ಕಲಬರುಗಿ: ‘ಡಾ.ಅಂಬೇಡ್ಕರ್ ಅವರು ಸವಾಲುಗಳನ್ನು ಧೈರ್ಯದಿಂದ ಎದುರಿಸಿದ್ದಾರೆ. ಮಾನವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಎಂ. ಬಾಯಿನ ಹೇಳಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಹೋರಾಡಿದ್ದಾರೆ. ಭಾರತೀಯ ಸಮಾಜದ ದಮನಿತ ವರ್ಗಗಳ ಉನ್ನತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಸೂರ್ಯ ಚಂದ್ರರು ಇರುವವರೆಗೂ ಅವರ ಹೆಸರು ಅಜರಾಮರ. ಅವರು ಭಾರತೀಯ ಸಮಾಜದಲ್ಲಿ ಸಾಮರಸ್ಯವನ್ನು ಸೃಷ್ಟಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ವಕೀಲ ಶ್ರೀಧರ್ ಪ್ರಭು ಮಾತನಾಡಿ, ‘ಡಾ.ಅಂಬೇಡ್ಕರ್ ಅವರು ಭಾರತದ ದಮನಿತ ವರ್ಗಗಳನ್ನು ತಲೆಮಾರುಗಳಿಂದ ಅನುಭವಿಸಿದ ತೊಳಲಾಟದಿಂದ ತಮ್ಮ ಹೋರಾಟಗಳ ಮೂಲಕ ಮುಕ್ತಗೊಳಿಸಿದ್ದಾರೆ. ಸಂವಿಧಾನದ ಚೌಕಟ್ಟಿನೊಳಗೆ ಸಾಮಾಜಿಕ–ರಾಜಕೀಯ ಸಮಸ್ಯೆಗಳನ್ನು ಪರಿಹರಿಸಲು ಅವರು ಒತ್ತು ನೀಡಿದ್ದಾರೆ. ಭಾರತದಲ್ಲಿ ಆಡಳಿತಗಾರರು ಮತ್ತು ಪ್ರಜೆಗಳು ಎಂಬ ಎರಡು ಪ್ರತ್ಯೇಕ ಗುಂಪುಗಳಿಲ್ಲ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಒಂದೇ ಮತ್ತು ಸಮಾನರು’ ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಮಾತನಾಡಿ, ‘ಡಾ.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ದಮನಿತ ವರ್ಗಗಳ ಸಾಮಾಜಿಕ–ಆರ್ಥಿಕ ಉನ್ನತಿಗಾಗಿ ಅವರ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರೊ.ಬಸವರಾಜ ಡೋಣೂರ, ಪ್ರೊ.ಪಿ.ರಾಘವಯ್ಯ, ಪ್ರೊ.ಜಿ.ಆರ್.ಅಂಗಡಿ, ಪಿ.ಎಸ್. ಕಟ್ಟಿಮನಿ, ವೆಂಕಟರಮಣ ದೊಡ್ಡಿ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಯೋಜಕ ಡಿ.ಗೌತಮ ಸ್ವಾಗತಿಸಿದರು. ಕೋಮಲ್ ಮತ್ತು ಕಾವೇರಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಆಯುಸ್ ನಿರೂಪಿಸಿದರು. ಸಂಗಮೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.