ಕಲಬುರಗಿ: ಜನಸಂಖ್ಯೆ ಹೆಚ್ಚಳ, ಕೆಲಸಕ್ಕಾಗಿ ಬೇರೆ ಊರು, ರಾಜ್ಯಗಳಿಂದ ಆಗಮಿಸುವವರಿಂದ ನಗರದಲ್ಲಿ ನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇದೆ. ವ್ಯಾಪ್ತಿಯೂ ಸಾಕಷ್ಟು ವಿಸ್ತಾರಗೊಂಡಿದ್ದರಿಂದ ಸಂಚಾರ ಪೊಲೀಸರಿಗೆ ವಾಹನ ದಟ್ಟಣೆ ನಿಯಂತ್ರಣ, ಅಪಘಾತ ತಡೆ ದೊಡ್ಡ ಸವಾಲಾಗಿತ್ತು. ಇವನ್ನೆಲ್ಲ ನಿಯಂತ್ರಿಸಲು, ಸವಾರರಿಗೆ ತಿಳಿವಳಿಕೆ ನೀಡಲು ‘ಕಲಬುರಗಿ ನಗರ ಪೊಲೀಸ್ ವಾರ್ಡನ್’ಗಳು ಸಂಚಾರ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.
ನಗರದಲ್ಲಿ ಸದ್ಯ 21 ವರ್ಷಗಳಿಂದ 49 ವರ್ಷದೊಳಗಿನ ಅನುಭವಿಗಳು ಸೇರಿ 21 ಜನ ಟ್ರಾಫಿಕ್ ವಾರ್ಡನ್‌ಗಳಿದ್ದಾರೆ.
ಹಬ್ಬಗಳು, ಜಾತ್ರೆ, ಮೆರವಣಿಗೆ, ಪ್ರತಿಭಟನೆ ಸಂದರ್ಭಗಳಲ್ಲಿ ಸೂಪರ್ ಮಾರುಕಟ್ಟೆ ಸುತ್ತಮುತ್ತ, ಎಸ್‌ವಿಪಿ ವೃತ್ತ, ಬಸ್ ನಿಲ್ದಾಣ, ಲಾಲಗೇರಿ ಕ್ರಾಸ್, ಶಾ ಬಜಾರ್ ಸೇರಿ ವಿವಿಧ ಪ್ರಮುಖ ರಸ್ತೆ, ವೃತ್ತಗಳಲ್ಲಿ ವಿಪರೀತ ಎನ್ನುವಷ್ಟು ವಾಹನ ದಟ್ಟಣೆ ಇರುತ್ತದೆ.
ಏನು ಕೆಲಸ?: ಟ್ರಾಫಿಕ್ ವಾರ್ಡನ್‌ಗಳು ಸಂಚಾರ ಪೊಲೀಸರಂತೆ ಕೆಲಸ ಮಾಡುತ್ತರಾದರೂ ಅವರಷ್ಟು ಅಧಿಕಾರ ಇವರಿಗೆ ಇರುವುದಿಲ್ಲ. ವಾಹನ ಸವಾರರು ಸಿಗ್ನಲ್ ಜಂಪ್ ಮಾಡಿದರೆ, ರಾಂಗ್ ರೂಟ್‌ನಲ್ಲಿ ಬಂದರೆ, ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡದಿದ್ದರೆ, ರಸ್ತೆಯಲ್ಲಿ ಅಥವಾ ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದ್ದರೆ ಅವರಿಗೆ ನಯವಾಗಿ ಸಂಚಾರ ನಿಯಮ, ದಂಡಗಳು, ನಿಯಮ ಉಲ್ಲಂಘನೆಯಿಂದ ಎದುರಾಗುವ ಅಪಾಯಗಳ ಬಗ್ಗೆ ತಿಳಿ ಹೇಳುತ್ತಾರೆ.
‘ನನ್ನ 23ನೇ ವಯಸ್ಸಿನಲ್ಲೇ ಟ್ರಾಫಿಕ್ ವಾರ್ಡನ್ ಸೇವೆಗೆ ಸೇರಿದೆ. ಗನ್ ತರಬೇತಿಯಾಗಿದೆ. ಅಲೋಕಕುಮಾರ, ಶಶಿಕುಮಾರ ಸೇರಿ ವಿವಿಧ ಅಧಿಕಾರಿಗಳ ಸಹಕಾರದೊಂದಿಗೆ ನಮ್ಮ ತಂಡ ಕೆಲಸ ಮಾಡಿದೆ. ನಾನೀಗ ಟ್ರಾಫಿಕ್ ಚೀಫ್ ವಾರ್ಡನ್’ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ ಎಸ್.ಡಿ.ಪಾಟೀಲ.
ಕೋವಿಡ್ ಸಮಯದಲ್ಲಿ ಜಾಗೃತಿ, ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಶಾಲೆ–ಕಾಲೇಜುಗಳಲ್ಲಿ ಸಂಚಾರ ನಿಮಯಗಳ ಬಗ್ಗೆ ಕಾರ್ಯಕ್ರಮ ಮಾಡಿದ್ದಾರೆ. ಬೃಹತ್ ಪ್ರತಿಭಟನೆ, ಸಮಾರಂಭ, ಉತ್ಸವ, ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಸಂಚಾರ ಪೊಲೀಸರಿಗೆ ನೆರವಾಗಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್ ಮೃತಪಟ್ಟಾಗ ಜೇವರ್ಗಿವರೆಗೆ ಹೋಗುವ ಪೊಲೀಸ್ ಎಸ್ಕಾರ್ಟ್‌ನೊಂದಿಗೆ ಟ್ರಾಫಿಕ್ ವಾರ್ಡನ್‌ಗಳೂ ಇದ್ದರು.
‘ಯಾರೋ ರಾಜಕೀಯ ನಾಯಕರು ಬಂದಾಗ, ಸಮಾರಂಭ ಇದ್ದಾಗ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾದಾಗ ದಿನಪೂರ್ತಿ ನಾನು ಇರುತ್ತೇನೆ. ಅಂದು ಕೆಲಸಕ್ಕೆ ರಜೆ ಹಾಕಿಯೇ ಬರಬೇಕು. ಹೀಗಾಗಿ ಡೀನ್ ಅವರೊಂದಿಗೆ ಮಾತನಾಡಿ ವಿಶೇಷ ಸಂದರ್ಭಗಳಲ್ಲಿ ಆನ್‌ಡ್ಯೂಟಿ ಲೀವ್ ಕೊಡಿಸಿದರೆ ಅನುಕೂಲವಾಗುತ್ತದೆ’ ಎಂದು ಎಂಆರ್‌ಎಂಸಿಯಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಟ್ರಾಫಿಕ್ ಚೀಫ್ ವಾರ್ಡನ್ ಎಸ್.ಡಿ.ಪಾಟೀಲ ಹೇಳಿದರು.
‘ಗಣೇಶ ಹಬ್ಬದಿಂದ ಟ್ರಾಫಿಕ್ ವಾರ್ಡನ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಬ್ಬ, ಜಾತ್ರೆ ಸೇರಿ ವಿಶೇಷ ದಿನಗಳಲ್ಲಿ ವಾಹನಗಳ ದಟ್ಟಣೆ, ಸಂಚಾರ ನಿಮಯ ಉಲ್ಲಂಘನೆಯೂ ಹೆಚ್ಚಾಗಿರುತ್ತದೆ. ಇವರಿಂದ ವಾಹನಗಳ ಸಂಚಾರ ಸರಾಗವಾಗಲಿದೆ ಎನ್ನುವ ಭರವಸೆ ಇದೆ’ ಎಂದು ನಿವೃತ್ತ ಶಿಕ್ಷಕ ಶಂಕರ ಪಿ. ಹೇಳಿದರು.
ಟ್ರಾಫಿಕ್ ವಾರ್ಡನ್‌ಗಳ ನೇಮಕ ಮತ್ತು ಗ್ರೇಡ್ ಕನಿಷ್ಠ
ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು. ನಗರದ ಸಂಚಾರ ಪೊಲೀಸ್ ಠಾಣೆ 1 ಮತ್ತು 2ರಲ್ಲಿ ಅರ್ಜಿಗಳು ಸಿಗುತ್ತವೆ. ಭರ್ತಿ ಮಾಡಿ ಚಾಲನಾ ಪರವಾನಗಿ ಆಧಾರ್ ಕಾರ್ಡ್‌ಗಳ ನಕಲು ಪ್ರತಿಯೊಂದಿಗೆ ಅಲ್ಲೇ ಸಲ್ಲಿಸಬೇಕು. ಬಳಿಕ ಟ್ರಾಫಿಕ್ ಚೀಫ್ ವಾರ್ಡನ್ ಅವರಿಗೆ ಅರ್ಜಿಗಳು ವರ್ಗವಣೆಯಾಗುತ್ತವೆ. ಅವರು ಮಾನದಂಡಗಳ ಅನ್ವಯ ಆಯ್ಕೆ ಮಾಡುತ್ತಾರೆ. ಆಯ್ಕೆಯಾದವರಿಗೆ ಪೊಲೀಸ್ ಇಲಾಖೆಯವರು ಒಂದು ವಾರ ಸಂಚಾರ ನಿಯಮ ಸೇರಿ ವಿವಿಧ ತರಬೇತಿ ನೀಡುತ್ತಾರೆ. ಇದ್ಯಾವುದಕ್ಕೂ ಇಲಾಖೆ ಖರ್ಚು ನೀಡುವುದಿಲ್ಲ. ಸಮವಸ್ತ್ರವನ್ನೂ ಟ್ರಾಫಿಕ್ ವಾರ್ಡನ್‌ಗಳೇ ಹೊಲಿಸಿಕೊಳ್ಳಬೇಕು. ಇದು ಸಂಪೂರ್ಣ ಸ್ವಯಂ ಸೇವೆ. ತಮ್ಮ ಬಿಡುವಿನ ವೇಳೆಯಲ್ಲಿ ವಾರದಲ್ಲಿ 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಬೇಕು. ಪೊಲೀಸರ ಮಾದರಿಯಲ್ಲೇ ಟ್ರಾಫಿಕ್ ಚೀಫ್ ವಾರ್ಡನ್ ಅವರಿಗೆ ಮೂರು ಸ್ಟಾರ್ ಡೆಪ್ಯೂಟಿ ಚೀಫ್ ವಾರ್ಡನ್ ಅವರಿಗೆ ಎರಡು ಸ್ಟಾರ್ ಮತ್ತು ಅಸಿಸ್ಟೆಂಟ್ ಚೀಫ್ ವಾರ್ಡನ್ ಅವರಿಗೆ ಒಂದು ಸ್ಟಾರ್ ಇರುತ್ತದೆ. ಇವರ ಸಮವಸ್ತ್ರ 2014ಕ್ಕೂ ಮುನ್ನ ಭಾರತೀಯ ನೌಕಾ ಸೇನೆಯ ಮಾದರಿಯಲ್ಲಿ ಇತ್ತು. ಸದ್ಯ ಬಳಿ ಅಂಗಿ ಮತ್ತು ನೀಲಿ ಪ್ಯಾಂಟ್‌ಗೆ ಬದಲಾಗಿದೆ.
ನಗರದಲ್ಲಿ 4 ವರ್ಷಗಳಿಂದ ಟ್ರಾಫಿಕ್ ವಾರ್ಡನ್‌ಗಳನ್ನು ನೇಮಕ ಮಾಡಿಲ್ಲ. ನಮಗೆ 40–60 ಜನ ಸಿಕ್ಕರೆ ಅನುಕೂಲವಾಗುತ್ತದೆ. ಸದ್ಯ ಶಿಕ್ಷಕರು ವ್ಯಾಪಾರಸ್ಥರು ಟ್ರಾಫಿಕ್ ವಾರ್ಡನ್‌ಗಳಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಜನ ಸ್ವಯಂ ಸೇವಾಮನೋಭಾವದಿಂದ ಮುಂದೆ ಬರಬೇಕು–ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತ
ನಮ್ಮ ಎಲ್ಲ ಟ್ರಾಫಿಕ್ ವಾರ್ಡನ್‌ಗಳು ಸಹಕಾರದೊಂದಿಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಿಂದ ನಮಗೆ ಪ್ರತ್ಯೇಕ ಕಚೇರಿ ಮೇಜು ಕುರ್ಚಿ ಕೊಟ್ಟಿದ್ದಾರೆ. ನನಗೆ ವೈರ್‌ಲೆಸ್ ಕೊಟ್ಟಿದ್ದಾರೆ. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಒದಗಿಸಿದರೆ ಅನುಕೂಲ-ಎಸ್.ಡಿ.ಪಾಟೀಲ ಟ್ರಾಫಿಕ್ ಚೀಫ್ ವಾರ್ಡನ್
ನಾನು 7 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದೇನೆ. ನಿತ್ಯ ಸಂಜೆ 6ರಿಂದ 9ರವರೆಗೆ ಸೇವೆ ಸಲ್ಲಿಸುತ್ತೇನೆ. ಈ ಕೆಲಸ ಮಾಡುವಾಗ ಮನೆಯಲ್ಲಿನ ಕಿರಿಕಿರಿ ಮರೆಯುತ್ತದೆ. ವಾಹನ ಸವಾರರು ಸಹಕರಿಸುತ್ತಾರೆ.-ನಂದಕುಮಾರ ಕುಂಬಾರ ಅಸಿಸ್ಟೆಂಟ್ ಚೀಫ್ ಟ್ರಾಫಿಕ್ ವಾರ್ಡನ್
ನನಗೀಗ 40 ವರ್ಷ 6 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದೇನೆ. ನಿತ್ಯ ಸಂಜೆ 6ರಿಂದ 9 ಗಂಟೆವರೆಗ ಸೇವೆ ಸಲ್ಲಿಸುತ್ತೇನೆ. ಪ್ರಯಾಣಿಕರು ನಮ್ಮ ಮಾತು ಕೇಳುತ್ತಿದ್ದಾರೆ. ಕೆಲ ಅಪಘಾತ ತಪ್ಪಿಸಿದ ಜೀವ ಉಳಿಸಿದ ಸಾರರ್ಥಕತೆ ಇದೆ.-ಬಸವರಾಜ ದಂಡಿ ಶಿಕ್ಷಕ ಟ್ರಾಫಿಕ್ ವಾರ್ಡನ್
ನನಗೀಗ 21 ವರ್ಷ ಟ್ರಾಫಿಕ್ ವಾರ್ಡನ್ ಆಗಿ 8 ತಿಂಗಳಾಗಿದೆ. ಸೇನಾ ತರಬೇತಿ ಪಡೆದಿದ್ದೇನೆ. ನಮ್ಮ ತಂದೆಯೂ 8 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದಾರೆ. ನಮ್ಮದು ಎಲೆಕ್ಟ್ರಿಕಲ್ ಶಾಪ್ ಇದೆ. ವಾರದಲ್ಲಿ 2 ದಿನ 16 ಗಂಟೆ ಸೇವೆ ಮಾಡುತ್ತೇನೆ.-ನಿಖಿಲ್ ಧಶರಥ ಕಟ್ಟಿಮನಿ ಟ್ರಾಫಿಕ್ ವಾರ್ಡನ್ ವ್ಯಾಪಾರಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.