ಕಲಬುರಗಿ: ಕೈಗಾರಿಕೋದ್ಯಮಿ ಗೌತಮ್ ಅದಾನಿ ದೇಶದ ಪ್ರತಿಗಾಮಿ ಸರ್ಕಾರಗಳಿಗೆ ನೆರವು ನೀಡುತ್ತಿದ್ದಾರೆ. ಇವರಿಗೆ ತತ್ವ, ಸಿದ್ದಾಂತದ ಮೇಲೆ ನಡೆಯುತ್ತಿರುವ ಪಕ್ಷಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದು, ಧರ್ಮದ ಆಧಾರದ ಮೇಲೆ ಒಗ್ಗಟ್ಟಾಗುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ನರೇಂದ್ರ ಮೋದಿ-ಅಮಿತ್ ಶಾ ಅದಾನಿಯಂತಹ ಭಾರಿ ಬಂಡವಾಳಗಾರರಿಂದ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಮೋದಿ, ಶಾ ಇಂತಹ ಉದ್ಯಮಿಗಳನ್ನೇ ಬೆಳೆಸುತ್ತಿದ್ದಾರೆ ಎಂದು ಹರಿಹಾಯ್ದರು.
‘ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ವಾತಾವರಣ ಚೆನ್ನಾಗಿದೆ. ನಾಳೆ (ಶುಕ್ರವಾರ) ಜಾರ್ಖಂಡಗೆ ಹೋಗುತ್ತಿದ್ದೇನೆ. ಈಗಾಗಲೇ ಎರಡು ಬಾರಿ ಹೋಗಿ ಬಂದಿದ್ದೇನೆ. ನಮ್ಮ ರಾಜ್ಯಕ್ಕೆ ಏನ್ ಕೊಡ್ತೀರಿ ಅಂತ ಜನ ಕೇಳುತ್ತಿದ್ದಾರೆ. ಬಿಜೆಪಿಯವರು 370 ಕಲಂ ರದ್ದತಿ ಬಗ್ಗೆ ಪದೇ ಪದೇ ಹೇಳುತ್ತಿದ್ದಾರೆ. ಆಯಾ ರಾಜ್ಯಕ್ಕೆ ಏನು ಕೊಡುತ್ತಿದ್ದಾರೆ ಎಂಬುದರ ಬಗ್ಗೆಯೂ ಹೇಳಬೇಕು. ರಾಜ್ಯಗಳಿಗೆ ಜಿಎಸ್‌ಟಿ ಪಾಲು, ರೈತರಿಗೆ ಕೃಷಿ ಉಪಕರಣ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುತ್ತಿಲ್ಲ. ಇದಕ್ಕೆ ಮೋದಿ ಸರ್ಕಾರದ ಬಳಿ ಉತ್ತರ ಇಲ್ಲ. ಹಾಗಾಗಿ ನಾವು ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿದ್ದೇವೆ’ ಎಂದರು.
ಬಿಜೆಪಿಯವರು ಸಂವಿಧಾನ ಮತ್ತು ತಿರಂಗಾವನ್ನು ಒಪ್ಪಿಲ್ಲ. ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೇ ಸುಟ್ಟು ಹಾಕಿದ್ದಾರೆ ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.