ADVERTISEMENT

ಆಳಂದ | ಪದವಿ ಪೂರ್ವ ಶಿಕ್ಷಣ; ಗುಣಮಟ್ಟದ ಬೋಧನೆಗೆ ಗ್ರಹಣ

ಆಳಂದ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜುಗಳ ಫಲಿತಾಂಶ ಕುಸಿತ, ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:09 IST
Last Updated 23 ಜೂನ್ 2024, 5:09 IST
<div class="paragraphs"><p>ಆಳಂದದ ಹೆಬಳಿ ರಸ್ತೆಯ ಸರ್ಕಾರಿ ಬಾಲಕಿಯರ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಹೊರಟ ವಿದ್ಯಾರ್ಥಿನಿಯರು</p></div><div class="paragraphs"><p></p></div>

ಆಳಂದದ ಹೆಬಳಿ ರಸ್ತೆಯ ಸರ್ಕಾರಿ ಬಾಲಕಿಯರ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಹೊರಟ ವಿದ್ಯಾರ್ಥಿನಿಯರು

   

ಆಳಂದ: ತಾಲ್ಲೂಕಿನಲ್ಲಿ 9 ಸರ್ಕಾರಿ ಪಿಯು ಕಾಲೇಜುಗಳಿವೆ. ಮಾದನ ಹಿಪ್ಪರಗಿ ಮತ್ತು ಯಳಸಂಗಿ ಪಿಯು ಕಾಲೇಜು ಹೊರತು ಪಡೆಸಿದರೆ ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಶೈಕ್ಷಣಿಕ ಗುಣಮಟ್ಟ ಕುಸಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.

ADVERTISEMENT

ಪಟ್ಟಣಲ್ಲಿರುವ ಸರ್ಕಾರಿ ಬಾಲಕರ ಪಿಯು ಕಾಲೇಜು ಹಾಗೂ ಬಾಲಕಿಯರ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ಪ್ರವೇಶದಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ ಮಾರ್ಚ್‌ ಪರೀಕ್ಷೆಯ ಫಲಿತಾಂಶವು ಶೇ 40ರಷ್ಟು ಇಲ್ಲ.

ಸರ್ಕಾರಿ ಬಾಲಕರ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 5 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 22, ಕಲಾ ವಿಭಾಗದಲ್ಲಿ 34 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಇವರೆಗೆ ಕಲಾ ವಿಭಾಗದಲ್ಲಿ 17, ವಿಜ್ಞಾನ 8, ವಾಣಿಜ್ಯ 3 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಸರಿಯಾಗಿ ತರಗತಿಗಳೇ ನಡೆಯುವುದಿಲ್ಲ. ಪರೀಕ್ಷೆ, ಮೌಲ್ಯ ಮಾಪನ, ಚುನಾವಣೆ ಮತ್ತಿತರ ನೆಪದಲ್ಲಿ ಉಪನ್ಯಾಸಕರು ತರಗತಿ ತೆಗೆದು ಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ನೇರವಾಗಿ ಉಪನ್ಯಾಸಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಾರೆ.

‘ವಿಜ್ಞಾನದ ಪ್ರಯೋಗಾಲಯವನ್ನು ವರ್ಷಕ್ಕೆ ಎರಡು ಬಾರಿಯೂ ತೆರೆಯುದಿಲ್ಲ. ಅದು ದೂಳು ಹಿಡಿದಿದೆ. ಕಾಲೇಜು ಸಂಕೀರ್ಣದಲ್ಲಿ ಪದವಿ ಕಾಲೇಜು, ಪ್ರೌಢಶಾಲೆಯೂ ಇದೆ. ಪಿಯು ಕಾಲೇಜಿಗೆ ಕಟ್ಟಡ ವ್ಯವಸ್ಥೆ ಮತ್ತಿತರ ಸೌಲಭ್ಯಗಳು ಇದ್ದರೂ ಸದ್ಬಳಕೆ ಮಾಡಿಕೊಳ್ಳುವದಿಲ್ಲ. ಇದಕ್ಕೆ ಸಿಬ್ಬಂದಿ ನಿರ್ಲಕ್ಷವೂ ಕಾರಣವಾಗಿದೆ’ ಎಂದು ಅಸ್ಪಾಕ್‌ ಮುಲ್ಲಾ ಆಪಾದಿಸಿದರು.

ಆಳಂದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿಂತ ಮಳೆ ನೀರು

ಹೆಬಳಿ ರಸ್ತೆಯ ಹೊಸ ಕಟ್ಟಡದಲ್ಲಿ  ಸರ್ಕಾರಿ ಬಾಲಕಿಯರ ಕಾಲೇಜು ನಡೆಯುತ್ತಿದೆ. ಈ ಹಿಂದೆ ಹಳೆಯ ತಹಶೀಲ್ದಾರ್‌ ಕಚೇರಿಯಲ್ಲಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಎಂಟು ನೂರಕ್ಕೂ ಅಧಿಕವಾಗಿತ್ತು. ಈಗ ಪಟ್ಟಣದಿಂದ 2 ಕಿ.ಮೀ ದೂರ ದಲ್ಲಿ ಕಾಲೇಜು ಇರುವುದರಿಂದ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲಿ ತೆರಳಬೇಕು. ಪ್ರಸಕ್ತ ವರ್ಷ ಎರಡು ನೂರು ವಿದ್ಯಾರ್ಥಿನಿಯರು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟು 13 ಸಿಬ್ಬಂದಿಯಲ್ಲಿ 6 ಹುದ್ದೆಗಳು ಖಾಲಿ ಇವೆ.

ನಿಂಬರ್ಗಾ ಹೋಬಳಿ ಕೇಂದ್ರದಲ್ಲಿ 8ಕ್ಕೂ ಹೆಚ್ಚು ಪ್ರೌಢಶಾಲೆಗಳ ವ್ಯಾಪ್ತಿ ಒಳಗೊಂಡ ಇಲ್ಲಿಯ ಪಿಯು ಕಾಲೇಜಿನಲ್ಲಿಯೂ ಪ್ರಥಮ ವರ್ಷದ ಪ್ರವೇಶ ಅಷ್ಟಕಷ್ಟೆ. ವಿಜ್ಞಾನ ವಿಭಾಗದಲ್ಲಿ 20, ಕಲಾ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಕಳೆದ ಬಾರಿಯ ಫಲಿತಾಂಶ ಮಾತ್ರ ಶೇ 36ರಷ್ಟು. ಹೊಸ ಕಟ್ಟಡ, ಮೂಲ ಸೌಲಭ್ಯಗಳು ಒದಗಿಸಿದರೂ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಹೆಚ್ಚಲಿಲ್ಲ. ಕಳೆದ ನಾಲ್ಕು ವರ್ಷದಿಂದ ವಾಣಿಜ್ಯ ವಿಭಾಗಕ್ಕೆ ಯಾರೂ ಪ್ರವೇಶ ಪಡೆದಿಲ್ಲ. ಹೀಗಾಗಿ ವಾಣಿಜ್ಯ ವಿಭಾಗ ಸದ್ಯಕ್ಕೆ ಮುಚ್ಚಲಾಗಿದೆ.

ನರೋಣಾ ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ 28, ವಿಜ್ಞಾನ ವಿಭಾಗದಲ್ಲಿ 9 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇಳಿಕೆ ಹಾಗೂ ಕಲಬುರಗಿ ಪಟ್ಟಣ ಸಮೀಪ ಇರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಾರೆ ಎಂದು ಪ್ರಾಚಾರ್ಯ ಅಮೃತ ಬೆಳಮಗಿ ತಿಳಿಸಿದರು.

ಹೊಸದಾಗಿ ಆರಂಭವಾದ ಖಜೂರಿ, ಸರಸಂಬಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದಾರೆ. ಆಳಂದದ ಪ್ರಾಚಾರ್ಯರಿಗೆ ಇಲ್ಲಿಯ ಪ್ರಭಾರ ನೀಡಲಾಗಿದೆ. ಇಲ್ಲಿಯ ಎರಡು ಹೊಸ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದ್ದರೂ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ ಎಂದು ಖಜೂರಿ ಗಂಗಾಧರ ಕುಂಬಾರ ತಿಳಿಸಿದರು.

ತಾಲ್ಲೂಕಿನ ಮಾದನಹಿಪ್ಪರಗಿ ಮತ್ತು ಯಳಸಂಗಿ ಪಿಯು ಕಾಲೇಜುಗಳ ಫಲಿತಾಂಶವು ಸತತವಾಗಿ ಉತ್ತಮ ವಾಗಿದೆ. ಮಾದನಹಿಪ್ಪರಗಿ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಕಲಾ ವಿಭಾಗದಲ್ಲಿ ನೂರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಳೆದ ಫಲಿತಾಂಶವು ಶೇ 84ರಷ್ಟು ಬಂದಿದೆ. ಅಗತ್ಯ ಮೂಲ ಸೌಲಭ್ಯಗಳು ಇವೆ. ಯಳಸಂಗಿ ಕಾಲೇಜಿಗೆ ಪ್ರಸಕ್ತ ವರ್ಷ ಶೇ 95ರಷ್ಟು ಫಲಿತಾಂಶ ಲಭಿಸಿದೆ. ಹೀಗಾಗಿ ಯಳಸಂಗಿ, ಮಾಡಿಯಾಳ, ನಿಂಬಾಳ ಪ್ರೌಢ ಶಾಲೆಗಳ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಮುಂದಾಗುತ್ತಿದ್ದಾರೆ.

ಹೆಚ್ಚು ಕಾಡುವ ಉಪನ್ಯಾಸಕರ ಕೊರತೆ

ತಾಲ್ಲೂಕಿನಲ್ಲಿ ಸದ್ಯದ ಪಿಯು ಕಾಲೇಜುಗಳಲ್ಲಿ ಬಹುತೇಕ ಕಾಲೇಜುಗಳು ಸ್ವಂತ ಕಟ್ಟಡ ಹಾಗೂ ಅಗತ್ಯ ಮೂಲಸೌಲಭ್ಯ ಹೊಂದಿವೆ. ಆದರೆ ಉಪನ್ಯಾಸಕರ ಕೊರತೆ ಮಾತ್ರ ಹೆಚ್ಚು ಕಾಡುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಶಿಕ್ಷಣಕ್ಕೆ ಆದ್ಯತೆ ದೊರೆಯುತ್ತಿಲ್ಲ. ಇದು ಸಹ ಪ್ರವೇಶದ ಮೇಲೆ ಪರಿಣಾಮ ಬೀರಿದೆ. ಪಡಸಾವಳಿ ಸೇರಿದಂತೆ ಮತ್ತೆ 5 ಹೊಸ ಕಾಲೇಜುಗಳಿಗೆ ಅನುಮೋದನೆ ಲಭಿಸಿದ್ದು ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿದರೆ ಸಾಲದು ಅವುಗಳ ಗುಣಮಟ್ಟವು ಉತ್ತಮವಾಗಬೇಕು.

ಮಾದನ ಹಿಪ್ಪರಗಿ ಗಡಿಭಾಗದಲ್ಲಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರವೇಶ ಪಡೆಯಲು ಉತ್ಸುಕರಾಗಿದ್ದಾರೆ. ಪದವಿ ಕಾಲೇಜು ಇರುವುದರಿಂದ ವಿಜ್ಞಾನ ವಿಭಾಗಕ್ಕೆ ಅವಕಾಶ ಸಿಕ್ಕರೆ ಅನುಕೂಲವಾಗಲಿದೆ.
ರಮೇಶ ಕುಲಕರ್ಣಿ, ಪ್ರಾಚಾರ್ಯ, ಮಾದನ ಹಿಪ್ಪರಗಿ ಪಿಯು ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.