ADVERTISEMENT

ಜೆಸ್ಕಾಂ: ಅವಘಡ– 64 ಸಂತ್ರಸ್ತರಿಗಷ್ಟೇ ಪರಿಹಾರ!

17 ತಿಂಗಳಲ್ಲಿ 141 ಜನ ಸಾವು, 85 ಮಂದಿಗೆ ಗಾಯ

ಮಲ್ಲಿಕಾರ್ಜುನ ನಾಲವಾರ
Published 15 ಅಕ್ಟೋಬರ್ 2024, 8:04 IST
Last Updated 15 ಅಕ್ಟೋಬರ್ 2024, 8:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾ) ವ್ಯಾಪ್ತಿಯಲ್ಲಿ ಕಳೆದ ಹದಿನೇಳು ತಿಂಗಳಲ್ಲಿ 141 ಜನ ಮೃತಪಟ್ಟಿದ್ದರೆ, 85 ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ 64 ಜನರಿಗೆ ಮಾತ್ರವೇ ಪರಿಹಾರದ ಮೊತ್ತ ಕೈಸೇರಿದೆ.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಾಗರಿಕರು ಹಾಗೂ ಜಾನುವಾರು ಸೇರಿ ಒಟ್ಟು 688 ವಿದ್ಯುತ್ ಅವಘಡಗಳು ವರದಿಯಾಗಿವೆ.

2023–24ರ ಆರ್ಥಿಕ ವರ್ಷದಲ್ಲಿ ಮೂವರು ಸಿಬ್ಬಂದಿ ಸೇರಿ ಒಟ್ಟು 93 ಜನರು ವಿದ್ಯುತ್ ಸಂಬಂಧಿತ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಜೆಸ್ಕಾಂನ 22 ಹಾಗೂ 37 ನಾಗರಿಕರು ಸೇರಿ 59 ಮಂದಿ ಗಾಯಗೊಂಡಿದ್ದಾರೆ. ಅದೇ ವರ್ಷದಲ್ಲಿ 143 ಜಾನುವಾರುಗಳು ಅವಘಡಗಳಿಗೆ ಸಿಲುಕಿವೆ.

ADVERTISEMENT

2024–25ರ ಆರ್ಥಿಕ ವರ್ಷದ ಆಗಸ್ಟ್ ತಿಂಗಳವರೆಗೆ ಜೆಸ್ಕಾಂನ ಇಬ್ಬರು ಸಿಬ್ಬಂದಿ ಹಾಗೂ 46 ನಾಗರಿಕರು ಸೇರಿ 48 ಮಂದಿ ಮೃತಪಟ್ಟಿದ್ದಾರೆ. ಒಟ್ಟು 26 ಜನರು ಗಾಯಗೊಂಡಿದ್ದರೆ, 50 ಜಾನುವಾರಗಳಿಗೂ ಹಾನಿಯಾಗಿದೆ.

ಇಷ್ಟೊಂದು ಪ್ರಮಾಣದ ಸಾವು– ನೋವುಗಳಿಗೆ ಹೋಲಿಸಿದರೆ ಸಂತ್ರಸ್ತರ ಕುಟುಂಬಗಳಿಗೆ ಸಿಗುವ ಪರಿಹಾರ ಪ್ರಕರಣಗಳು ಅರ್ಧಕ್ಕೂ ಕಡಿಮೆಯಷ್ಟಿವೆ. ಕಳೆದ ಆರ್ಥಿಕ ವರ್ಷದ 152 ಪ್ರಕರಣಗಳಲ್ಲಿ (ಸಾವು ಮತ್ತು ಗಾಯ) 47 ಜನರಿಗೆ ₹2.11 ಕೋಟಿ ಪರಿಹಾರ ಭಾಗ್ಯ ಲಭಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಐದು ತಿಂಗಳಲ್ಲಿನ 74 ಪ್ರಕರಣಗಳಲ್ಲಿ 17 ಕುಟುಂಬಗಳಿಗೆ ₹49.85 ಲಕ್ಷ ಪರಿಹಾರದ ಮೊತ್ತ ಪಾವತಿಯಾಗಿದೆ.

ಸಂಬಂಧಪಟ್ಟ ಪ್ರಾಧಿಕಾರದ ದೃಢೀಕರಣ ವಿಳಂಬ, ಸರಿಯಾದ ದಾಖಲೆಗಳು ಸಲ್ಲಿಸದೆ ಇರುವುದು, ತಾಂತ್ರಿಕ ಕಾರಣಗಳಿಂದಾಗಿ ಬಾಕಿ ಪ್ರಕರಣಗಳ ಹಣ ಪಾವತಿ ತಡವಾಗಿದೆ ಎನ್ನುವುದು ಇಲಾಖೆಯ ಸಿಬ್ಬಂದಿಯ ವಾದ.

ಪರಿಹಾರ ಪಾವತಿಯ ಷರತ್ತುಗಳು: ವಿದ್ಯುತ್ ಅಪಘಾತಕ್ಕೆ ಕಾರಣವನ್ನು ಸಂಬಂಧಪಟ್ಟ ವಿದ್ಯುತ್ ಪರಿವೀಕ್ಷಕ ಪ್ರಾಧಿಕಾರದಿಂದ ದೃಢೀಕರಣ ಆಗಬೇಕು. ಅಂಗವಿಕಲತೆಯ ಶೇಕಡವಾರು ಪ್ರಮಾಣವನ್ನು ಜಿಲ್ಲಾ ಸರ್ಜನ್ ಹಾಗೂ ಅದಕ್ಕೂ ಮೇಲ್ಪಟ್ಟ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ದೃಢೀಕರಣ ಪಡೆಯಬೇಕು. ಫಸಲು ಹಾನಿ, ಆಸ್ತಿ, ಗೃಹೋಪಯೋಗಿ ಉಪಕರಣ ಸೇರಿ ಇತರೆ ನಷ್ಟವನ್ನು ಸಂಬಂಧಿಸಿದ ಪ್ರಾಧಿಕಾರದಿಂದ ಅಂದಾಜಿಸಬೇಕು.

ಆಡಳಿತ ಪ್ರದೇಶದ ಮುಖ್ಯ ಎಂಜಿನಿಯರ್/ ಅಧೀಕ್ಷಕ ಎಂಜಿನಿಯರ್ ಪರಿಹಾರ ಮೊತ್ತವನ್ನು ಅನುಮೋದಿಸಬೇಕು. ಪರಿಹಾರ ಪಡೆಯುವವರು ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಪಡೆಯುತ್ತಿರುವ ಪರಿಹಾರ ಮೊತ್ತದ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕು. ಸಂಬಂಧಿಸಿದ ಎಂಜಿನಿಯರ್‌ಗಳು ಪರಿಹಾರ/ ಅನುಗ್ರಹ ಪೂರ್ವಕ ಮೊತ್ತವನ್ನು ಬಾಧಿತ ವ್ಯಕ್ತಿಗಳು/ ಕುಟುಂಬದ ಸದಸ್ಯರು/ ಜಾನುವಾರು ಮಾಲೀಕರು ಎಂಬುದನ್ನು ಖಚಿತಪಡಿಸಿಕೊಂಡು ನೀಡುತ್ತಾರೆ.

ಪಾರಿಹಾರ ಮೊತ್ತ ಎಷ್ಟು?

ಜೆಸ್ಕಾಂ ಸಿಬ್ಬಂದಿ ಅಥವಾ ನಾಗರಿಕರು ಮೃತಪಟ್ಟರೆ ಮತ್ತು ಶಾಶ್ವತವಾಗಿ ಪೂರ್ಣ ಅಂಗವಿಕಲತೆಗೆ ಒಳಗಾದರೆ ₹5 ಲಕ್ಷ ಪರಿಹಾರ ಪಾವತಿ ಆಗುತ್ತದೆ. ಶಾಶ್ವತ ಭಾಗಶಃ ಅಂಗವಿಕಲತೆಗೆ ಕನಿಷ್ಠ ₹1 ಲಕ್ಷದಿಂದ ₹5 ಲಕ್ಷ ಗಾಯ/ ಬಾಧೆಗೆ ಒಳಗಾದರೆ ₹ 20 ಸಾವಿರ ತಾತ್ಕಾಲಿಕ ಭಾಗಶಃ ಅಂಗವಿಕಲತೆಗೆ ಕನಿಷ್ಠ ₹25 ಸಾವಿರ ಮತ್ತು ಗರಿಷ್ಠ ₹50 ಸಾವಿರದಂತೆ ನೀಡಲಾಗುತ್ತದೆ. ತಾತ್ಕಾಲಿಕ ಪೂರ್ಣ ಅಂಗವಿಕಲತೆಗೆ ಕನಿಷ್ಠ ₹50 ಸಾವಿರ ಗರಿಷ್ಠ ₹1ಲಕ್ಷ ವೈದ್ಯಕೀಯ ವೆಚ್ಚವನ್ನು ಸಂಭವಿಸಿದ ಗಾಯಗಳ ಚಿಕಿತ್ಸೆ ಮತ್ತು ಆಸ್ಪತ್ರೆಯಲ್ಲಿ ಉಳಿಯುವ ಅವಧಿಗೆ ಸಂಬಂಧಿಸಿದ ನಿಖರವಾದ ವೆಚ್ಚವನ್ನು ಪರಿಹಾರದ ಮೊತ್ತದ ಜೊತೆಗೆ ಪಾವತಿಸಲಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.