ಕೋಟಿ, ಶಹಾಬಾದ್‌ ನಿಲ್ದಾಣ ₹ 26.76 ಕೋಟಿ ಹಾಗೂ ವಾಡಿ ₹ 36.32 ಕೋಟಿ, ಗಾಣಗಾಪುರ ನಿಲ್ದಾಣಕ್ಕೆ ₹ 20.78 ಕೋಟಿ ಮಂಜೂರು ಮಾಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕೆಲ ನಿಲ್ದಾಣಗಳಲ್ಲಿ ಆರಂಭಿಸಲಾದ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಇನ್ನೂ ಕೆಲ ಕಡೆ ಸ್ಥಗಿತಗೊಂಡಿವೆ.

ADVERTISEMENT

ಕಲಬುರಗಿ ರೈಲು ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಕೊಠಡಿ, ಮಾದರಿ ಶೌಚಾಲಯ ನಿರ್ಮಾಣ ಮತ್ತು ಸಂಚಾರ ಪ್ರದೇಶದ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೂ ಆಮೆಗತಿಯಲ್ಲಿ ನಡೆಯುತ್ತಿದೆ.

ವಾಡಿಯಲ್ಲಿ ರೈಲು ನಿಲ್ದಾಣದ ಕಟ್ಟಡ ನಿರ್ಮಾಣ ಕಾಮಗಾರಿ ಮಾತ್ರ ನಡೆಯುತ್ತಿದೆ. ಶಹಾಬಾದ್‌ನಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉದ್ಯಾನ ನಿರ್ಮಾಣ ಕಾಮಗಾರಿ ಆರಂಭಿಕ ಹಂತದಲ್ಲಿಯೇ ಸ್ಥಗಿತಗೊಂಡಿದೆ. ಗಾಣಗಾಪುರ ರೋಡ್ ನಿಲ್ದಾಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾತ್ರ ಆರಂಭಿಸಲಾಗಿದೆ.

ಕಲಬುರಗಿ ನಿಲ್ದಾಣದಲ್ಲಿ ಮತ್ತೊಂದು ಪ್ರವೇಶ ದ್ವಾರ:

‘ವಾಹನ ಮತ್ತು ‍ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಕಾರಣ ಮತ್ತೊಂದು ಪ್ರವೇಶ ದ್ವಾರದ ಅಗತ್ಯ ಇದೆ. ಆದ ಕಾರಣ ಎಸ್‌.ಆರ್‌.ಕಾಂಟಿನೆಂಟಲ್ ಹೋಟೆಲ್ ಎದುರು ಹೊಸ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಮುಖ್ಯ ಪ್ರವೇಶ ದ್ವಾರವನ್ನೂ ನವೀಕರಣ ಮಾಡಲಾಗುವುದು. ಕೆಲ ದಿನಗಳಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು’ ಎಂದು ರೈಲು ನಿಲ್ದಾಣದ ವ್ಯವಸ್ಥಾಪಕ ಪಿ.ಜೆ.ಜಿಜಿಮೋನ್ ತಿಳಿಸಿದರು.

ವಾಡಿಯಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯ:

ವಾಡಿ ಪಟ್ಟಣ ರೈಲು ಹಳಿಯ ಎರಡು ಬದಿಗಳಲ್ಲೂ ವಿಸ್ತರಿಸಿದೆ. ಸರಿಯಾದ ರಸ್ತೆಯೂ ಇಲ್ಲ. ಆದ್ದರಿಂದ ಎರಡೂ ಬದಿಯ ಬಡಾವಣೆಗಳ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕಾರಣ ಕೆಳ ಸೇತುವೆ ನಿರ್ಮಿಸುವುದು ಅಗತ್ಯ. ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಸ್ಪಂದಿಸಿಲ್ಲ. ಅಮೃತ ಭಾರತ ನಿಲ್ದಾಣ ಯೋಜನೆಯಡಿ ಸೇತುವೆ ನಿರ್ಮಾಣದ ಪ್ರಸ್ತಾಪ ಮಾಡದಿರುವುದು ದುರಂತ ಎಂದು ವಾಡಿಯ ಹೋರಾಟಗಾರರು ತಿಳಿಸುತ್ತಾರೆ.

ಸುನೀಲ ಕುಲಕರ್ಣಿ
ಅಮೃತ ಭಾರತ ನಿಲ್ದಾಣ ಯೋಜನೆಯ ಕೆಲಸಗಳಿಗೆ ವೇಗ ನೀಡಬೇಕು. ರೈಲು ನಿಲ್ದಾಣದ ಸೌಂದರ್ಯೀಕರಣಕ್ಕೆ ಒತ್ತು ನೀಡಬೇಕು
ಸುನೀಲ ಕುಲಕರ್ಣಿ ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆ ಅಧ್ಯಕ್ಷ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕಲಬುರಗಿ ನಿಲ್ದಾಣದಲ್ಲಿ ಹಂತ ಹಂತವಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ
ಪಿ.ಜೆ.ಜಿಜಿಮೋನ್ ವ್ಯವಸ್ಥಾಪಕ ಕಲಬುರಗಿ ರೈಲು ನಿಲ್ದಾಣ
ಸಿಬ್ಬಂದಿ ಕೊಠಡಿ
ಕಲಬುರಗಿ ರೈಲು ನಿಲ್ದಾಣದಲ್ಲಿ ಸಿಬ್ಬಂದಿ ಕೊಠಡಿ ತೆರೆಯಲಾಗಿದೆ. ಈ ವ್ಯವಸ್ಥೆ ವಾಡಿ ನಿಲ್ದಾಣದಲ್ಲಿ ಮಾತ್ರ ಇತ್ತು. ವಂದೇ ಭಾರತ್ ಕಲಬುರಗಿ–ಕೊಲ್ಹಾಪುರ ಸೇರಿ ಇತರ ರೈಲುಗಳು ಇಲ್ಲಿಂದಲೇ ಆರಂಭವಾಗುವ ಕಾರಣ ಈ ಕೊಠಡಿ ತೆರೆಯಲಾಗಿದೆ. ಇಲ್ಲಿ ಸಿಬ್ಬಂದಿ ನಿಯಂತ್ರಣ ವ್ಯವಸ್ಥೆ ಇರುತ್ತದೆ. ಲೋಕೊ ಪೈಲಟ್ ಸಹಾಯಕ ಲೋಕೊ ಪೈಲಟ್ ಮತ್ತು ಗಾರ್ಡ್‌ಗಳು ಕೆಲಸದ ಮಾಹಿತಿ ಪಡೆಯಬಹುದು. ಇಂಥ ವ್ಯವಸ್ಥೆ ಇರುವ ನಿಲ್ದಾಣಗಳಲ್ಲಿ ರೈಲುಗಳ ಸಿಬ್ಬಂದಿ ಬದಲಾಗುತ್ತಾರೆ. ಈ ಕೊಠಡಿ ಮೂಲ ಸೌಕರ್ಯ ಹೊಂದಿರುತ್ತವೆ.

ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು

l ನಿಲ್ದಾಣ ಕಟ್ಟಡ ನವೀಕರಣ

l ಸಂಚಾರ ಪ್ರದೇಶದ ಸುಧಾರಣೆ

l ವಾಹನ ನಿಲುಗಡೆ ವ್ಯವಸ್ಥೆ

l ಪಾದಚಾರಿ ಸೇತುವೆಗಳ ವಿಸ್ತರಣೆ

l ಉದ್ಯಾನ ನಿರ್ಮಾಣ

l ಸುಧಾರಿತ ಬೆಳಕಿನ ವ್ಯವಸ್ಥೆ

l ಶೌಚಾಲಯ ನಿರ್ಮಾಣ

l ನಿರೀಕ್ಷಣಾ ಕೊಠಡಿಗಳ ಅಭಿವೃದ್ಧಿ

l ಎಸ್ಕಲೇಟರ್, ಲಿಫ್ಟ್‌ ಅಳವಡಿಕೆ

lಸುಧಾರಿತ ಸೂಚನಾ ಫಲಕಗಳು

l ಪ್ರವೇಶ ದ್ವಾರಗಳ ನವೀಕರಣ

l ಪ್ಲಾಟ್‌ ಫಾರಂ ಅಭಿವೃದ್ಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.