ADVERTISEMENT

ಅಫಜಲಪುರ: ಅನುದಾನವಿಲ್ಲದೆ ಸೊರಗುತ್ತಿರುವ ರಸ್ತೆಗಳು

ಶಿವಾನಂದ ಹಸರಗುಂಡಗಿ
Published 30 ಅಕ್ಟೋಬರ್ 2024, 5:29 IST
Last Updated 30 ಅಕ್ಟೋಬರ್ 2024, 5:29 IST
ಅಫಜಲಪುರ-ವಿಜಯಪುರ ಜಿಲ್ಲೆ ಸಂಪರ್ಕ ಕಲ್ಪಿಸುವ ದೇವಣಗಾಂವ ಹತ್ತಿರದ ಭೀಮಾನದಿ ಸೇತುವೆ ರಸ್ತೆ ಹಾಳಾಗಿದೆ
ಅಫಜಲಪುರ-ವಿಜಯಪುರ ಜಿಲ್ಲೆ ಸಂಪರ್ಕ ಕಲ್ಪಿಸುವ ದೇವಣಗಾಂವ ಹತ್ತಿರದ ಭೀಮಾನದಿ ಸೇತುವೆ ರಸ್ತೆ ಹಾಳಾಗಿದೆ   

ಅಫಜಲಪುರ: ಅನುದಾನ ಕೊರತೆ, ಕಳಪೆ ಕಾಮಗಾರಿ, ಕಮಿಷನ್‌ ಹಾವಳಿಯಿಂದ ಕಲಬುರಗಿ–ಸೊಲಾಪುರ 150 ಕಿ.ಮೀ ರಸ್ತೆ ಮತ್ತು ಬಾರಕೇಡ್-ಬೀಳಗಿ ರಾಜ್ಯ ಹೆದ್ದಾರಿ ಅಲ್ಲಲ್ಲಿ ಹಾಳಾಗಿ ಹೋಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಮಹಾರಾಷ್ಟ್ರದ ಬಾರಕೇಡ್‌ನಿಂದ-ವಿಜಯಪುರ ಜಿಲ್ಲೆಯ ಮೂಲಕ ಬೀಳಗಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆಸರು ನಾಮಕರಣ ಮಾಡಿ 20 ವರ್ಷ ಕಳೆದರೂ ರಸ್ತೆ ದುರಸ್ತಿ ಕೆಲಸ ಮಾಡುತ್ತಿಲ್ಲ. ಈ ರಸ್ತೆ ಅಫಜಲಪುರದಿಂದ ಘತ್ತರಗಿ ಮುಖಾಂತರ ಹಾದು ಹೋಗಿ ಸಿಂದಗಿ ತಾಲ್ಲೂಕು ಸೇರುತ್ತದೆ. ಈ ರಸ್ತೆ ಅಲ್ಲಲ್ಲಿ ತುಂಬಾ ಹಾಳಾಗಿದ್ದು, ರಸ್ತೆಯ ಮೇಲೆ ತಗ್ಗುಗಳು ಬಿದ್ದಿರುವುದರಿಂದ ವಾಹನಗಳು ಸಂಚರಿಸಲು ಸಂಕಟ ಎದುರಾಗುತ್ತಿದೆ.

ಕೆಲವು ಬಾರಿ ರಸ್ತೆಯ ಮೇಲಿನ ತಗ್ಗುಗಳಲ್ಲಿ ಸಿಕ್ಕು ಬಿದ್ದು ವಾಹನ ಬಿಡಿ ಭಾಗಗಳು ಹಾಳಾಗಿದ್ದು ಉಂಟು. ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ತೆರಳಲು ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಫಜಲಪುರದಿಂದ ಘತ್ತರಗಿ ಸಂಪರ್ಕಿಸುವ 14 ಕಿ.ಮೀ ರಸ್ತೆಯಿದ್ದು, ಅದರಲ್ಲಿ 7 ಕಿ.ಮಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಲ್ಲಿಯೂ ರಸ್ತೆ ಮೇಲೆ ಗುಂಡಿ ಬಿದ್ದಿವೆ. ಉಳಿದ 7 ಕಿಲೋ ಮೀಟರ್ ರಸ್ತೆಯಲ್ಲಿ ಮಾರುದ್ದದ ಗುಂಡಿ ನಿರ್ಮಾಣವಾಗಿವೆ.

ADVERTISEMENT

ಘತ್ತರಗಿ– ಸಿಂದಗಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಚೌಡಾಪುರದಿಂದ ಹಸರಗುಂಡಗಿ ಸಾಗನೂರುವರೆಗೆ ರಸ್ತೆಗಳು ಹಾಳಾಗಿ ಹೋಗಿವೆ. ಮಣ್ಣೂರು ಗ್ರಾಮದಿಂದ ಇಂಡಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಸಂಪೂರ್ಣ ಹಾಳಾಗಿದ್ದು, ಜನರು ಪರದಾಡುವಂತಾಗಿದೆ.

ಸಿಂದಗಿ ತಾಲ್ಲೂಕಿನ ದೇವಣಗಾಂವ ಮತ್ತು ಆಲಮೇಲ ತಾಲ್ಲೂಕುಗಳನ್ನು ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿ ಹೋಗಿವೆ. ಈ ರಸ್ತೆ ಮೇಲೆ ದಿನಾಲು ಸಾವಿರಾರು ವಾಹನಗಳು ಸಂಚರಿಸುತ್ತವೆ. ಮುಂಬೈ ಕರ್ನಾಟಕ ಭಾಗದ ಸಾರಿಗೆ ಸಂಪರ್ಕಕ್ಕೆ ಈ ರಸ್ತೆ ಪ್ರಮುಖವಾಗಿದ್ದು, ಭೀಮಾನದಿಯ ಸೇತುವೆ ಮೇಲೆ ದೊಡ್ಡ ಪ್ರಮಾಣದ ತಗ್ಗು ಬಿದ್ದು ವಾಹನ ಸವಾರರು ಜೀವ ಭಯದಲ್ಲಿ ಸಂಚಾರ ಮಾಡುತ್ತಿದ್ದಾರೆ.

‘ಅಫಜಲಪುರದಿಂದ ಘತ್ತರಗಿ ಗ್ರಾಮದವರಿಗೆ ರಸ್ತೆ ಹಾಳಾಗಿ ಹೋಗುತ್ತಿದೆ. ಸಕ್ಕರೆ ಕಾರ್ಖಾನೆಯ ಕಬ್ಬಿನ ಲಾರಿಗಳು ಸಂಚಾರ ಮಾಡುವುದರಿಂದ ರಸ್ತೆ ಹಾಳಾಗಿ ಹೋಗಿದೆ. ಹೆಚ್ಚಿನ ಭಾರವಾದ ವಾಹನಗಳು ಸಂಚರಿಸಲು ನೆರವಾಗುವಂತೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎನ್ನುತ್ತಾರೆ’ ಘತ್ತರಗಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಗೊಸಯ್ಯ ಆಲಮೇಲ.

ಅನುದಾನ ಕೊರತೆ– ಯೋಜನೆಗಳ ಸ್ಥಗಿತ: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳು ಅನುದಾನ ಕೊರತೆಯಿಂದ ಸ್ಥಗಿತವಾಗಿವೆ. ₹2 ಕೋಟಿ ವೆಚ್ಚದ ಪಟ್ಟಣದ ರಸ್ತೆ ವಿಸ್ತರಣದ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಕೆಲಸ ಪೂರ್ಣವಾಗುತ್ತಿಲ್ಲ, ಕೇಳಿದರೆ ಅನುದಾನವಿಲ್ಲ, ಗುತ್ತಿದಾರರು ಕೆಲಸ ಮಾಡುತ್ತಿಲ್ಲ ಎನ್ನುವುದು ಜನರ ದೂರು.

ಗೊಸಯ್ಯ ಆಲಮೇಲ
ಶೈಲೇಶ್ ಗುಣಾರಿ
ಅವ್ವಣ್ಣ ಮ್ಯಾಕೇರಿ

Quote - ದೀಪಾವಳಿಯಿಂದ ಘತ್ತರಗಿಯಲ್ಲಿ ಸಿಡಿ ಕಾರ್ಯಕ್ರಮ ಆರಂಭವಾಗುತ್ತದೆ. ಪಟ್ಟಣದಿಂದ-ಘತ್ತರಗಿವರೆಗೆ ರಾಜ್ಯ ಹೆದ್ದಾರಿ ದುರಸ್ತಿ ಮಾಡಬೇಕು ಗೊಸಯ್ಯ ಆಲಮೇಲ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ

Quote - ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುದಾನ ನೀಡಿದರೂ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಅದಕ್ಕಾಗಿ ರಸ್ತೆ ಬೇಗನೆ ಹಾಳಾಗುತ್ತವೆ ಶೈಲೇಶ್ ಗುಣಾರಿ ಅಫಜಲಪುರ ಮಂಡಲ್ ಬಿಜೆಪಿ ಮಾಜಿ ಅಧ್ಯಕ್ಷ

Quote - ಕಮಿಷನ್‌ ಹಾವಳಿಯಿಂದ ಗುಣಮಟ್ಟದ ರಸ್ತೆ ಕಾಮಗಾರಿಗಳು ಆಗುತ್ತಿಲ್ಲ. ರಸ್ತೆ ಮಾಡಿದ ಮೇಲೆ ವರ್ಷದಲ್ಲಿ ಹಾಳಾಗಿ ಹೋಗುತ್ತವೆ ಸರ್ಕಾರ ಈ ಬಗ್ಗೆ ಯೋಚಿಸಬೇಕು ಅವ್ವಣ್ಣ ಮ್ಯಾಕೇರಿ ಎಪಿಎಂಸಿ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.