ಕಲಬುರಗಿ: ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನೋತ್ಸವದ ಅಂಗವಾಗಿ ಭಾನುವಾರ ಜಗತ್ ವೃತ್ತದಲ್ಲಿ ಸಂತಸದ ‘ಹೊನಲು’ ಹಬ್ಬಿತು. ನಗರದಾದ್ಯಂತ ಇಡೀ ದಿನ ‘ಅಂಬೇಡ್ಕರ್ ಹಬ್ಬ’ದ ವಾತಾವರಣ ನಿರ್ಮಾಣವಾಗಿ ನೀಲಿ ಬಾವುಟಗಳು ರಾರಾಜಿಸಿದವು. ಎಲ್ಲೆಲ್ಲೂ ‘ಜೈ ಭೀಮ್’ ಘೋಷಣೆಗಳು ಮೊಳಗಿದವು.
ಹರಿಯುವ ನದಿಗಳು ಸಮುದ್ರದತ್ತ ಓಡುವಂತೆ ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು, ಯುವಕರು, ಮಹಿಳೆಯರು ಮಕ್ಕಳು ತಂಡೋಪತಂಡವಾಗಿ ಇಡೀ ದಿನ ಜಗತ್ ವೃತ್ತದಲ್ಲಿನ ಬಾಬಾ ಸಾಹೇಬರ ಪ್ರತಿಮೆಯತ್ತ ಹೆಜ್ಜೆ ಹಾಕಿದರು. ಸಹಸ್ರಾರು ಜನರ ಸ್ವಾಗತಕ್ಕಾಗಿ ಜಗತ್ ವೃತ್ತವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ನೀಲಿಮಯವಾಗಿದ್ದವು.
ಹೀರಾಪುರ, ಸಿದ್ಧಾರ್ಥ ನಗರ, ತಾರಫೈಲ್, ರಾಜಾಪುರ, ಸುಂದರ ನಗರ, ಗುಲ್ಲಾಬವಾಡಿ, ಗಾಂಧಿನಗರ ಸೇರಿದಂತೆ ವಿವಿಧ ಭಾಗಗಳಿಂದ ಯುವಕರು, ಮಹಿಳೆಯರು, ಮಕ್ಕಳು ಮೆರವಣಿಗೆಗಳಲ್ಲಿ ಉತ್ಸಾಹದಿಂದ ಬಂದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪ್ರತಿಮೆ ಮುಂಭಾಗದಲ್ಲಿ ಪುಷ್ಪನಮನ ಸಲ್ಲಿಸಿ, ಮೇಣದ ಬತ್ತಿ, ಅಗರಬತ್ತಿ ಬೆಳಗಿ ಭಕ್ತಿಯಿಂದ ನಮಿಸಿದರು.
ಪ್ರತಿಮೆಯ ಮುಂದೆ ನಿಂತು ಯುವಕ, ಯುವತಿಯರು, ಕುಟುಂಬ ಸದಸ್ಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಪುರುಷ ಮತ್ತು ಮಹಿಳಾ ಭಜನಾ ಮಂಡಳಿಗಳು ಭೀಮ ಗೀತೆ, ಅಂಬೇಡ್ಕರ್ ಜೀವನ ಚರಿತ್ರೆಯ ಗೀತ ಗಾಯನ ಸುಧೆ ಹರಿಸಿದರು. ಗಾಯನಕ್ಕೆ ಮೆಚ್ಚಿ ನೆರೆದವರು ಹಣದ ಕಾಣಿಕೆ ನೀಡಿದರು.
ಯುವಕರ ನಾನಾ ತಂಡಗಳು ತಂಡೋಪತಂಡವಾಗಿ ಡಿ.ಜೆ. ಸಂಗೀತಕ್ಕೆ ಸುಡು ಬಿಸಿಲಲ್ಲಿ ಕುಣಿದು ಸಂಭ್ರಮಿಸಿದರು. ಕುಣಿತದೊಂದಿಗೆ ಮುಂದೆ ಸಾಗುತ್ತಿದ್ದಂತಯೇ ಅಂಬೇಡ್ಕರ್ ಅವರ ಭಾವಚಿತ್ರಗಳು, ಮೂರ್ತಿಗಳು ಹಿಂದೆಯೇ ಸಾಗಿದವು. ಈ ವೇಳೆ ‘ಜೈ ಜೈ ಜೈ ಭೀಮ್’ ಘೋಷಣೆಗಳು ಅನುರಣಿಸಿದವು.
ಯುವಕರ ಗುಂಪುಗಳು ಅಂಬೇಡ್ಕರ್ ಭಾವಚಿತ್ರ, ನೀಲಿ ಬಾವುಟಗಳೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಮಾರುಕಟ್ಟೆ, ಹಳೇ ಚೌಕ್, ಬಂಬೂ ಬಜಾರ್ ಸೇರಿದಂತೆ ಹಲವೆಡೆ ಬೈಕ್ ರ್‍ಯಾಲಿ ನಡೆಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಶುಭಾಶಯ ಕೋರಿದರು.
ಅಂಬೇಡ್ಕರ್ ಜಯಂತ್ಯುತ್ಸ ಸಮಿತಿಯ ಆಹ್ವಾನದ ಮೇರೆಗೆ ಬಂದ ಸಿನಿಮಾ ನಟ ದುನಿಯಾ ವಿಜಯ್ ಅವರನ್ನು ಅದ್ದೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಸನ್‌ರೂಫ್ ಕಾರಿನಲ್ಲಿ ನಿಂತ ವಿಜಯ್, ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಅಭಿಮಾನಿಗಳತ್ತ ಕೈಬೀಸಿದರು.
ಜಯಂತಿ ಪ್ರಯುಕ್ತ ವಿವಿಧೆಡೆ ಪ್ರಶಸ್ತಿ ಪ್ರದಾನ, ಅಂಬೇಡ್ಕರ್ ನಡೆದು ಬಂದ ದಾರಿ ಕುರಿತು ನಾಟಕ ಪ್ರದರ್ಶನ, ಉಪನ್ಯಾಸ, ಭಾಷಣ ಕಾರ್ಯಕ್ರಮಗಳು ನಡೆದವು. ಡಾ. ಬಿ.ಆರ್. ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವತಿಯಿಂದ ಅರಿವಿನ ಜಾಥಾ, ಅಂಬೇಡ್ಕರ್ ಅಭಿಮಾನಿಗಳ ಬಳಗದ ವತಿಯಿಂದ ಅಂಬೇಡ್ಕರ್ ಪುಸ್ತಕ ಪ್ರದರ್ಶನ ಮತ್ತು ಕಾಲ್ನಡಿಗೆ ಜಾಥಾ ನಡೆಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜು ಸಂಕಾ, ಹಿರಿಯ ದಲಿತ ಮುಖಂಡರಾದ ವಿಠ್ಠಲ ದೊಡ್ಡಮನಿ, ಅಂಬಾರಾಯ ಅಷ್ಠಗಿ, ಎಸ್.ಎಸ್. ತಾವಡೆ, ಪ್ರಕಾಶ ಮೂಲಭಾರತಿ, ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಂಜುನಾಥ, ಗುಂಡಪ್ಪ ಲಂಡನಕರ್, ಬಾಬು ವಂಟಿ, ಗಣೇಶ ವಳಕೇರಿ, ದೇವಿಂದ್ರ ಸಿನ್ನೂರ್, ಪ್ರಕಾಶ ಅವರಾದಕರ್, ಶ್ರೀನಿವಾಸ ಲಾಖೆ, ದಿನೇಶ ದೊಡ್ಮನಿ, ಡಿ.ಕೆ. ಮದನಕರ್ ಸೇರಿದಂತೆ ಹಲವು ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು.
ಜಗತ್ ವೃತ್ತದಲ್ಲಿ ‘ಭೀಮ’ ಜಾತ್ರೆ
ಸದಾ ವಾಹನಗಳ ದಟ್ಟಣೆಯಿಂದ ಗಿಜುಗುಡುತ್ತಿದ್ದ ಜಗತ್ ವೃತ್ತ ಭಾನುವಾರ ಜಾತ್ರೆಯ ಮೈದಾನವಾಗಿತ್ತು. ಅಂಬೇಡ್ಕರ್ ಅವರ ಅನುಯಾಯಿಗಳು ಜಾತ್ರೆಗೆ ಬಂದವರಂತೆ ಕುಟುಂಬ ಸಮೇತರಾಗಿ ಹೊಸ ಬಟ್ಟೆ ಧರಿಸಿ ಗಾಢ ನೀಲಿ ಬಣ್ಣದ ಕುಂಕುಮವನ್ನು ಹಣೆಗೆ ಹಚ್ಚಿಕೊಂಡು ಬಂದರು. ನಾನಾ ಬಗೆಯ ಮಕ್ಕಳ ಆಟಿಕೆ ಸಾಮಗ್ರಿ ತಿಂಡಿ– ತಿನಿಸುಗಳ ಪುಸ್ತಕಗಳ ತಂಪು ಪಾನಿಯಾಗಳು ಅಂಬೇಡ್ಕರ್ ಬುದ್ಧ ಬಸವಣ್ಣನವರ ಭಾವಚಿತ್ರಗಳ ಮಾರಾಟ ಜೋರಾಗಿತ್ತು.
ಎಲ್ಲೆಲ್ಲೂ ಅನ್ನಸಂತರ್ಪಣೆ
ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣ ಸರ್ದಾರ್ ವಲ್ಲಭಭಾಯಿ ವೃತ್ತ ಜಗತ್ ವೃತ್ತ ಮೋಹನ್ ಲಾಡ್ಜ್ ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಇಡೀ ದಿನ ಉಚಿತ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ತಂಪು ಪಾನಕವನ್ನೂ ವಿತರಿಸಲಾಯಿತು. ವ್ಯವಸ್ಥಾಪಕರು ಶಿಸ್ತಿನಿಂದ ನಿಂತು ಹಸಿದು ಬಂದವರಿಗೆ ಊಟ ನೀರು ನೀಡಿ ಸತ್ಕರಿಸಿದರು. ಅಲ್ಲಿಯೇ ಬಿಸಿ ಬಿಸಿಯಾದ ಪುಲಾವ್ ಅನ್ನ ಸಾರು ತಯಾರಿಸಿ ವಿತರಿಸಲಾಯಿತು. ಅನ್ನಪೂರ್ಣ ಕ್ರಾಸ್‌ನಿಂದ ಜಗತ್ ವೃತ್ತದ ಬದಿಯಲ್ಲಿ ಹಲವು ಜನ ಅಂಬೇಡ್ಕರ್ ಅವರ ಅಭಿಮಾನಿಗಳು ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು.
ಪ್ರಚಾರದ ನಡುವೆ ಪುಷ್ಪನಮನ
ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಶಾಸಕ ಅಲ್ಲಮಪ್ರಭು ಪಾಟೀಲ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆಯೊಂದಿಗೆ ಗೌರವ ನಮನ ಸಲ್ಲಿಸಿದರು.
‘ಸಾಮಾಜಿಕ ದಬ್ಬಾಳಿಕೆಯು ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರ್ಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ ಎಂಬ ಬಾಬಾ ಸಾಹೇಬರ ಈ ಮಾತು ಸಾರ್ವಕಾಲಿಕ ಸತ್ಯ. ಸಮಸಮಾಜ ನಿರ್ಮಿಸಲು ಪಣತೊಟ್ಟ ಯಾವುದೇ ವ್ಯಕ್ತಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಇಂತಹ ಅನೇಕ ವಿರೋಧಗಳನ್ನು ಎದುರಿಸಿ ಮೊಟ್ಟಮೊದಲ ಬಾರಿಗೆ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಗೆ ಸಮಾನತೆಯ ಸ್ಪರ್ಶ ನೀಡಿದ್ದು ಬಾಬಾ ಸಾಹೇಬರು’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ತೋರಿಸಿಕೊಟ್ಟ ಹಾದಿಯಲ್ಲಿ ಸಾಗೋಣ. ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರವನ್ನು ಸತ್ಕರ್ಮ ರೂಪದಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ಭಾರತೀಯರಿಗೆ ಅಂಬೇಡ್ಕರ್ ದೇವರು’
‘ಸಮಸ್ತ ಭಾರತೀಯರಿಗೆ ಅಂಬೇಡ್ಕರ್ ಅವರು ದೇವರು ಸಂವಿಧಾನವೇ ನಮ್ಮೆಲ್ಲರ ಗ್ರಂಥ’ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ‘ದೇವರ ಸ್ವರೂಪಿ ಅಂಬೇಡ್ಕರ್ ಅವರು ನಮ್ಮ ಸಂರಕ್ಷಣೆಗಾಗಿ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರಿಂದಾಗಿ ಭಾರತ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಂತಹ ಶ್ರೇಷ್ಠ ಸಂವಿಧಾನ ಬದಲಾಯಿಸಲಾಗುತ್ತದೆ ಎಂದು ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.
‘ಸಂವಿಧಾನವು ಕೇವಲ ಒಂದು ಜಾತಿ ಒಂದು ಪಂಗಡಕ್ಕೆ ಸೇರಿಲ್ಲ. ಅದು ಸಮಸ್ತ ಭಾರತೀಯರ ಉಸಿರು. ಕಲ್ಯಾಣದ ಆಶಯಗಳನ್ನು ಹೊತ್ತ ಪವಿತ್ರ ಗ್ರಂಥ. ಭಗವದ್ಗೀತೆ ಬೈಬಲ್ ಕುರ್‌ಆನ್‌ಗೆ ಇದ್ದಂತಹ ಗೌರವ ಸಂವಿಧಾನಕ್ಕೂ ಇದೆ’ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ ಶಶೀಲ್ ಜಿ. ನಮೋಶಿ ಶಾಸಕ ಬಸವರಾಜ ಮತ್ತಿಮಡು ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಮುಖಂಡರಾದ ದತ್ತಾತ್ರೇಯ ಪಾಟೀಲ ರೇವೂರು ಮೇಯರ್ ವಿಶಾಲ ದರ್ಗಿ ಅವ್ವಣ್ಣ ಮ್ಯಾಕೇರಿ ಜೆಡಿಎಸ್ ಮುಖಂಡ ಕೃಷ್ಣ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.