ADVERTISEMENT

‘ಚಿನ್ನ ಕೊಟ್ಟವರಿಗೆ ಅನ್ನ ಕೊಡಲು ಆಗುತ್ತಿಲ್ಲ’

ಎಐಟಿಯುಸಿ 8ನೇ ಜಿಲ್ಲಾ ಸಮ್ಮೇಳನದಲ್ಲಿ ಚಿಂತಕ ಸಿದ್ದನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:05 IST
Last Updated 15 ಅಕ್ಟೋಬರ್ 2024, 6:05 IST
ಕಲಬುರಗಿಯಲ್ಲಿ ಸೋಮವಾರ ನಡೆದ ಎಐಟಿಯುಸಿನ 8 ಜಿಲ್ಲಾ ಸಮ್ಮೇಳನದಲ್ಲಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ ಡಿ.ಎ ಮಾತನಾಡಿದರು. ಮುಖಂಡರಾದ ಮೌಲಾಮುಲ್ಲಾ, ಮಹೇಶಕುಮಾರ ರಾಠೋಡ, ಎಚ್‌.ಎಸ್‌.ಪತಕಿ, ಸಿದ್ದನಗೌಡ ಪಾಟೀಲ, ಟಿ.ಶ್ರೀನಿವಾಸರಾವ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ನಡೆದ ಎಐಟಿಯುಸಿನ 8 ಜಿಲ್ಲಾ ಸಮ್ಮೇಳನದಲ್ಲಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ ಡಿ.ಎ ಮಾತನಾಡಿದರು. ಮುಖಂಡರಾದ ಮೌಲಾಮುಲ್ಲಾ, ಮಹೇಶಕುಮಾರ ರಾಠೋಡ, ಎಚ್‌.ಎಸ್‌.ಪತಕಿ, ಸಿದ್ದನಗೌಡ ಪಾಟೀಲ, ಟಿ.ಶ್ರೀನಿವಾಸರಾವ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಹತ್ತಾರು ಭರವಸೆಗಳು ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ರಾಯಚೂರಿನ ಗಣಿಯಲ್ಲಿ ದುಡಿದು ದೇಶಕ್ಕೆ ಚಿನ್ನ ಕೊಡುತ್ತಿರುವ ಕೂಲಿ ಕಾರ್ಮಿಕರಿಗೆ ಅನ್ನ ಕೊಡಲು ಆಗುತ್ತಿಲ್ಲ. ಇಡೀ ದೇಶಕ್ಕೆ ಸಿಮೆಂಟ್ ಪೂರೈಸುವ ಕಲಬುರಗಿಯ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯಾಗಿ ಮಾಡಲು ಆಗುತ್ತಿಲ್ಲ. ಅಧಿಕಾರದಲ್ಲಿ ಇರುವವರಿಗೆ ನಾಚಿಕೆಯಾಗಬೇಕು’ ಎಂದು ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು.

ನಗರದ ಜೆ.ಕೆ. ಫಂಕ್ಷನ್ ಹಾಲ್‌ನಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಆಯೋಜಿಸಿದ್ದ 8ನೇ ಜಿಲ್ಲಾ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಾವಿರಾರು ಜನರು ಅರ್ಜಿಗಳನ್ನು ಹಿಡಿದು ಮನೆ ಕಟ್ಟಿಸಿ ಕೊಡಿ, ನೆಲೆ ನಿಲ್ಲಲು ಚೂರು ಜಾಗ ಕೊಡುವಂತೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಬಡವರು, ರೈತರು ಹಾಗೂ ಕಾರ್ಮಿಕರಿಗೆ ತಮ್ಮ ಹಕ್ಕುಗಳನ್ನು ಕೇಳಿ ಪಡೆಯಲು ವೇದಿಕೆಯಾದರೂ ಎಲ್ಲಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಬಂದು ಒಂದು ದಶಕ ಕಳೆದಿದೆ. ಅಭಿವೃದ್ಧಿಯಲ್ಲಿ ಎಷ್ಟು ಸೆಂಟಿಮೀಟರ್ ಮುಂದೆ ಹೋಗಿದ್ದೇವೆ? ಅಭಿವೃದ್ಧಿ ಎಂದರೆ ರಸ್ತೆ, ಕಟ್ಟಡಗಳ ನಿರ್ಮಾಣವಾ? ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಭಾಗದ ಜಿಲ್ಲೆಗಳು ಏಕೆ ಹಿಂದೆ ಬೀಳುತ್ತಿವೆ? ಬಡವರು, ರೈತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಯಾರಾದರೂ ಯೋಚನೆ ಮಾಡುತ್ತಿದ್ದಾರಾ’ ಎಂದು ಕೇಳಿದರು.

‘ದುಡಿಯುವರು ಬೀದಿಯಲ್ಲಿ ಕುಳಿತರೆ ಪ್ರಧಾನಿಯನ್ನೇ ಮಣಿಸಬಹುದು ಎಂಬುದನ್ನು ಸಾವಿರಾರು ರೈತರು ದೆಹಲಿಯಲ್ಲಿ ಹೋರಾಟದ ಮೂಲಕ ಸಾಬೀತುಪಡಿಸಿದ್ದಾರೆ. 90 ಕೋಟಿಯಷ್ಟು ಇರುವ ಸಣ್ಣ ರೈತರು, ಸಂಘಟಿತ– ಅಸಂಘಟಿತ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಮನಸ್ಸು ಮಾಡಿ ಒಂದಾದರೆ ಬಿಜೆಪಿ, ಕಾಂಗ್ರೆಸ್ಸಿಗರನ್ನು ಸೋಲಿಸಬಹುದು. ಇನ್ನೊಬ್ಬರ ಮುಂದೆ ಕೈಯೊಡ್ಡಿ ನಿಂತು ಕೇಳುವ ಬದಲು ನಾವೇ ಅಧಿಕಾರ ನಡೆಸಬಹುದು. ಅಂತಹ ದಿನಗಳೂ ಬರಲಿವೆ’ ಎಂದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ. ಮಾತನಾಡಿ, ‘ಕಾರ್ಮಿಕರು ಮತ್ತು ರೈತರು ತಮ್ಮ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ಭದ್ರತೆಯ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ. ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಕೊಡುತ್ತಿದೆ. ಆದರೆ, ಕೃಷಿಕರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದೆ’ ಎಂದು ಹೇಳಿದರು.

‘ವ್ಯವಹಾರ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಪ್ರಧಾನಿ ಮೋದಿ, ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಯರ ಕೈಯಲ್ಲಿ ಇರಿಸುತ್ತಿದ್ದಾರೆ. ಚುನಾವಣೆ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನೂ ಒಳಗಿನಿಂದಲೇ ಬಲಹೀನಗೊಳಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡು ರಾಜಕೀಯ ತೀರ್ಮಾನ ತೆಗೆದುಕೊಂಡು ಹೋರಾಟ ರೂಪಿಸಬೇಕಿದೆ’ ಎಂದು ಸಲಹೆ ನೀಡಿದರು.

ಡಾ.ಪಿ.ಸಂಪತರಾವ್, ವಕೀಲ ಪಿ.ವಿಲಾಸಕುಮಾರ, ಕೆಎಸ್‌ಆರ್‌ಟಿಸಿ ಎಸ್‌ಡಬ್ಲ್ಯು ಫೆಡರೇಷನ್‌ನ ರಾಜ್ಯ ಕಾರ್ಯಾಧ್ಯಕ್ಷ ಸಿದ್ದಪ್ಪ ಪಾಲ್ಕಿ ಹಾಗೂ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಶಾರದಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಎಐಟಿಯುಸಿ ಮುಖಂಡರಾದ ಟಿ.ಶ್ರೀನಿವಾಸರರಾವ್, ಮಹೇಶಕುಮಾರ ರಾಠೋಡ, ಮೌಲಾಮುಲ್ಲಾ, ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ, ಶಿವಲಿಂಗಮ್ಮ ಲೇಂಗಟಿಕರ್, ಹಣಮಂತರಾಯ ಎಸ್‌.ಅಟ್ಟೂರ, ಅಬ್ದುಲ್ ಕಲೀಂ ಉಪಸ್ಥಿತರಿದ್ದರು.

ಮೋದಿಗಿಂತ ಕಾಂಗ್ರೆಸ್ಸಿಗರು ಕಡಿಮೆಯಿಲ್ಲ’

‘ಗುತ್ತಿಗೆ ನೌಕರರ ವೇತನದ ಮೇಲೆ ಶೇ 18ರಷ್ಟು ಜಿಎಸ್‌ಟಿ ಸುಲಿಯುತ್ತಿರುವ ರಾಜ್ಯ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿ ಅವರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ’ ಎಂದು ವಿಜಯಭಾಸ್ಕರ್ ಡಿ.ಎ. ವಾಗ್ದಾಳಿ ನಡೆಸಿದರು. ‘ವಿಧಾನಸಭಾ ಚುನಾವಣೆ ವೇಳೆ ಸ್ಕೀಂ ವರ್ಕರ್‌ ವೇತನ ಹೆಚ್ಚಳ ಭತ್ಯೆಯಂತಹ ಬೇಡಿಕೆಗಳ ಪಟ್ಟಿಯನ್ನು ಪ್ರಿಯಾಂಕಾ ಗಾಂಧಿ ಅವರಿಗೆ ಸಲ್ಲಿಸಿದ್ದೇವು. ಗೆದ್ದ ಬಳಿಕ 6ನೇ ಗ್ಯಾರಂಟಿಯಾಗಿ ಜಾರಿಗೆ ತರುವ ಆಶ್ವಾಸನೆಯೂ ನೀಡಿದ್ದರು. ಇದುವರೆಗೂ ಅವುಗಳು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಹೇಳಿದರು. ‘ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಸಿಎಂ ಸಿದ್ದರಾಮಯ್ಯ ಅವರು ಕನಿಷ್ಠ ಭೇಟಿಗೂ ಅನುಮತಿ ನೀಡಲಿಲ್ಲ. ಮುಖ್ಯಮಂತ್ರಿಗಳ ಕಾರ್ಮಿಕರ ವಿರೋಧಿ ಧೋರಣೆಗೆ ಧಿಕ್ಕಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.