ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿರುವುದೇ ಗೀಳು: ಪ್ರೊ.ಎಸ್‌.ಎಲ್. ಹಿರೇಮಠ

ಶ್ರೀಮತಿ ವೀರಮ್ಮ ಗಂಗಸಿರಿ ಕಾಲೇಜಿನಿಂದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:21 IST
Last Updated 6 ನವೆಂಬರ್ 2024, 5:21 IST
<div class="paragraphs"><p>ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎಚ್‌ಕೆಇ&nbsp;ಸೊಸೈಟಿ ಅಧ್ಯಕ್ಷ ಶಶೀಲ್‌ ಜಿ.ನಮೋಶಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. &nbsp; </p></div>

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್‌ ಜಿ.ನಮೋಶಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.  

   

–ಪ್ರಜಾವಾಣಿ ಚಿತ್ರ

ಕಲಬುರಗಿ: ಕಣ್ಣಿಗೆ ಕಂಡದ್ದೆಲ್ಲ ಖರೀದಿ ಮಾಡುವ ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಕನೆಕ್ಟ್ ಆಗಿರುವುದು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಗೀಳಾಗಿ ಪರಿಣಮಿಸಿದೆ ಎಂದು ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಗುಲಬರ್ಗಾ ವಿ.ವಿ.ಯ ನಿವೃತ್ತ ಕುಲಸಚಿವ ಪ್ರೊ.ಎಸ್‌.ಎಲ್. ಹಿರೇಮಠ ಆತಂಕ ವ್ಯಕ್ತಪಡಿಸಿದರು.

ADVERTISEMENT

ಎಚ್‌ಕೆಇ ಸೊಸೈಟಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ಹಾಗೂ ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್)ಯ ದಕ್ಷಿಣ ವಲಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣ ಹಾಗೂ ಸಮಾಜ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಮನುಷ್ಯನಿಗೆ ಪ್ರತಿಯೊಂದನ್ನೂ ಹೇಳಿಕೊಳ್ಳಬೇಕು ಎಂಬ ಹಂಬಲ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳಿದ್ದು, ಅಲ್ಲಿ ಸದಾ ಕಾಲ ಆನ್‌ಲೈನ್‌ ಇರುವುದು ಬಹುತೇಕರಿಗೆ ವ್ಯಸನವಾಗಿದೆ. ಅಗತ್ಯ ಇದೆಯೋ ಇಲ್ಲವೊ ಮಳಿಗೆಗಳಲ್ಲಿ ಕಂಡದ್ದನ್ನೆಲ್ಲ ಕೊಂಡುಕೊಳ್ಳಬೇಕು ಎಂಬ ಮನಸ್ಥಿತಿಯೂ ವೇಗವಾಗಿ ಬೆಳೆಯುತ್ತಿದೆ’ ಎಂದರು.

‘ಕೃತಕ ಬುದ್ಧಿಮತ್ತೆ ಎಂಬುದು 20 ವರ್ಷಗಳ ಹಿಂದೆ ವಿಜ್ಞಾನದ ಕಾದಂಬರಿಗಳಲ್ಲಿ ಮಾತ್ರ ಕಾಣುತ್ತಿತ್ತು. 10 ವರ್ಷಗಳ ಹಿಂದೆ ಆ ಬಗ್ಗೆ ಜನರು ಕನಸು ಕಾಣಲಾರಂಭಿಸಿದರು. ಇದೀಗ ಕೃತಕ ಬುದ್ಧಿಮತ್ತೆ ನಮ್ಮ ಎದುರಿಗೇ ಇದೆ. ಮಾನವರ ಬಹುತೇಕ ಕೆಲಸವನ್ನು ಎಐ ನಿರ್ದೇಶಿತ ರೋಬೋಟ್‌ಗಳು ಮಾಡುತ್ತಿವೆ. ಇತ್ತೀಚೆಗೆ ಕೆಲಸ ಜಾಸ್ತಿಯಾಗಿ ಮಾನಸಿಕ ಒತ್ತಡ ತಾಳಲಾರದೇ ರೋಬೋಟ್‌ವೊಂದು ಆತ್ಮಹತ್ಯೆ ಮಾಡಿಕೊಂಡಿತ್ತು’ ಎಂದು ಹಿರೇಮಠ ನೆನಪಿಸಿಕೊಂಡರು.

‘ಕೃತಕ ಬುದ್ಧಿಮತ್ತೆ ಎಂಬುದು ನಾಲ್ಕನೇ ಕೈಗಾರಿಕಾ ಕ್ರಾಂತಿಯಾಗಿದೆ. ಹಲವಾರು ಬೆಳವಣಿಗೆಗಳಿಗೆ ಎಐ ಕಾರಣವಾಗಲಿದೆ’ ಎಂದರು.

ಎಚ್‌ಕೆಇ ಸೊಸೈಟಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ‘ಎಐ ಆಧುನಿಕ ಯುಗದ ತಂತ್ರಜ್ಞಾನದಲ್ಲಿ ಅನಿವಾರ್ಯವಾಗುತ್ತಿದ್ದು, ಈಗಾಗಲೇ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐ ಕುರಿತ ಬೆಳವಣಿಗೆಗಳ ಅಧ್ಯಯನಕ್ಕೆ ಒಂದು ಲ್ಯಾಬೊರೇಟರಿ ಆರಂಭಿಸಲಾಗಿದೆ. ಐಐಟಿ ಖರಗಪುರದೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮಹೇಶಕುಮಾರ್ ಗನ್ವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಯಾವುದೇ ತಂತ್ರಜ್ಞಾನ ಬಂದರೂ ಮಾನವನ ಸೃಜನಶೀಲತೆಯನ್ನು ನಕಲು ಮಾಡಲು ಸಾಧ್ಯವಿಲ್ಲ. ಚಿಂತೆ, ಚಿಂತನಗಳು ಬಹಳ ಕಾಲದಿಂದ ಮಾನವನೊಂದಿಗೆ ಬೆಳೆದುಕೊಂಡು ಬಂದಿವೆ. ಸಮಾಜ ಶಾಸ್ತ್ರಜ್ಞರಾದ ಅಗಸ್ಟ್ ಕೋಮ್ಟ್, ಹರ್ಬರ್ಟ್ ಸ್ಪೆನ್ಸರ್ ಅವರಂತಹ ಸಮಾಜ ವಿಜ್ಞಾನಿಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದರು.

ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾದ ಡಾ. ಶರಣಬಸಪ್ಪ ಹರವಾಳ, ಅರುಣಕುಮಾರ್ ಎಂ. ಪಾಟೀಲ, ಮಹಾದೇವಪ್ಪ ವಿ. ರಾಂಪುರೆ, ಸಾಯಿನಾಥ ಎನ್. ಪಾಟೀಲ, ಅನಿಲಕುಮಾರ್ ಬಿ. ಪಟ್ಟಣ, ನಾಗಣ್ಣ ಎಸ್. ಘಂಟಿ, ಕಾಲೇಜಿನ ಪ‍್ರಾಂಶುಪಾಲ ರಾಜೇಂದ್ರ ಕೊಂಡಾ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.