ADVERTISEMENT

ಆಳಂದ ಬಿಇಒ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 4:45 IST
Last Updated 27 ಜೂನ್ 2024, 4:45 IST

ಕಲಬುರಗಿ: ಶಿಕ್ಷಕಿಯೊಬ್ಬರ ಗಳಿಕೆ ರಜೆ ನಗದೀಕರಣಕ್ಕೆ ಲಂಚದ ಬೇಡಿಕೆ ಇರಿಸಿದ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹಣಮಂತ ರಾಠೋಡ್ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಅನಧಿಕೃತ ಗೈರು ಹಾಗೂ ಲಂಚದ ಪ್ರಕರಣದಲ್ಲಿ ಶಿಕ್ಷಕರೊಬ್ಬರಿಂದ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೇ 18ರಿಂದ ಅಮಾನತು ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಶ್ರೀಚಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಾವಿತ್ರಿಬಾಯಿ ಅವರ ಗಳಿಕೆ ರಜೆ ನಗದೀಕರಣ ಮಾಡಿಕೊಡಲು ಹಣಮಂತ ಅವರು ₹50 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಹಣಮಂತ ಪರವಾಗಿ ಶಿಕ್ಷಕ ರಾಧಾಕೃಷ್ಣ ಬಸವಣ್ಣಪ್ಪ ಅವರು ಮೇ 17ರಂದು ಹಣ ಪಡೆಯುವಾಗ ಲೋಕಾಯುಕ್ತರ ದಾಳಿಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದರು. ಆ ಬಳಿಕ ಪ್ರಮುಖ ಆರೋಪಿ ಹಣಮಂತ ಅವರು ತಲೆಮರಿಸಿಕೊಂಡಿದ್ದು, ಅಂದಿನಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರು.

ADVERTISEMENT

ಸರ್ಕಾರಿ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟು ರಾಧಾಕೃಷ್ಣ ಮೂಲಕ ಹಣ ಪಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ. ನಿಯಮಗಳ ಪ್ರಕಾರ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.