ಕಲಬುರಗಿ: ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಎರಡು ಬಾರಿ ಕುಲಪತಿಯಾಗಿದ್ದ ಕೃಷಿ ವಿಜ್ಞಾನಿ ಪ್ರೊ. ಎಸ್.ಎ. ಪಾಟೀಲ (80) ಅವರು ಇಲ್ಲಿನ ಗೋದುತಾಯಿ ನಗರದ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು.
ಇವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್)ಯ ನಿರ್ದೇಶಕರೂ ಆಗಿದ್ದರು. ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಿರಾಳ ಗ್ರಾಮದವರಾದ ಎಸ್.ಎ. ಪಾಟೀಲ ಅವರು ಕೃಷಿ ಕುಟುಂಬದಿಂದ ಬಂದವರು.
ಎಂ.ಎಸ್ಸಿ (ಕೃಷಿ) ಹಾಗೂ ಜೆನೆಟಿಕ್ ಅಂಡ್ ಪ್ಲಾಂಟ್ ಬ್ರೀಡಿಂಗ್ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದ ಅವರು ರಾಯಚೂರಿನ ವಲಯ ಸಂಶೋಧನಾ ಕೇಂದ್ರದಲ್ಲಿ ಸಹ ಸಂಶೋಧನಾ ನಿರ್ದೇಶಕರಾಗಿ ಹಂತ ಹಂತವಾಗಿ ಬೆಳೆದು ಸಂಶೋಧನಾ ನಿರ್ದೇಶಕರಾಗಿ, ಡೀನ್‌ರಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಕೃಷಿ ಇಲಾಖೆಯ ಕೃಷಿ ಮಿಷನ್ ನಿರ್ದೇಶಕರಾಗಿಯೂ ಕೆಲಸ ಮಾಡಿ ರೈತರ ಸ್ನೇಹಿ ಕೃಷಿ ವಿಜ್ಞಾನಿ ಎನಿಸಿಕೊಂಡಿದ್ದರು.
ಕುಲಪತಿಯಾಗಿದ್ದ ಅವಧಿಯಲ್ಲಿ ಧಾರವಾಡ ಕೃಷಿ ವಿ.ವಿ.ಯನ್ನು ದೇಶದಲ್ಲಿಯೇ ಅತ್ಯುನ್ನತ ವಿಶ್ವವಿದ್ಯಾಲಯವೆಂದು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಧಾರವಾಡದಲ್ಲಿ ಅನೇಕ ನೂತನ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ದೇಶದಲ್ಲಿಯೇ ಪ್ರಥಮ ಬಾರಿಗೆ ಬೀಜ ಗ್ರಾಮ ಯೋಜನೆಯನ್ನು ಸ್ಥಾಪಿಸಿದ್ದರು. ಆ ಮೂಲಕ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವಲ್ಲಿ ನಿರಂತರ ಶ್ರಮಿಸಿದ್ದರು.
ಪಾಟೀಲ ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮಕ್ಕಳು ವಿದೇಶದಿಂದ ಬರಬೇಕಿರುವುದರಿಂದ ಬುಧವಾರ (ಜುಲೈ 17) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.