ADVERTISEMENT

ಅಫಜಲಪುರ: ಹತ್ತಿ ಖರೀದಿಯಲ್ಲಿ ಅನ್ಯಾಯ; ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 4:12 IST
Last Updated 21 ನವೆಂಬರ್ 2024, 4:12 IST
ಅಫಜಲಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ಮಾಡಿದರು
ಅಫಜಲಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ಮಾಡಿದರು   

ಅಫಜಲಪುರ: ‘ಬೆಂಬಲ ಬೆಲೆಯಲ್ಲಿ ಒಂದು ವಾರದಿಂದ ಹತ್ತಿ ಖರೀದಿ ಆರಂಭವಾಗಿದೆ ಆದರೆ ಖರೀದಿಯಲ್ಲಿ ರೈತರಿಗೆ ಅನ್ಯವಾಗುತ್ತಿದ್ದು ಅದನ್ನು ಸರಿಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಬುಧವಾರ ಪಟ್ಟಣದ ಹೊರವಲಯದಲ್ಲಿರುವ ಹತ್ತಿ ಖರೀದಿ ಕೇಂದ್ರದ ಬದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂತೇಶ ಎಸ್.ಜಮಾದಾರ ಮಾತನಾಡಿ, ‘ಹತ್ತಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಕಡಿಮೆ ದರದಲ್ಲಿ ಹತ್ತಿ ಖರೀದಿ ಮಾಡುತ್ತಿದ್ದಾರೆ, ಸಮಯಕ್ಕೆ ಸರಿಯಾಗಿ ಬಿಲ್ಲು ನೀಡುತ್ತಿಲ್ಲ, ವಿನಾಕಾರಣ ವೆಚ್ಚಗಳನ್ನು ಬಿಲ್‌ಗಳಲ್ಲಿ ಕಡಿತ ಮಾಡುತ್ತಿದ್ದಾರೆ. ಹಮಾಲಿ, ತೂಕದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ, ಕೃಷಿ ಉತ್ಪನ್ನ ಮಾರುಕಟ್ಟೆ ಮಳಿಗೆಗಳು ಮತ್ತು ಕಾಟನ್ ಬಿಲ್ಲುಗಳು ರೈತರಿಗೆ ತೂಕದಲ್ಲಿ ಮತ್ತು ತೇವಾಂಶದಲ್ಲಿ ಮನಬಂದಂತೆ ದರ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಇವುಗಳನ್ನು ತಡೆದು ಹತ್ತಿ ಖರೀದಿ ಮಾಡಿದ ಒಂದು ಅಥವಾ ಎರಡು ದಿನದಲ್ಲಿ ರೈತರ ಬ್ಯಾಂಕ್ ಖಾತೆಗೆ ಬಿಲ್ ಪಾವತಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ನಾಗೇಶ ಎಸ್.ಹಡಲಗಿ, ತಾಲ್ಲೂಕು ಅಧ್ಯಕ್ಷ ಮಂಜುನಾಥ್ ನಾಯ್ಕೋಡಿ ಮಾತನಾಡಿ, ‘₹7,520 ನಿಗದಿ ಮಾಡಿದರೂ ತೇವಾಂಶ ಹೆಚ್ಚಿದೆ ಎಂದು ಆ ಬೆಲೆಯಲ್ಲಿ ಹತ್ತಿ ಖರೀದಿ ಮಾಡುತ್ತಿಲ್ಲ’ ಎಂದರು.

ADVERTISEMENT

ತಹಶೀಲ್ದಾರ್ ಸಂಜುಕುಮಾರ ದಾಸರ ಪ್ರತಿಭಟನಾಕಾರರಿಂದ ಮನಿಪತ್ರ ಸ್ವೀಕರಿಸಿ, ‘ಹತ್ತಿ ಖರೀದಿ ಕೇಂದ್ರದೊಂದಿಗೆ ಚರ್ಚೆ ಮಾಡಿ ನ್ಯಾಯ ಒದಗಿಸಲಾಗುವುದು’ ಎಂದು ತಿಳಿಸಿದರು

ಹೆದ್ದಾರಿಯಲ್ಲಿ ಸಂಚಾರವನ್ನು ಒಂದು ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ವಿಜಯಪುರಕ್ಕೆ, ಕಲಬುರಗಿ, ಸೋಲಾಪುರಕ್ಕೆ ಮತ್ತು ದೇವಲ ಗಾಣಗಾಪುರ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಿ ಬರುವ ಭಕ್ತರಿಗೆ ತೊಂದರೆಯಾಯಿತು. ಸುಮಾರು ಅರ್ಧ ಕಿ.ಮೀ ವರೆಗೆ ವಾಹನಗಳು ರಸ್ತೆ ಮೇಲೆ ನಿಂತುಕೊಂಡಿದ್ದವು.

ಪ್ರತಿಭಟನೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಗೋಳೆ, ತಾಲ್ಲೂಕು ಉಪಾಧ್ಯಕ್ಷ ದತ್ತು ಪೂಜಾರಿ, ಪ್ರಶಾಂತ ರಾಪೂಗೋಳ, ಅಬ್ದುಲ್ ಗುತ್ತೇದಾರ್, ಪ್ರಕಾಶ ಹಳಗೋದಿ, ಸದ್ದಾಂ ಅತ್ತಾರ್, ಕಲ್ಯಾಣಿ ಚಲಗೇರಿ, ಆನಂದ ಬಿಂದೆ, ಶಿವಾನಂದ ಚಿನ್ನಮಳಿ, ಬಾಗಪ್ಪ ಕೋಳಿ, ಮಲ್ಲಪ್ಪ ಕುಂಬಾರ, ಹಾಜಿ ಡಾಕ್ಟರ್ ಮಲ್ಲಾಬಾದ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.