ADVERTISEMENT

ಸಮರ್ಪಕ ಬಸ್‌ ಸೌಲಭ್ಯ ಸೇವೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 6:38 IST
Last Updated 25 ಜೂನ್ 2024, 6:38 IST
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗೀಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಸೋಮವಾರ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗೀಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಸೋಮವಾರ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು   

ಕಲಬುರಗಿ: ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಕಲಬುರಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ, ಶಾಲಾ-ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗೀಯ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲೆಯಾದ್ಯಂತ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸುವುದು ಸೇರಿದಂತೆ ಆರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.

ಎಐಡಿಎಸ್ಒ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ‘ದೂರದ ಹಲವು ಹಳ್ಳಿ-ಪಟ್ಟಣಗಳಿಂದ ವಿದ್ಯಾರ್ಥಿಗಳು ಓದಲು ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ. ಆದರೆ, ಸಮರ್ಪಕ ಬಸ್‌ಗಳಿಲ್ಲದೇ ಅವರು ಶಾಲೆ–ಕಾಲೇಜುಗಳ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೆಕೆಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಮಾತನಾಡಿ, ‘ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಬಸ್‌ಗಳ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳ ಕಲಿಕೆಗೆ ಆಗುತ್ತಿರುವ ತೊಂದರೆಯನ್ನು ಅಧಿಕಾರಿಗಳು ಅರಿಯಬೇಕು. ಕೂಡಲೇ ಎಲ್ಲಾ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಷ್ಟು ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ನಾಗರಾಜ ರಾವೂರ, ಸಿದ್ದಾರ್ಥ ತಿಪ್ಪನೋರ, ಯುವರಾಜ ರಾಠೋಡ, ಬಾಬು, ಅಜಯ್, ಸ್ಫೂರ್ತಿ, ರಮೇಶ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.