ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಅಕ್ಕಿ ಬಡವರ ಹೊಟ್ಟೆ ತುಂಬಿಸುವ ಬದಲು ಧನಿಕರ ದಂಧೆಗೆ ಬಳಕೆಯಾಗುತ್ತಿದೆ. ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವ ಕೆಲ ವರ್ತಕರು, ದಂಧೆಕೋರರು ಬಡವರ ಹೆಸರಿನಲ್ಲಿ ಅಕ್ಕಿ ತೆಗೆದುಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್, ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅಕ್ಕಿ ಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದು, ಎಫ್‌ಐಆರ್ ದಾಖಲು ಮಾಡುತ್ತಿದ್ದಾರೆ. ಆದರೂ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ರಾಜ್ಯದ ಬಿಪಿಎಲ್ ಕುಟುಂಬಗಳ ಪ್ರತಿ ಫಲಾನುಭವಿಗೆ ಸದ್ಯ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇನ್ನುಳಿದ 5 ಕೆ.ಜಿ. ಬದಲಿಗೆ ₹34ರಂತೆ ₹170 ಪರಿಹಾರ ನೀಡಲಾಗುತ್ತಿದೆ. ಆದರೆ, ಜಿಲ್ಲೆಯ ಎಲ್ಲ ತಾಲ್ಲೂಕು ಪ್ರದೇಶಗಳಲ್ಲಿ ಬಡವರ ಹೊಟ್ಟೆ ತುಂಬಿಸುವ ಪಡಿತರ ಅಕ್ಕಿ ಮಾರಾಟ ಲೀಲಾಜಾಲವಾಗಿ ನಡೆದರೂ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಹಳ್ಳಿಗರಿಗೆ ಆಸೆ ತೋರಿಸಿ ಕಡಿಮೆ ಬೆಲೆ ನಿಗದಿ ಮಾಡಿ ಸಣ್ಣ ದಲ್ಲಾಳಿಗರ ಮೂಲಕ ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆ.
ದಲ್ಲಾಳಿಗಳು ಪ್ರತಿ ಕೆ.ಜಿ ಅಕ್ಕಿಗೆ ₹12ರಿಂದ ₹15 ನೀಡಿ ಖರೀದಿಸಿ, ಮಾಹಿತಿ ಸೋರಿಕೆಯಾಗದಂತೆ ಜಮೀನು ಪ್ರದೇಶದಲ್ಲೇ ಸಂಗ್ರಹಿಸಿ ಅಲ್ಲಿಂದ ರಾತ್ರಿ ಸಾಗಣೆ ಮಾಡುತ್ತಾರೆ ಎಂಬುದು ಜಪ್ತಿ ಮಾಡಿದ ಹಲವು ಪ್ರಕರಣಗಳಿಂದ ತಿಳಿದು ಬಂದಿದೆ.
ಬಡವರಿಗೆ ಸಿಗಬೇಕಾದ ಅಕ್ಕಿ ಸ್ಥಳೀಯ ಅಕ್ಕಿಮಿಲ್‌ಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಿಸಿ ಅಲ್ಲಿ ಪಾಲೀಶ್ ಮಾಡಿ ಮತ್ತೆ ಜನರಿಗೆ ಉತ್ತಮ ಅಕ್ಕಿ ಎಂದು ನೀಡುವುದು ಒಂದೆಡೆಯಾದರೆ, ಸ್ಥಳೀಯ ಹೋಟೆಲ್‌ಗಳಿಗೂ ಸರಬರಾಜು ಮಾಡಲಾಗುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ.
ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಅಫಜಲಪುರ, ಜೇವರ್ಗಿ, ಆಳಂದ, ಕಲಬುರಗಿ, ಕಮಲಾಪುರ ಸೇರಿ ವಿವಿಧ ತಾಲ್ಲೂಕು ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಹೆಚ್ಚು ಮೌಲ್ಯದ ಅಕ್ಕಿ ವಶಕ್ಕೆ ಪಡೆದ ಪ್ರಕರಣಗಳು: 2023 ಜೂನ್ ತಿಂಗಳಲ್ಲಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹5.06 ಲಕ್ಷ ಮೌಲ್ಯದ 202 ಕ್ವಿಂಟಲ್, ಅಕ್ಟೋಬರ್‌ನಲ್ಲಿ ಸಬ್ ಅರ್ಬನ್ ಠಾಣೆ ವ್ಯಾಪ್ತಿಯಲ್ಲಿ ₹8.10 ಲಕ್ಷ ಮೌಲ್ಯದ 238.51 ಕ್ವಿಂಟಲ್, 2024ರ ಮಾರ್ಚ್‌ನಲ್ಲಿ ₹3.33 ಲಕ್ಷ ಮೌಲ್ಯದ 133 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಏಪ್ರಿಲ್‌ನಲ್ಲಿ ₹3.50 ಲಕ್ಷ ಮೌಲ್ಯದ 100 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಗಳವಾರ ಆಳಂದ ಪಟ್ಟಣದಲ್ಲಿ ಸುಮಾರು 170 ಕ್ವಿಂಟಲ್ ಅಕ್ಕಿ ಹಾಗೂ ಹಾಲಿನ ಪೌಡರ್ ಸಹ ಪತ್ತೆ ಮಾಡಲಾಗಿದ್ದು, ಅಕ್ರಮ ಸಾಗಣೆ ಮಾಡುತ್ತಿರುವವರ ಮೇಲೆ ದೂರು ಸಹ ದಾಖಲಾಗಿದೆ.
‘ಅಕ್ರಮವಾಗಿ ಅಕ್ಕಿ ಮಾರಿದರೆ ಕಾರ್ಡ್ ರದ್ದು’ ‘ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ₹15 ಕೋಟಿಗೂ ಅಧಿಕ ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಭೀಮರಾಯ ಕಲ್ಲೂರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರ ಉಚಿತವಾಗಿ ಒದಗಿಸುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸದೇ ಹಣದಾಸೆಗೆ ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿರುವ ಆದ್ಯತಾ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುವುದು. ದೂರುಗಳ ಆಧಾರದ ಮೇಲೆ ಅಕ್ರಮವಾಗಿ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು. ‘ಅಕ್ರಮ ಸಾಗಣೆ ತಡೆಗೆ ಸಹಾಯವಾಣಿ ಸಹ ಸ್ಥಾಪನೆ ಮಾಡಲಾಗಿದೆ. ಆಹಾರ ನಿರೀಕ್ಷಕರು ಶಿರಸ್ತೇದಾರ ಹಾಗೂ ಅಧಿಕಾರಿಗಳ ತಂಡ ನಿರಂತರ ಕೆಲಸ ಮಾಡುತ್ತಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.