ADVERTISEMENT

ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ಆರೋಪಿ ಕುಟುಂಬಸ್ಥರ ಮೇಲೆ ಹಲ್ಲೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 6:28 IST
Last Updated 1 ಮೇ 2024, 6:28 IST
   

ಕಲಬುರಗಿ: ಕೋಟನೂರು (ಡಿ) ಪ್ರದೇಶದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ್ದ ಆರೋಪಿಯೊಬ್ಬರ ಮನೆಗೆ ನುಗ್ಗಿದ ಗುಂಪೊಂದು ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಕುಟುಂಬಸ್ಥರು ಹಾಗೂ ಅವರ ಬೆಂಬಲಿಗರು ಬುಧವಾರ ಪ್ರತಿಭಟನೆ ನಡೆಸಿದರು.

ಜನವರಿ 23ರಂದು ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದ ಆರೋಪಿ ಸಂಗಮೇಶ ಅವರು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದರು. ಇದನ್ನು ತಿಳಿದ ಗುಂಪೊಂದು ಮಂಗಳವಾರ ರಾತ್ರಿ ಸಂಗಮೇಶ ಅವರ ಮನೆಗೆ ನುಗ್ಗಿ, ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಗಮೇಶ ಸಹೋದರ ಶಿವಕುಮಾರ ಹೇಳಿದರು.

ಸಂಗಮೇಶ ಅವರ ಅಣ್ಣನ‌ ಪತ್ನಿ ರಾಜೇಶ್ವರಿ, ತಮ್ಮ ಅನಿಲ್ ಕುಮಾರ್, ಚಿಕ್ಕಪ್ಪ ಮಹಾದೇವಪ್ಪ, ತಾಯಿಯಾದ ತಂಗೆಮ್ಮ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಸಮೀಪ ನಿಲ್ಲಿಸಿದ್ದ ಒಂದು ಕಾರು, ನಾಲ್ಕು ಬೈಕ್‌ಗಳಿಗೆ ಹಾನಿಯಾಗಿದೆ. ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು.

ADVERTISEMENT

'ಪುತ್ಥಳಿಗೆ ಅಪಮಾನ ಪ್ರಕರಣದಲ್ಲಿ ನನ್ನ ಪತಿ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರು ತಪ್ಪು ಮಾಡಿದ್ದು ಸಾಬೀತಾದರೆ ಕಾನೂನಿನ ಅನ್ವಯ ಶಿಕ್ಷೆಯಾಗಲಿ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಕ್ಕೆ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ? ಇದು ಯಾವ ನ್ಯಾಯ? ಮನೆಗೆ ನುಗ್ಗಿ ಹೊಡೆದಿದ್ದಾರೆ. ರಕ್ಷಣೆಗೆ ಪೊಲೀಸರು ಬರಲಿಲ್ಲ' ಎಂದು ಸಂಗಮೇಶ ಪತ್ನಿ ಪ್ರಿಯಾಂಕಾ ಹೇಳಿದರು.

ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆಯಿಂದೆ ಸರಿಯುವುದಿಲ್ಲ ಎಂದು ನೂರಾರು ಪ್ರತಿಭಟನಾಕಾರರು ಕಲಬುರಗಿ- ಜೇವರ್ಗಿ ರಸ್ತೆ ತಡೆದರು. ಇದರಿಂದ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಟೈರ್‌ಗೆ ಬೆಂಕಿ ಹಚ್ಚಿದ್ದಾರೆ.

ಪೊಲೀಸ್ ಕಮಿಷನರ್ ಚೇತನ್ ಆರ್. ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದರೂ ರಸ್ತೆ ಬಿಟ್ಟು ಕದಲಿಲ್ಲ. ಈ ವೇಳೆ ಸಂಸದ ಡಾ.ಉಮೇಶ ಜಾಧವ ಹಾಗೂ ಕಮಿಷನರ್ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.