ADVERTISEMENT

ಆಡಂಬರದ ಮದುವೆ ಅನಗತ್ಯ: ರಾಜಶೇಖರ ಶ್ರೀ

ಮಾದನ ಹಿಪ್ಪರಗಿ: ಸಾಮೂಹಿಕ ವಿವಾಹ, ಸಾಸಿರನಾಡಿ ಸಾಧಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 13:39 IST
Last Updated 14 ಡಿಸೆಂಬರ್ 2023, 13:39 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವಜೋಡಿಗಳಿಗೆ ಸದಾಶಿವ ಸ್ವಾಮೀಜಿ, ಅಭಿನವ ಶಿವಲಿಂಗ ಸ್ವಾಮೀಜಿ, ಸುಭಾಷ ಗುತ್ತೇದಾರ ಆಶೀರ್ವದಿಸಿದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವಜೋಡಿಗಳಿಗೆ ಸದಾಶಿವ ಸ್ವಾಮೀಜಿ, ಅಭಿನವ ಶಿವಲಿಂಗ ಸ್ವಾಮೀಜಿ, ಸುಭಾಷ ಗುತ್ತೇದಾರ ಆಶೀರ್ವದಿಸಿದರು   

ಆಳಂದ: ‘ದಾಂಪತ್ಯ ಜೀವನ ಆರಂಭಿಸುವ ನವಜೋಡಿಗಳು ಮತ್ತು ಅವರ ಕುಟುಂಬಸ್ಥರು ಪ್ರತಿಷ್ಠೆಗಾಗಿ ಮಾಡುವ ಆಡಂಬರದ ಮದುವೆಗಳು ಅನಗತ್ಯವಾಗಿವೆ’ ಎಂದು ನಂದಗಾಂವನ ರಾಜಶೇಖರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಶಿವಲಿಂಗೇಶ್ವರ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮತ್ತು ಶಿವಲಿಂಗ ಸ್ವಾಮೀಜಿಗಳ ಪುಣ್ಯಸ್ಮರಣೆ ಹಾಗೂ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಹಾಗೂ ಸಾಸಿರನಾಡಿ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಹಾವೇರಿಯ ಸದಾಶಿವ ಸ್ವಾಮೀಜಿ ಮಾತನಾಡಿ, ‘ಮಠಮಾನ್ಯಗಳು ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿವೆ. ಸಂಘ, ಸಂಸ್ಥೆಗಳು ಸಹ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಬೇಕು. ಶ್ರೀಮಂತರು ಮದುವೆಗಾಗಿ ಸಾವಿರಾರೂ ಕೋಟಿ ವ್ಯಯ ಮಾಡುವದರಿಂದ ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಅದ್ದೂರಿ ಮದುವೆ ಹೊರೆಯಾಗುತ್ತಿವೆ’ ಎಂದರು.

ADVERTISEMENT

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು. 

ಶಹಾಪುರದ ಗುರುಪಾದ ಸ್ವಾಮೀಜಿ, ಹತ್ತಿಕಣಮಸದ ಪ್ರಭುಶಾಂತ ಸ್ವಾಮೀಜಿ, ದುದನಿಯ ಶಾಂತಲಿಂಗ ಸ್ವಾಮೀಜಿ, ಮೈಂದರ್ಗಿಯ ಮಹಾಂತ ಸ್ವಾಮೀಜಿ, ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿವಲಿಂಗೇಶ್ವರ ವಿರಕ್ತ ಮಠದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಸಾಸಿರನಾಡಿನ ಸಾಧಕ ಪ್ರಶಸ್ತಿಯನ್ನು ಕಾದಂಬರಿಕಾರ ಲಕ್ಷ್ಮಣ ಕೌಂಟೆ ಅವರಿಗೆ ಪ್ರಧಾನ ಮಾಡಲಾಯಿತು.

ವೇದಿಕೆ ಮೇಲೆ ಮಾಡಿಯಾಳದ ಮರುಳಸಿದ್ಧ ಸ್ವಾಮೀಜಿ, ಪ್ರಮುಖರಾದ ರಾಜಕುಮಾರ ಸಲಗರ, ಸುರೇಖಾ ಯಾದಗಿರಿ, ಪೂಜಾ ಸಾಕರೆ, ಡಾ.ಯಲ್ಲಪ್ಪ ಇಂಗಳೆ, ತಾರಾಬಾಯಿ ಪಾಟೀಲ ಇದ್ದರು.

ತಾಲ್ಲೂಕಿನ ಮಾದನ ಹಿಪ್ಪರಗಿ ಸೇರಿದಂತೆ ಸುತ್ತಲಿನ ಗ್ರಾಮದ 8 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಪಾರ ಸಂಖ್ಯೆಯಲ್ಲಿ ಬಂಧುಮಿತ್ರರು, ಮಠದ ಭಕ್ತರು ಭಾಗವಹಿಸಿದ್ದರು.

ನೂರಂದಯ್ಯ ಸ್ವಾಮಿ ನೇತೃತ್ವದಲ್ಲಿ ಕಲಾವಿದರಿಂದ ಗಾಯನ ನಡೆಯಿತು. ಕಳೆದ ಐದು ದಿನಗಳಿಂದ ಜಾನುವಾರು ಜಾತ್ರೆ ಆಯೋಜಿಸಿದ್ದರಿಂದ ಗಡಿಭಾಗದ ರೈತರು ಅಧಿಕ ಸಂಖ್ಯೆಯಲ್ಲಿ ಜಾನುವಾರು ಮಾರಾಟ, ಖರೀದಿಯಲ್ಲಿ ನಿರತರಾಗಿದ್ದರು. ಮಠದವತಿಯಿಂದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಜರುಗಿತು.

ಾಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿವಲಿಂಗೇಶ್ವರ ವಿರಕ್ತಮಠದಿಂದ ಸಾಸಿರನಾಡಿನ ಸಾಧಕ ಪ್ರಶಸ್ತಿಯನ್ನು ಕಾದಂಬರಿಕಾರ ಡಾ.ಲಕ್ಷ್ಮಣ ಕೌಂಟೆಗೆ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.