ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕರ್ನಾಟಕ ತೆಲಂಗಾಣ ಗಡಿಯಲ್ಲಿ ಬರುವ ಕರ್ನಾಟಕದ ತೊರೆಗಳ ನೀರಿಗೆ ಕಾರ್ಖಾನೆಯೊಂದರ ತ್ಯಾಜ್ಯ ಹರಿಬಿಟ್ಟ ಪರಿಣಾಮ ಜಲಚರಗಳ ಜೀವಕ್ಕೆ ಆಪತ್ತು ಎದುರಾಗಿದ್ದು ಗಡಿ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ.
ತಾಲ್ಲೂಕಿನ ಬೋನಸಪುರ ಬಳಿ ತೊರೆಗೆ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ ಅಣೆಕಟ್ಟೆಯಲ್ಲಿ ನೀರು ಮಲಿನವಾಗಿರುವುದು ಗಮನಿಸಿದ ಸ್ಥಳೀಯರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೋನಸಪುರ ಅಣೆಕಟ್ಟೆಗೆ ಹರಿದು ಬರುವ ನೀರಿನಲ್ಲಿ ಕಪ್ಪು ಬಣ್ಣದ ಕಾರ್ಖಾನೆ ತ್ಯಾಜ್ಯ ಸೇರಿದ್ದು ಮೀನುಗಳು ಸಾವನ್ನಪ್ಪಿದ್ದಲ್ಲದೇ ಇತರ ಜಲಚರಗಳ ಜೀವಕ್ಕೆ ಅಪಾಯ ಎದುರಾಗಿದೆ. ನೀರಿನಲ್ಲಿ ಗುಳ್ಳೆಗಳು ಬಂದಿದ್ದು ತೊರೆಯ ನೀರಿನಲ್ಲಿ ನಿಧಾನವಾಗಿ ಮಿಶ್ರಣವಾಗುತ್ತಿದೆ.
ಈ ನೀರು ತೆಲಂಗಾಣದ ತಟ್ಟೆಪಳ್ಳಿ, ಬೋಪನಾವರಂ ಮೊದಲಾದ ಕಡೆಗಳಿಂದ ನೀರು ಹರಿದು ಬಂದು ಕುಂಚಾವರಂ, ಮೊಗದಂಪುರ ಮೂಲಕ ಬೋನಸಪುರಕ್ಕೆ ಬಂದು ಅಲ್ಲಿಂದ ಗೊಟಗ್ಯಾರಪಳ್ಳಿ ಕೆರೆ ಸೇರುತ್ತದೆ. ಕೆರೆ ಈಗಾಗಲೇ ತುಂಬಿದ್ದು ಇದೇ ನೀರು ಎತ್ತಿಪೋತೆ ಜಲಪಾತ ಮೂಲಕ ಚಂದ್ರಂಪಳ್ಳಿ ಜಲಾಶಯ ಸೇರುತ್ತದೆ. ನೀರು ಮಲಿನಗೊಂಡ ಸ್ಥಳಕ್ಕೆ ವನ್ಯಜೀವಿ ಧಾಮದ ಉಪ ವಲಯ ಅರಣ್ಯಾಧಿಕಾರಿ ಭಾನುಪ್ರತಾಪ, ಕುಂಚಾವರಂ ಠಾಣೆ ಸಬ್ ಇನ್‌ಸ್ಪೆಕ್ಟರ್ ವೆಂಕಟೇಶ ನಾಯಕ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ, ಉದ್ಯಮಿ ಅಶೋಕ ಮೊಗದಂಪುರ ಮೊದಲಾದವರು ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.