ADVERTISEMENT

ಶಾಲಾ ಶುಲ್ಕ ಪಾವತಿ ಪ್ರಾಧಿಕಾರ ರಚಿಸಿ: ಆಮ್ ಆದ್ಮಿ ಮುಖಂಡ ಸಂಜೀವಕುಮಾರ ಕರಿಕಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 4:15 IST
Last Updated 17 ಜುಲೈ 2021, 4:15 IST
ಸಂಜೀವಕುಮಾರ
ಸಂಜೀವಕುಮಾರ   

ಕಲಬುರ್ಗಿ: ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ಶೇ 30ರಷ್ಟು ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯದೆಲ್ಲೆಡೆ ‘ಶುಲ್ಕ ಇಳಿಸಿ, ಮಕ್ಕಳ ಭವಿಷ್ಯ ಉಳಿಸಿ’ ಘೋಷಣೆಯಡಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಸಂಜೀವಕುಮಾರ ಕರಿಕಲ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತರಗತಿಗಳೂ ನಡೆದಿಲ್ಲ. ಇಂಥ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಭಾರಿ ಮೊತ್ತದ ಶಾಲಾ ಶುಲ್ಕ ವಿಧಿಸುವ ಮೂಲಕ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಅವರು ದೂರಿದರು.

ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಏಕರೂಪದ ಶುಲ್ಕ ಜಾರಿಗಾಗಿ ರಾಜ್ಯ ಸರ್ಕಾರ ‘ಶಾಲಾ ಶುಲ್ಕ ಪಾವತಿ ಪ್ರಾಧಿಕಾರ’ ರಚಿಸಬೇಕು ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ 15 ದಿನಗಳ ಕಾಲ ಪಕ್ಷದ ಕಾರ್ಯಕರ್ತರು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಸಹಿ ಸಂಗ್ರಹಿಸಲಿದ್ದಾರೆ. ಆಸಕ್ತರು ಮಿಸ್‌ ಕಾಲ (ಮೊ: 7669100500) ನೀಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಶುಲ್ಕ ಇಳಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಅಂಜನಾ ಯಾತನೂರ, ಇಮ್ರಾನ್ ಅಹಮ್ಮದ್, ಶೇಖರಸಿಂಗ್ ಹಾಗೂ ಕಿರಣ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.