ADVERTISEMENT

ಕಲಬುರಗಿ: ಯಶ ಕಾಣದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಒಣಗಿಹೋದ ಶೇ 50ಕ್ಕೂ ಹೆಚ್ಚು ಸಸಿಗಳು, ₹34.10 ಲಕ್ಷ ಪ್ರೋತ್ಸಾಹಧನ ಬಾಕಿ

ಓಂಕಾರ ಬಿರಾದಾರ
Published 15 ಜೂನ್ 2024, 7:04 IST
Last Updated 15 ಜೂನ್ 2024, 7:04 IST
ಸೇಡಂ ತಾಲ್ಲೂಕಿನ ಗುಂಡೆಪಲ್ಲಿ (ಕೆ) ಗ್ರಾಮದಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯಿಂದ ಬೆಳೆಸಿರುವುದು (ಸಂಗ್ರಹ ಚಿತ್ರ)
ಸೇಡಂ ತಾಲ್ಲೂಕಿನ ಗುಂಡೆಪಲ್ಲಿ (ಕೆ) ಗ್ರಾಮದಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯಿಂದ ಬೆಳೆಸಿರುವುದು (ಸಂಗ್ರಹ ಚಿತ್ರ)   

ಕಲಬುರಗಿ: ಇಲ್ಲಿನ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ 5 ವರ್ಷಗಳ ಅವಧಿಯಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಸುಮಾರು 1,194 ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು 5,18,544 ಸಸಿಗಳನ್ನು ಪಡೆದಿದ್ದರು. ಆದರೆ, ಅವುಗಳಲ್ಲಿ 2,60,926 ಗಿಡಗಳು ಮಾತ್ರ ಬದುಕುಳಿದಿವೆ.

ಸಾಮಾಜಿಕ ಅರಣ್ಯ ಹೆಚ್ಚಳ ಉದ್ದೇಶದಿಂದ ಅರಣ್ಯ ಇಲಾಖೆಯಿಂದ ಕೃಷಿ ಅರಣ್ಯ ಯೋಜನೆ ಜಾರಿಗೆ ತಂದು ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆ ಮಾಡುವುದು ಹಾಗೂ ಮೂರು ವರ್ಷಗಳ ಅವಧಿಗೆ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ಧನ ಸಹ ನೀಡಲಾಗುತ್ತಿದೆ. ಆದರೆ, ರೈತರು ನಾಟಿ ಮಾಡಿದ 2,57,618 ಸಸಿಗಳು ನಾನಾ ಸಮಸ್ಯೆಯಿಂದ ಒಣಗಿ ಹೋಗಿವೆ ಎಂಬುದು ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

2019–20ರಲ್ಲಿ 256, 2020–21ರಲ್ಲಿ 178, 2021–22ರಲ್ಲಿ 385, 2022–23ರಲ್ಲಿ 220, 2023–24ರಲ್ಲಿ 296 ಸೇರಿ ಒಟ್ಟು 1,194 ರೈತರು ಹೆಸರು ನೋಂದಾಯಿಸಿಕೊಂಡಿದ್ದು ಪ್ರೋತ್ಸಾಹಧನದಲ್ಲಿ ಸಸಿಗಳನ್ನು ಪಡೆದುಕೊಂಡಿದ್ದಾರೆ. ರೈತರು ನೆಟ್ಟ ಸಸಿಗಳಿಗೆ 2019–20ರಲ್ಲಿ ₹16.71 ಲಕ್ಷ, 2020–21ರಲ್ಲಿ ₹18.35 ಲಕ್ಷ ಪ್ರೋತ್ಸಾಹಧನ ಪಡೆದುಕೊಂಡಿದ್ದಾರೆ.

ADVERTISEMENT

2021–22ರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರೋತ್ಸಾಹಧನ ವಿತರಣೆ ಮಾಡಿದ್ದಾರೆ ಎಂಬುದು ನಿಖರವಾದ ಮಾಹಿತಿ ನೀಡಿಲ್ಲ. ಆದರೆ, 2022–23, 2023–24ರ ಅವಧಿಯಲ್ಲಿ ಸಸಿ ನೆಟ್ಟಿರುವ ನೂರಾರು ರೈತರ ಒಟ್ಟು ₹34.10 ಲಕ್ಷ ಪ್ರೋತ್ಸಾಹಧನ ನೀಡುವುದು ಇನ್ನೂ ಬಾಕಿ ಇದೆ.

ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ವರ್ಷ ₹35, ಎರಡನೇ ವರ್ಷ ₹45, ಮೂರನೇ ವರ್ಷ ₹50 ಸಹಾಯ ಧನವನ್ನು ನೀಡಲಾಗುತ್ತದೆ. ಆದರೆ, ಅಸಮರ್ಪಕ ಮಳೆ, ಬೇಗ ಸಹಾಯಧನ ಬಾರದಿರುವುದು, ಲಾಭದ ನಿರೀಕ್ಷೆಯಲ್ಲಿ ನೆಟ್ಟಿದ್ದ ಸಸಿಗಳನ್ನು ಆರ್ಥಿಕ ಸಮಸ್ಯೆಯಿಂದ ತೆಗೆದು ಹಾಕಿದ್ದಾರೆ. ಕೆಲ ರೈತರು ಮೊದಲು ಹುಮ್ಮಸಿನಲ್ಲಿ ಸಸಿಗಳು ನಾಟಿ ಮಾಡಿ ಬಳಿಕ ಆದಾಯ ಕಡಿಮೆಯಾಗುವ ಉದ್ದೇಶದಿಂದ ತೆಗೆದು ಹಾಕಿದ್ದಾರೆ.

‘ಕೃಷಿ ವೆಚ್ಚ ಹೆಚ್ಚಳದಿಂದ ಸರ್ಕಾರದಿಂದ ನೀಡುವ ಪ್ರೋತ್ಸಾಹಧನ ಸಾಕಾಗುವುದಿಲ್ಲ. ಸುಮಾರು 4ರಿಂದ 5 ವರ್ಷಗಳ ಕಾಲ ನಾಟಿ ಮಾಡಿದ ಜಮೀನಿನಿಂದ ಆದಾಯ ಬರುವುದಿಲ್ಲ. ಇದರಿಂದ ಆರ್ಥಿಕ ಸುಳಿಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ಸರ್ಕಾರ ಸಹಾಯಧನ ಮೊತ್ತ ಕನಿಷ್ಠ ವರ್ಷಕ್ಕೆ ₹70ಕ್ಕೆ ಹೆಚ್ಚಿಸಬೇಕು’ ಎನ್ನುತ್ತಾರೆ ಕೃಷಿ ಅರಣ್ಯ ಯೋಜನೆಯಡಿ ಸಸಿ ಪಡೆದ ರೈತ ಬಸವರಾಜ.

ಸುಮಿತ್‌ ಪಾಟೀಲ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿ ಸಸಿ ಪಡೆದ ರೈತರಿಗೆ ಸಹಾಯಧನ ನೀಡುತ್ತಿದೆ. ಕೆಲವು ರೈತರಿಗೆ ಈಗಾಗಲೇ ಸಹಾಯಧನ ಪಾವತಿ ಮಾಡಲಾಗಿದೆ. ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.
ಸುಮಿತ್ ಪಾಟೀಲ ಉಪ ಅರಣ್ಯ ಸಂರಕ್ಷಣಾಧಿಕಾರಿ
ಶರಣಬಸಪ್ಪ ಮಮಶೆಟ್ಟಿ
ಅರಣ್ಯ ಕೃಷಿ ಮಾಡಿದ ರೈತರಿಗೆ ನೀಡುವ ಸಹಾಯಧನ ₹80ಕ್ಕೆ ಹೆಚ್ಚಿಸಬೇಕು. 4 ವರ್ಷಗಳ ಕಾಲ ಆದಾಯ ಇಲ್ಲದಿರುವುದರಿಂದ ಪ್ರತಿ ವರ್ಷ ಸರ್ಕಾರ ವಿಶೇಷ ಸಹಾಯಧನ ನೀಡಬೇಕು.
ಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.