ಅಫಜಲಪುರ (ಕಲಬುರಗಿ ಜಿಲ್ಲೆ): ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪಿಎಸ್ಐ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಮೂಲದ ಖಾಜಪ್ಪ ಎನ್ನುವ ಕುಖ್ಯಾತ ಕಳ್ಳನನ್ನು ಬಂಧಿಸಲು ಭಾನುವಾರ ರಾತ್ರಿ ತೆರಳಿದ್ದ ಪಿಎಸ್ಐ ಭೀಮರಾಯ ಬಂಕಲಿ ಅವರ ರಿವಾಲ್ವರ್ ಕಿತ್ತುಕೊಂಡು ಓಡಿದ್ದಾನೆ.
ಸಿಸಿಬಿ ಪೊಲೀಸರು ಖಾಜಪ್ಪನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಬಂದಿದ್ದರು. ಈ ವೇಳೆ ಅವರೊಂದಿಗೆ ಪಿಎಸ್ಐ ಜೊತೆಯಾಗಿದ್ದರು.
ಖಾಜಪ್ಪ ವಿರುದ್ಧ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಬಳಿ ಡಸ್ಟರ್ ವಾಹನದಲ್ಲಿ ಕೂತಿದ್ದ ಖಾಜಪ್ಪನನ್ನು ಪೊಲೀಸರ ತಂಡ ಹಿಡಿಯಲು ಹೋಗಿದ್ದರು. ಈ ವೇಳೆ ಪಿಎಸ್ಐ ತನ್ನ ಸರ್ವಿಸ್ ಪಿಸ್ತೂಲ್ ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಈ ಸಮಯದಲ್ಲಿ ಖಾಜಪ್ಪ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದಾನೆ.
ರಾತ್ರಿ ಇಡೀ ಪೊಲೀಸರ ತಂಡ ಕಾರ್ಯಚರಣೆ ನಡೆಸಿದರೂ ಖಾಜಪ್ಪ ಸಿಕ್ಕಿಲ್ಲ. ಬುಲೆಟ್ ತುಂಬಿದ ಸರ್ವಿಸ್ ಪಿಸ್ತೂಲ್ ಸಮೇತ ಪರಾರಿಯಾಗಿದ್ದರಿಂದ ಆತಂಕ ಹೆಚ್ಚಾಗಿದೆ.
ಅಫಜಲಪುರಕ್ಕೆ ತೆರಳಿದ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ಮಾಹಿತಿ ಪಡೆದುಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದಲೇ ಪೊಲೀಸರ ತಂಡ ಕಳ್ಳನನ್ನು ಹಿಡಿಯಲು ಜಾಲ ಬೀಸಿದ್ದು, ಈಗಾಗಲೇ ಬಳೂರ್ಗಿ, ಗೌರ ಮಹಾರಾಷ್ಟ್ರದ ದುಧನಿಯಲ್ಲಿ ಹುಡುಕಾಟ ನಡೆಸಿದ್ದರು.
ಇತ್ತೀಚಿನ ಮಾಹಿತಿ ಪ್ರಕಾರ,ಅಫಜಲಪುರ ಹೊರವಲಯದ ನಿಂಬಾಳ ಎಂಬುವವರ ಹೊಲದಲ್ಲಿ ಆರೋಪಿ ಮರ ಹತ್ತಿ ಕುಳಿತಿದ್ದಾನೆ.
ಪೊಲೀಸರು ಹೊಲದ ಬಳಿಯೇ ಮೊಕ್ಕಾಂ ಹೂಡಿದ್ದಾರೆ.
'ಕೆಳಗಿಳಿದು ಬಂದರೆ ನನ್ನ ಮೇಲೆ ಗುಂಡಿನ ದಾಳಿ ಮಾಡುತ್ತೀರಿ. ಹಾಗಾಗಿ ಕೆಳಗೆ ಇಳಿಯುವುದಿಲ್ಲ' ಎಂದು ಪಟ್ಟು ಹಿಡಿದಿದ್ದಾನೆ.
ಪೊಲೀಸರು ಮನವೊಲಿಸುವ ಯತ್ನ ಮಾಡುತ್ತಿದ್ದಾರೆ.
ಆದರೆ, ಆರೋಪಿ ಖಾಜಪ್ಪ ಬಳಿ ಸರ್ವಿಸ್ ರಿವಾಲ್ವರ್ ಇರುವುದರಿಂದ ಪೊಲೀಸರು ಸಮೀಪಕ್ಕೆ ಹೋಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.