ಅಫಜಲಪುರ: ತಾಲ್ಲೂಕಿನ ಕಬ್ಬು ಬೆಳೆಗಾರರು ಹಾಗೂ ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ್ ಹೂಗಾರ್ ಅವರು ಕಲಬುರಗಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ವಿವಿಧ ಬೇಡಿಕೆಗಳ ಕುರಿತು ಮನವಿ ಪತ್ರ ನೀಡಿದರು.
ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ್ ಹೂಗಾರ್ ಮಾತನಾಡಿ, ‘ಕಲಬುರಗಿ ಜಿಲ್ಲೆಯ ಭೀಮ ನದಿಗೆ ಬರಬೇಕಾದ ನೀರಿನ ಹಕ್ಕು 15 ಟಿಎಂಸಿ ನೀರು ಮಹಾರಾಷ್ಟ್ರದಿಂದ ಪ್ರತಿ ವರ್ಷ ಬಿಡುಗಡೆ ಮಾಡಲು ಆದೇಶ ಮಾಡಬೇಕು ಮತ್ತು ನೀರು ನಿರ್ವಹಣಾ ಸಮಿತಿಯನ್ನು ರಚನೆ ಮಾಡಬೇಕು. ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು. ತೂಕದಲ್ಲಿ ಮತ್ತು ಬೆಲೆಯಲ್ಲಿ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ನೀಡಿದ್ದೇವೆ. ಆದಷ್ಟು ಬೇಗನೆ ಮುಖ್ಯಮಂತ್ರಿ ಈ ಭಾಗದ ರೈತರ ಸಮಸ್ಯೆಗಳು ಬಗೆಹರಿಸಬೇಕು’ ಎಂದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಕರಬಸಪ್ಪ, ಆಳಂದ ತಾಲ್ಲೂಕು ಅಧ್ಯಕ್ಷ ಧರ್ಮರಾಜ್ ಸಾಹು, ಅಫಜಲಪುರ ತಾಲ್ಲೂಕು ಅಧ್ಯಕ್ಷ ಭಾಗಣ್ಣ ಕುಂಬಾರ್, ಗೌರವಾಧ್ಯಕ್ಷ ಬಸವರಾಜ್ ವಾಳಿ, ರೇವಣಸಿದ್ದಯ್ಯ ಮಠ, ಲಕ್ಷ್ಮಿಪುತ್ರ ಮನಮಿ, ಕಂಟೆಪ್ಪ ಹದಿನೂರು, ದರೆಪ್ಪಗೌಡ್ ಬಿರಾದಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.