ADVERTISEMENT

ಎರಡು ವರ್ಷಗಳ ನಂತರ ಗ್ರಾಮಕ್ಕೆ ಬಂತು ಬಸ್!

ಪ್ರಜಾವಾಣಿ ಫೋನ್‌ ಇನ್‌ನಲ್ಲಿ ಕೇಳಿದ್ದ ಪ್ರಶ್ನೆಗೆ ಸ್ಪಂದಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:02 IST
Last Updated 9 ಆಗಸ್ಟ್ 2024, 16:02 IST
ಸೇಡಂ ತಾಲ್ಲೂಕು ಚಂದಾಪುರ ಗ್ರಾಮಕ್ಕೆ ಗುರುವಾರ ರಾತ್ರಿ ಬಂದಿದ್ದ ಬಸ್‌ಗೆ ಗ್ರಾಮಸ್ಥರು ಪೂಜೆ ಮಾಡಿ ಸ್ವಾಗತಿಸಿದರು
ಸೇಡಂ ತಾಲ್ಲೂಕು ಚಂದಾಪುರ ಗ್ರಾಮಕ್ಕೆ ಗುರುವಾರ ರಾತ್ರಿ ಬಂದಿದ್ದ ಬಸ್‌ಗೆ ಗ್ರಾಮಸ್ಥರು ಪೂಜೆ ಮಾಡಿ ಸ್ವಾಗತಿಸಿದರು   

ಸೇಡಂ: ತಾಲ್ಲೂಕಿನ ಚಂದಾಪುರ ಗ್ರಾಮಕ್ಕೆ ಗುರುವಾರ ರಾತ್ರಿ ಬಸ್ ಬಂದಿದ್ದರಿಂದ ಗ್ರಾಮಸ್ಥರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

3 ದಶಕಗಳಿಂದ 2021ರವರೆಗೆ ಚಂದಾಪುರ ಗ್ರಾಮಕ್ಕೆ ನಿತ್ಯವು ರಾತ್ರಿ ವಾಸ್ತವ್ಯ ಬಸ್ ಸಂಚಾರವಿತ್ತು. ಆದರೆ ಏಪ್ರಿಲ್ 4, 2021ರಿಂದ ಚಂದಾಪುರ ಗ್ರಾಮ ವಾಸ್ತವ್ಯ ಬಸ್ ರದ್ದಾಗಿತ್ತು. ಇದರ ಕುರಿತು ಗುರಮಠಕಲ್ ಘಟಕದ ವ್ಯವಸ್ಥಾಪಕರಿಗೆ ಹಲವು ಬಾರಿ ಕೇಳಿದರೂ  ಪ್ರತಿಫಲ ಸಿಕ್ಕಿರಲಿಲ್ಲ.

‘ಕಲಬುರಗಿ ಪ್ರಜಾವಾಣಿ ಕಚೇರಿಯಲ್ಲಿ ಜುಲೈ 25ರಂದು ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರ ಜೊತೆಗಿನ ‘ಪೋನ್ ಇನ್’ ಕಾರ್ಯಕ್ರಮದಲ್ಲಿ ನಾನು ಮಾತನಾಡಿ ಬಸ್ ಸಮಸ್ಯೆ ಬಗ್ಗೆ ಹೇಳಿದ್ದೆ. ನಿಮ್ಮ ಗ್ರಾಮಕ್ಕೆ ಬಸ್ ಕಳಿಸುವುದಾಗಿ ಭರವಸೆ ನೀಡಿದ್ದರು. ಅವರು ಕೊಟ್ಟ ಮಾತಿನಿಂತೆ ಆಗಸ್ಟ್‌ 8 ರಂದು ರಾತ್ರಿ ವಾಸ್ತವ್ಯ ಬಸ್ ಸಂಚಾರ ಆರಂಭಿಸಿದ್ದಾರೆ. ಎರಡು ವರ್ಷಗಳ ನಂತರ ನಮ್ಮೂರಿಗೂ ಬಸ್ ಬಂದಂತಾಗಿದೆ. ಬಸ್ ವ್ಯವಸ್ಥೆ ಕಲ್ಪಿಸಿದ ಎಂ.ರಾಚಪ್ಪ ಮತ್ತು ಪ್ರಜಾವಾಣಿ ಪತ್ರಿಕೆಗೆ ಕೃತಜ್ಞತೆಗಳು ಸಲ್ಲುತ್ತವೆ’ ಎಂದು ಗ್ರಾಮದ ಮುಖಂಡ ಅಶೋಕಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗುರಮಠಕಲ್ ಬಸ್ ನಿಲ್ದಾಣದಿಂದ ರಾತ್ರಿ 7.30ಕ್ಕೆ ಹೊರಟ ಬಸ್ ಚಂದಾಪುರ ಗ್ರಾಮಕ್ಕೆ ರಾತ್ರಿ 8.30 ನಿಮಿಷಕ್ಕೆ ಬರುತ್ತದೆ. ಬೆಳಿಗ್ಗೆ 6 ಗಂಟೆಗೆ ಚಂದಾಪುರದಿಂದ ಹೊರಟು ಬೆಳಿಗ್ಗೆ7 ಗಂಟೆಗೆ ಗುರಮಠಕಲ್ ತಲುಪುತ್ತದೆ’ ಎಂದು ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಾಣಿಕಪ್ಪ, ಪವನಕುಮಾರ ಸೇರಿದಂತೆ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.