ADVERTISEMENT

ಕಲಬುರಗಿ | ಕೇಂದ್ರೀಯ ವಿ.ವಿ. ‘ಸತ್ಯನಾರಾಯಣ’ನ ಗುಡಿಯಲ್ಲ - ಆಂದೋಲನ ಚಾಲನಾ ಸಮಿತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 5:54 IST
Last Updated 12 ಅಕ್ಟೋಬರ್ 2023, 5:54 IST
ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿಯ ಹೋರಾಟಗಾರರು ಸಿಯುಕೆ ಪ್ರವೇಶ ದ್ವಾರದಲ್ಲಿ ಜಮಾಯಿಸಿದರು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿಯ ಹೋರಾಟಗಾರರು ಸಿಯುಕೆ ಪ್ರವೇಶ ದ್ವಾರದಲ್ಲಿ ಜಮಾಯಿಸಿದರು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಕಲಬುರಗಿ: ‘ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ, ವಿಠ್ಠಲ ನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿ ತಿನ್ನಿರೋ ಎನ್ನುತ್ತಾ ಭಜನೆ ಮಾಡುವುದಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ(ಸಿಯುಕೆ) ಆವರಣವು ‘ಸತ್ಯನಾರಾಯಣ’ನ ಗುಡಿಯಲ್ಲ, ರಾಮದೇವರ ಮಂದಿರವಲ್ಲ. ಇದು, ಉನ್ನತ ಸಂಶೋಧನೆಗಳು ನಡೆಯುವ ಮತ್ತು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯದ ಜಾತ್ಯತೀತ ಮೌಲ್ಯಗಳನ್ನು ಕಲಿಸುವ ತಾಣ...’

...ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹಾಗೂ ಹಿಂದಿನ ಕುಲಸಚಿವ ಪ್ರೊ. ಬಸವರಾಜ ಪಿ.ಡೋಣೂರ ಅವರ ವಿರುದ್ಧ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ಮುಖಂಡರು ಬುಧವಾರ ಬೃಹತ್ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.

ಜಾಥಾಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ರಾಜ್ಯ ಕೋಲಿ, ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ, ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಸಮುದಾಯ ಕಲಬುರಗಿ, ಜಮಾತ್ ಇಸ್ಲಾಂ ಹಿಂದ್ ಕರ್ನಾಟಕ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ, ಪ್ರಬುದ್ಧ ಭಾರತ ಸಂಘರ್ಷ, ದಲಿತ ಹಕ್ಕುಗಳ ಆಂದೋಲನ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ, ಕಮಾಲಶಾ ದರ್ವೇಶ್ ಸೋಷಿಯಲ್ ವೆಲ್ಫೇರ್ ಅಂಡ್ ಚಾರಿಟಬಲ್ ಎಜುಕೇಶನ್ ಸೊಸೈಟಿ ಸೇರಿ ಇತರೆ ಸಂಘಟನೆಗಳು ಕೈಜೋಡಿಸಿದ್ದವು.

ADVERTISEMENT

ಸುಡುವ ಬಿಸಿಲನ್ನು ಲೆಕ್ಕಿಸದೆ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು, ಹೋರಾಟಗಾರರು ಸೇರಿದಂತೆ ಸಾವಿರಾರು ಜನರು ಕಡಗಂಚಿಯ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆ ಮೈದಾನದಲ್ಲಿ ಜಮಾಯಿಸಿದ್ದರು. ಪ್ರತಿಭಟನಾಕಾರರ ಕೈಯಲ್ಲಿ ‘ದಲಿತ ವಿರೋಧಿ ಬಟ್ಟು ಭಗಾವೊ ಸಂವಿಧಾನ ಬಚಾವೊ’, ‘ಕೋಮುವಾದ ಉಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ’, ‘ಜಾತಿವಾದಿ, ಕೋಮುವಾದಿ ಮಾಜಿ ಕುಲಸಚಿವ ಬಸವರಾಜ ಪಿ.ಡೋಣೂರ ಮತ್ತು ವಿ.ಸಿ ಬಟ್ಟು ಸತ್ಯನಾರಾಯಣ ವಜಾಗೊಳಿಸಿ’ ಎಂಬ ನಾಮಫಲಕಗಳು, ನೀಲಿ ಧ್ವಜಗಳು ರಾರಾಜಿಸಿದವು.

ವೇದಿಕೆಯ ಮೇಲೆ ಮುಖಂಡರ ಭಾಷಣ ಮುಗಿಯುತ್ತಿದ್ದಂತೆ ಸಾವಿರಾರು ಜನರು ಅಂಬೇಡ್ಕರ್ ಜಯಘೋಷದೊಂದಿಗೆ ವಿ.ವಿ.ಯತ್ತೆ ಮುಖ ಮಾಡಿದರು. ಹಲಗೆ ವಾದನ, ಡಿ.ಜೆ.ಯಿಂದ ಹೊರಡುತ್ತಿದ್ದ ಭೀಮ ಗೀತೆಗಳು, ಧ್ವನಿ ವರ್ಧಕದಲ್ಲಿ ಮೊಳಗುತ್ತಿದ್ದ ಹೋರಾಟದ ಬೇಡಿಕೆಗಳು ಜಾಥಾದಲ್ಲಿ ಮಾರ್ದನಿಸಿದವು. ಜಾಥಾ ನಡುವೆ ಜೋರಾದ ಘೋಷಣೆಗಳು ಕೇಳಿಬರುತ್ತಿದ್ದವು. ಕಾಲೇಜು ಯುವಕರಿಂದ ಹಿಡಿದು ವೃದ್ಧರವರೆಗೂ 4 ಕಿ.ಮೀ. ಜಾಥಾ ನಡೆಸಿದರು.

ಬ್ಯಾನರ್‌ನಲ್ಲಿ ಮುತ್ತಿಗೆ ಎಂದು ಬರೆದಿದ್ದರೂ ಮೊದಲೇ ನಿರ್ಧರಿಸಿದಂತೆ ಪ್ರತಿಭಟನಾ ಜಾಥಾ ಮಾತ್ರ ನಡೆಸಿದರು. ಈ ವೇಳೆ ಕೆಲವರು ಬ್ಯಾರಿಕೇಡ್‌ ತಳ್ಳಿ ಒಳನುಗ್ಗುವ ಪ್ರಯತ್ನ ನಡೆಸಿದ್ದರು. ಆದರೆ, ಮುಖಂಡರು ಅದಕ್ಕೆ ಅವಕಾಶ ಕೊಡಲಿಲ್ಲ. ‘ಇದು ನಮ್ಮ ವಿಶ್ವವಿದ್ಯಾಲಯ. ಸಣ್ಣ ಬಿರುಕು ಬಿಟ್ಟು ಹಾನಿಯಾದರೂ ನಾವೇ ದುರಸ್ತಿ ಮಾಡಬೇಕು. ಬ್ಯಾರಿಕೇಡ್ ಬಿಟ್ಟು ಹಿಂದೆ ಸರಿದು, ಭಾಷಣಕ್ಕಾಗಿ ಸಿದ್ಧಪಡಿಸಿದ್ದ ತೆರೆದ ವಾಹನದತ್ತ ಬರಬೇಕು’ ಎಂದು ತಾಕೀತು ಮಾಡಿದರು.

ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯದರ್ಶಿಯಾದ ಮಾರುತಿ ಗೋಖಲೆ, ಮಹಾಂತೇಶ ಎಸ್‌.ಕೌಲಗಿ, ಪದಾಧಿಕಾರಿಗಳಾದ ಕೆ.ನೀಲಾ, ಸುರೇಶ ಹಾದಿಮನಿ, ಪ್ರಕಾಶ ಮೂಲಭಾರತಿ, ದಿನೇಶ ದೊಡ್ಮನಿ, ಮಹಾದೇವ ದನ್ನಿ, ಎಸ್‌.ಪಿ ಸುಳ್ಳದ್, ಎಚ್‌.ಶಂಕರ್, ಅಶ್ವಿನಿ ಮದನಕರ್, ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಕಾಂಗ್ರೆಸ್ ನಾಯಕಿ ರೇಣುಕಾ ಸಿಂಗೆ, ಲಕ್ಷ್ಮಿಕಾಂತ ಹುಬ್ಬಳ್ಳಿ, ಹಣಮಂತ ಬೋಧನ್, ಸಿ.ಕೆ. ಮಂಜು, ಭೀಮಶಾ ದರಿ, ದತ್ತಾತ್ರೇಯ ಇಕ್ಕಳಕಿ, ಮರೆಪ್ಪ ಹಳ್ಳಿ, ಲಕ್ಷ್ಮಿಕಾಂತ ಹುಬ್ಬಳ್ಳಿ, ಮರೆಪ್ಪ ಚಟ್ಟೆಕರ್, ಕಾಶಿನಾಥ ಮಾಳಗೆ, ಸವಿತಾ ಕಾಂಬ್ಳೆ, ಅಬ್ದುಲ್ ಖಾದರ್, ಲೋಕೇಶ ನಾಯಕ, ಜಿಶಾನ್, ಶ್ರೀನಾಥ್ ಪೂಜಾರಿ, ರಾಜೇಂದ್ರ ರಾಜವಾಳ ಇತರರು ಇದ್ದರು.

ಸಾಲು ಗಟ್ಟಿ ನಿಂತ ವಾಹನಗಳು

ಜಾಥಾ ಅಂಗವಾಗಿ ಆಳಂದ–ಕಲಬುರಗಿ ನಡುವಿನ ರಸ್ತೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಳಂದದಿಂದ ಬರುತ್ತಿದ್ದ ವಾಹನಗಳನ್ನು ಕಡಗಂಚಿ ಬಳಿ ಹಾಗೂ ಕಲಬುರಗಿಯಿಂದ ಹೊರಟ ವಾಹನಗಳನ್ನು ಪಟ್ಟಣದ ಟೋಲ್ ಗೇಟ್‌ ಬಳಿ ತಡೆದು ನಿಲ್ಲಿಸಲಾಗಿತ್ತು. ಕೆಕೆಆರ್‌ಟಿಸಿ ಬಸ್ ಕಾರು ಬೂದಿ ಲಾರಿ ಸಣ್ಣ ಸರಕು ವಾಹನಗಳು ಸುಮಾರು ಅರ್ಧ ಕಿ.ಮೀ.ವರೆಗೂ ರಸ್ತೆಯ ಮೇಲೆ ನಿಂತಿದ್ದವು. ಜಾಥಾ ನಡುವೆ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಯಿತು.

ಗ್ರಾಮಸ್ಥರಿಂದ ಊಟದ ವ್ಯವಸ್ಥೆ

ಕಡಗಂಚಿ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆ ಮೈದಾನದಲ್ಲಿ ಜಮಾಯಿಸಿದ್ದ ಜನರಿಗೆ ಗ್ರಾಮದ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ಊಟದ ವ್ಯವಸ್ಥೆ ಮಾಡಿದರು. ನಿವಾಸಿಗಳು ಸೇರಿ ತಮ್ಮ ಕೈಲಾದಷ್ಟು ಹಣ ಒಟ್ಟುಗೂಡಿಸಿದರು. ಸುಮಾರು 5 ಸಾವಿರ ಜನರಿಗೆ ಆಗುವಷ್ಟು ಶಿರಾ ಅನ್ನ ಮತ್ತು ಬೇಳೆ ಸಾರು ಸಿದ್ಧಪಡಿಸಿ ಬಡಿಸಿದರು. 20ಕ್ಕೂ ಅಧಿಕ ಜನರು ಮಂಗಳವಾರ ತಡರಾತ್ರಿಯಿಂದಲೇ ಅಡುಗೆ ತಯಾರಿ ಮಾಡಿದರು. ಬೆಳಿಗ್ಗೆ 8ರಿಂದ ಜಾಥಾ ಹೊರಡುವವರೆಗೂ ನಿರಂತರವಾಗಿ ಮತ್ತು ಅಚ್ಚುಕಟ್ಟಾಗಿ ಅನ್ನಸಂತರ್ಪಣೆ ಮಾಡಿದರು.

ಪೊಲೀಸ್ ಸರ್ಪಗಾವಲು

ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿರುವುದರಿಂದ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸುಮಾರು 450ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಎಸ್ಪಿ ಅಡ್ಡೂರು ಶ್ರೀನಿವಾಸಲು ಹೆಚ್ಚುವರಿ ಎಸ್ಪಿ ಡಿವೈಎಸ್ಪಿಗಳು ಹಾಗೂ ಸಿಪಿಐಗಳ ನೇತೃತ್ವದಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಜಿಲ್ಲೆಯ ವಿವಿಧ ಠಾಣೆಗಳಿಂದ ಪೊಲೀಸರು ಭದ್ರತೆಗೆ ನಿಯೋಜನೆ ಗೊಂಡಿದ್ದರು. ಜಾಥಾ ಉದ್ದಕ್ಕೂ ಪೊಲೀಸ್ ವಾಹನಗಳು ಸಂಚರಿಸುತ್ತಿದ್ದವು. ಅಲ್ಲಲ್ಲಿ ಎತ್ತರದ ಕಟ್ಟಡಗಳ ಮೇಲೆ ನಿಂತು ಕೆಲವು ಪೊಲೀಸರು ಜಾಥಾದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು.

ವಿಶ್ವವಿದ್ಯಾಲಯಕ್ಕೆ ಮಸಿ ಬಳಿಯುವ ಯತ್ನ: ಕುಲಸಚಿವ

ಪ್ರತಿಭಟನಾಕಾರರು ಕುಲಪತಿಗಳು ಹಾಗೂ ನನ್ನ ವಿರುದ್ಧ ಮಾಡಲಾದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾವು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೇ ಹೊರತು ರಾಜಕಾರಣಿಗಳಿಲ್ಲ. ಈ ಮೂಲಕ ವಿಶ್ವವಿದ್ಯಾಲಯದ ಘನತೆಗೆ ಮಸಿ ಬಳಿಯುವ ಯತ್ನವನ್ನು ಮಾಡಿದ್ದಾರೆ ಎಂದು ಸಿಯುಕೆ ಹಿಂದಿನ ಕುಲಸಚಿವ ಪ್ರೊ. ಬಸವರಾಜ ಡೋಣೂರ ಪ್ರತಿಕ್ರಿಯಿಸಿದರು.

‘ನನ್ನ ವಿರುದ್ಧ ಕೆಟ್ಟ ಮಾತುಗಳನ್ನು ಬಳಸಿ ಟೀಕಿಸಲಾಗಿದೆ. ರಾಜ್ಯಕ್ಕೆ ಸಿಕ್ಕಿರುವುದು ಒಂದೇ ಕೇಂದ್ರೀಯ ವಿಶ್ವವಿದ್ಯಾಲಯ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಕೆಲ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು. ಆದರೆ ವಿ.ವಿ.ಯನ್ನು ಗುರಿಯಾಗಿಸಿಕೊಂಡು ಇಂತಹ ಬೃಹತ್ ಪ್ರತಿಭಟನೆ ನಡೆಸಿರುವುದು ಅಪೇಕ್ಷಣೀಯವಲ್ಲ. ವಿಶ್ವವಿದ್ಯಾಲಯದಲ್ಲಿ ಹಿಂದು–ಮುಸ್ಲಿಂ ಸೇರಿದಂತೆ ಎಲ್ಲ ಬಗೆಯ ಧಾರ್ಮಿಕ ಕಾರ್ಯಗಳೂ ನಡೆದಿವೆ. ವಿ.ವಿ. ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುತ್ತಿದೆ’ ಎಂದರು.

ಯಾರು ಏನು ಹೇಳಿದರು?

ಸಂತರು ಶರಣರು ದಾಸರು ನಡೆದಾಡಿದ ಮತ್ತು ಡಾ.ಬಿ.ಆರ್‌ ಅಂಬೇಡ್ಕರ್ ಅವರ ಪ್ರಭಾವ ಇರುವ ನಮ್ಮ ನೆಲದಲ್ಲಿ ರಾಷ್ಟ್ರೀಯ ಸರ್ವನಾಶಕ ಸಂಘವಾದ ಆರ್‌ಎಸ್‌ಎಸ್‌ನ ಆಟ ನಡೆಯುವುದಿಲ್ಲ – ಪ್ರೊ.ಆರ್‌.ಕೆ. ಹುಡಗಿ ಸಮಿತಿಯ ಗೌರವ ಅಧ್ಯಕ್ಷ

ಕುಲಪತಿಗಳ ಸಮ್ಮುಖದಲ್ಲೇ ಶೈಕ್ಷಣಿಕ ಕೇಂದ್ರದಲ್ಲಿ ಹೋಮ ಹವನ ಆರ್‌ಎಸ್ಎಸ್‌ನ ಶಾಖೆಗಳನ್ನು ನಡೆಸುವುದು ಸಂವಿಧಾನ ವಿರೋಧಿ ನಡೆ. ಇದನ್ನು ನಾವು ಖಂಡಿಸುತ್ತೇವೆ – ಡಿ.ಜಿ ಸಾಗರ ಸಮಿತಿ ಅಧ್ಯಕ್ಷ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಲಿಸಬೇಕೆ ಹೊರತು ಆರ್‌ಎಸ್‌ಎಸ್‌ನ ಗುಣಗಳಲ್ಲ. ಆರ್‌ಎಸ್‌ಎಸ್ ಗುಲಾಮರಂತೆ ಕೆಲಸ ಮಾಡುವುದು ಇಲ್ಲಿ ನಡೆಯುವುದಿಲ್ಲ – ಲಚ್ಚಪ್ಪ ಜಮಾದಾರ್ ಸಮಿತಿಯ ಕಾರ್ಯಾಧ್ಯಕ್ಷ

ನೊಣದ ಕಾಲಿನಷ್ಟು ಇರುವ ವೈದಿಕರ ಆಟ ನಡೆಯುವುದಕ್ಕೆ ಇದೇನು ಗುಜರಾತ್ ಯೋಗಿ ಆದಿತ್ಯನಾಥರ ರಾಜ್ಯವಲ್ಲ. ಇದು ಬುದ್ಧ ಬಸವ ಅಂಬೇಡ್ಕರ್ ತತ್ವಗಳ ಮೇಲೆ ನಡೆಯುವ ನೆಲ – ಮೀನಾಕ್ಷಿ ಬಾಳಿ ಸಮಿತಿಯ ಪದಾಧಿಕಾರಿ

ಪ್ರಮುಖ ಬೇಡಿಕೆ ಮತ್ತು ಆರೋಪಗಳು

  • ಕ್ಯಾಂಪಸ್‌ನಲ್ಲಿ ದಲಿತ ಮತ್ತು ದಲಿತೇತರ ವಿದ್ಯಾರ್ಥಿಗಳೆಂಬ ತಾರತಮ್ಯ ನಿಲ್ಲಿಸಬೇಕು

  • ಅವೈಜ್ಞಾನಿಕ ವಿಚಾರಧಾರೆಯ ಹೊಂದಿರುವವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಯಬಾರದು

  • ವಿಶ್ವವಿದ್ಯಾಲಯಕ್ಕೆ ಜಮೀನು ಕೊಟ್ಟವರಿಗೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು

  • ಎಲ್ಲ ವಿಧದ ನೇಮಕಾತಿಯಲ್ಲಿ ಯುಜಿಸಿ ನಿಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

  • ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಬಾರದು

  • ಕಾನೂನು ವಿರೋಧಿ ಕೆಲಸ ಮಾಡುತ್ತಿರುವ ಸಹಾಯಕ ಪ್ರಾಧ್ಯಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು

  • ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ನೋಟಿಸ್‌ ಕೊಟ್ಟು ಮಾನಸಿಕ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು

ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ನಡೆಸಿದ ಬೃಹತ್ ಜಾಥಾ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ಆಯೋಜಿಸಿದ್ದ ಬೃಹತ್ ಜಾಥಾ ಅಂಗವಾಗಿ ವಿಶ್ವವಿದ್ಯಾಲಯ ಪ್ರವೇಶ ದ್ವಾರದಲ್ಲಿ ಜಮಾಯಿಸಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ನಡೆಸಿದ ಬೃಹತ್ ಜಾಥಾ ಅಂಗವಾಗಿ ರಸ್ತೆಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು ಮತ್ತು ಪ್ರಯಾಣಿಕರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಬುಧವಾರ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ಆಯೋಜಿಸಿದ್ದ ಜಾಥಾದಲ್ಲಿ ಪಾಲ್ಗೊಂಡಿದ್ದ ಸಮಿತಿಯ ಗಣ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.