ADVERTISEMENT

ಅಫಜಲಪುರ | ಕಳಪೆ ಕಾಮಗಾರಿ: ಸೋರುವ ಮಾಶಾಳ ಸರ್ಕಾರಿ ಕಾಲೇಜು ಕಟ್ಟಡ

ಶಿವಾನಂದ ಹಸರಗುಂಡಗಿ
Published 3 ಆಗಸ್ಟ್ 2024, 6:04 IST
Last Updated 3 ಆಗಸ್ಟ್ 2024, 6:04 IST
ಅಫಜಲಪುರ ತಾಲ್ಲೂಕಿನ  ಮಾಶಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಮೇಲ್ಚಾಣೆ ಮೇಲೆಮಳೆ ನೀರು ನಿಂತಿರುವುದು.
ಅಫಜಲಪುರ ತಾಲ್ಲೂಕಿನ  ಮಾಶಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಮೇಲ್ಚಾಣೆ ಮೇಲೆಮಳೆ ನೀರು ನಿಂತಿರುವುದು.   

ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಜತೆಗೆ ಕಾಮಗಾರಿ ಕಳಪೆಯಾಗಿದ್ದು, ಚಾವಣಿ ಮೇಲೆ ಮಳೆ ನೀರು ಸಂಗ್ರಹಗೊಂಡು ಕಟ್ಟಡ ಸೋರುತ್ತಿದ್ದು, ಗೋಡೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಲೇಜು ಕಟ್ಟಡ ನಿರ್ಮಿಸಿ ಐದು ವರ್ಷಗಳು ಕಳೆದಿವೆ. ಕಳಪೆ ಕಾಮಗಾರಿಯಿಂದ ಕಟ್ಟಡದ ಚಾವಣಿ ಮೇಲೆ ಮಳೆ ನೀರು ಸಂಗ್ರಹಗೊಂಡು ಕೊಠಡಿಗಳು ಸೋರುತ್ತಿವೆ. ಕಟ್ಟಡದ ಕಡೆ ಗೋಡೆ ಬಿರುಕು ಬಿಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆ ಆಗುತ್ತದೆ. ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ವಿಳಂಬವಾದರೆ ಕಟ್ಟಡ ನೀರಲ್ಲಿ ನೆನೆದು ಹಾಳಾಗುತ್ತದೆ. ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗುತ್ತದೆ’ ಎಂದು ಗ್ರಾಮಸ್ಥರು ತಿಳಿಸಿದರು.

‘ಸರ್ಕಾರ ಗ್ರಾಮೀಣ ಭಾಗದಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಿದ್ದು ಉತ್ತಮ ಬೆಳವಣಿಗೆ. ಕಟ್ಟಡ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು, ಇಲಾಖೆಯವರು ಅವರು ಕಟ್ಟಡವನ್ನು ನಿರ್ಮಿಸುವಾಗ ಗಮನ ಹರಿಸಿಲ್ಲ. ಕಟ್ಟಡ ಮುಗಿದ ಮೇಲೆ ಕಾಲೇಜಿನ ಆಡಳಿತ ಮಂಡಳಿಗೆ ಹಸ್ತಾಂತರ ಮಾಡುವಾಗ ಕಟ್ಟಡ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕಟ್ಟಡ ಪರಿಶೀಲನೆ ನಡೆಸಿ, ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ADVERTISEMENT

‘ನೀರು ಹರಿದು ಹೋಗುವಂತೆ ಶೀಘ್ರ ಕ್ರಮ’

‘ಮಾಶಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕಟ್ಟಡದ ಮಳೆ ಸಂಗ್ರಹಗೊಳ್ಳಲು ಕಾರಣವೇನು ಎಂಬುದರ ಕುರಿತು ಮಾಹಿತಿ ಪಡೆಯಲಾಗುವುದು. ಕಟ್ಟಡ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳಲಾಗುವುದು. ಕಟ್ಟಡ ದುರಸ್ತಿಗೊಳಿಸಿ, ಮಳೆಯ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲಕ್ಷ್ಮಿಕಾಂತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.