ADVERTISEMENT

ನವಶಿಲಾಯುಗದ ನೆಲೆಗಳಿಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಹುಡುಕಾಟ

ಮಲ್ಲಿಕಾರ್ಜುನ ನಾಲವಾರ
Published 22 ಸೆಪ್ಟೆಂಬರ್ 2022, 5:23 IST
Last Updated 22 ಸೆಪ್ಟೆಂಬರ್ 2022, 5:23 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹಾರಣಗೇರಾ ಗ್ರಾಮ ಸಮೀಪದ ಶಿಲಾಯುಗದ ಕುರುಹುಗಳಿರುವ ಬೂದಿ ಗುಡ್ಡ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹಾರಣಗೇರಾ ಗ್ರಾಮ ಸಮೀಪದ ಶಿಲಾಯುಗದ ಕುರುಹುಗಳಿರುವ ಬೂದಿ ಗುಡ್ಡ   

ಕಲಬುರಗಿ: ಪ್ರಾಚೀನರ ಇತಿಹಾಸಕ್ಕೆ ಭದ್ರ ಬುನಾದಿ ಹಾಕಬಲ್ಲ ನವಶಿಲಾಯುಗದ ಹಲವು ಕುರುಹುಗಳು ಇರುವ 20ಕ್ಕೂ ಅಧಿಕ ಗ್ರಾಮಗಳು ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿ ಪತ್ತೆಯಾಗುತ್ತಿಲ್ಲ.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದರು. 20ಕ್ಕೂ ಅಧಿಕ ನವಶಿಲಾಯುಗದ ಪ್ರದೇಶಗಳು ಎಲ್ಲಿವೆ ಎಂಬುವುದು ತಿಳಿಯುತ್ತಿಲ್ಲ. ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಆ ಪ್ರದೇಶಗಳ ಹೆಸರುಗಳಿವೆ. ಭೌತಿಕವಾಗಿ
ಕಾಣಸಿಗುತ್ತಿಲ್ಲ. ಕಂದಾಯ ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ನಿಜಾಮನ ಆಡಳಿತದಲ್ಲಿ ಪಟ್ಟಿ ಮಾಡಲಾದ ಐತಿಹಾಸಿಕ ನೆಲೆಗಳನ್ನು ಆಧರಿಸಿ 1953ರಲ್ಲಿ ಅವಿಭಜಿತ ಕಲಬುರಗಿ ಜಿಲ್ಲೆಯಲ್ಲಿ 89 ನೆಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 12 ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೇರಿದರೆ, ಉಳಿದ 77 ಸ್ಮಾರಕ ಪ್ರದೇಶಗಳು
ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು
ಪರಂಪರೆ ಇಲಾಖೆಗೆ ಒಳಪಟ್ಟಿವೆ. ಇದರಲ್ಲಿ 52 ನವಶಿಲಾಯುಗದಪ್ರದೇಶಗಳಿವೆ.

ADVERTISEMENT

‘ಈಚೆಗೆ ಮಹಾ ಲೆಕ್ಕಪರಿಶೋಧಕರು (ಸಿಎಜಿ)ಆಡಿಟ್ ಮಾಡಿದಾಗ ನವಶಿಲಾಯುಗದ ಪ್ರದೇಶ ಎಂಬದು ಗುರುತಿಸಲಾದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಹಾಲಮರಡಿ, ಕೊಟ್ಟುರು, ತೈವಥಿಗೆ ಮತ್ತು ಆಗಳ್ಗಿ ಗ್ರಾಮಗಳು ಪತ್ತೆಯಾಗಿಲ್ಲ. ಸ್ಥಳೀಯರು ಕೂಡ ಈ ಹೆಸರುಗಳು ಕೇಳಿಲ್ಲ ಎನ್ನುತ್ತಿದ್ದಾರೆ. ಸ್ಮಾರಕಗಳ 3ಡಿ ಸ್ಕ್ಯಾನಿಂಗ್ ಮಾಡುವವರಿಗೂ ಸಿಕ್ಕಿಲ್ಲ’ ಎಂದುಪುರಾತತ್ವ ಇಲಾಖೆ ಮತ್ತು ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಡಾ. ರಾಜಾರಾಮ್ ಬಿ.ಸಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಗೈತಿಹಾಸಿಕ ನೆಲೆಗಳು ಮೇಲ್ಮಟ್ಟದಲ್ಲಿ ಕಂಡು ಬರುವುದಿಲ್ಲ. ಉತ್ಖನನ ಮಾಡಿದಾಗ
ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಸಿಕ್ಕಂತಹ ಮಡಿಕೆ ಚೂರು, ಶಿಲಾ ಸಮಾಧಿ ಸಿಗಬಹುದು. ನಮ್ಮ ದಾಖಲೆಯಲ್ಲಿ ಇರುವ ಪ್ರದೇಶಗಳಿಗೆ ಯಾವುದೇ ಗಡಿ, ಖಚಿತ ಗುರುತುಗಳೂ ಇಲ್ಲ. ಪ್ರಾಗೈತಿಹಾಸಿಕ ನೆಲೆ ಇದ್ದು, ಭೂಪರಿವರ್ತನೆ ಆಗಿದ್ದರೆ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕೆಲವು ಕಡೆ ಹಳ್ಳಿಗಳು ಪತ್ತೆಯಾದರೂ ಐತಿಹಾಸಿಕ ನೆಲೆಗಳು ಸಿಕ್ಕಿಲ್ಲ. ಐತಿಹಾಸಿಕ ನೆಲೆಗಳು ಸಿಕ್ಕರು, ಹಳ್ಳಿಗಳು ಸಿಕ್ಕಿಲ್ಲ’ ಎಂದರು.

ಪತ್ತೆಯಾಗದ ನವಶಿಲಾಯುಗದ ಗ್ರಾಮಗಳು: ಶಹಾಪುರ
ತಾಲ್ಲೂಕಿನ ಅಲ್ಲಾಪುರ, ಬಾರಪುರ, ಚಿಕ್ಕೇನಹಳ್ಳಿ ಮತ್ತು ಬಂಗರಹಟ್ಟಿ. ಸುರಪುರ ತಾಲ್ಲೂಕಿನ ಬಾಚಿಮಟ್ಟಿ, ಕೊಸಗಿ, ಕೊಪ್ಪನೂರು, ಮಲ್ಲೂರು, ಮಹಾ ಗಾಂವ್, ಎಮ್ಮಿಗೋಡ, ಉಪ್ಪಳಯ, ವಿಟ್ರಗಲ್ಲ, ಉಪ್ಲಿ ಮತ್ತು ಕಪ್ಪನೂರು.

ಪತ್ತೆಯಾಗದ ಲಕ್ಷ್ಮಿ ಗುಡ್ಡ!

ಇದುವರೆಗೂ ಕಲಬುರಗಿ ಹಾಗೂ ಕಮಲಾಪುರ ತಾಲ್ಲೂಕುಗಳಲ್ಲಿ ಮಾತ್ರವೇ ಸಮೀಕ್ಷೆ ನಡೆಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಸಮೀಕ್ಷೆ ಕೈಗೊಂಡರೆ ಪತ್ತೆಯಾಗದ ಹಳ್ಳಿಗಳ ಸಂಖ್ಯೆ ಹೆಚ್ಚಾಗಬಹುದು.

‘ಕಲಬುರಗಿ ತಾಲ್ಲೂಕಿನ ನೂತನ ಶಿಲಾಯುಗದ ನೆಲೆಯ ಲಕ್ಷ್ಮಿಗುಡ್ಡ ಪ್ರದೇಶ ಇನ್ನು ಸಿಕ್ಕಿಲ್ಲ. ಸಮೀಕ್ಷೆಗಾಗಿ ಸರ್ಕಾರ ಕಡಿಮೆ ಮೊತ್ತದ ಅನುದಾನ ಮೀಸಲಿಡುತ್ತದೆ. ಒಂದು ತಾಲ್ಲೂಕು ಸಮೀಕ್ಷೆಗೆ ಸುಮಾರು ₹ 3 ಲಕ್ಷ ಖರ್ಚಾಗುತ್ತದೆ. ಇದಕ್ಕೆ 3 ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಸಹಾಯಕ ಸಂಶೋಧಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಸಮೀಕ್ಷೆ ನಡೆಸಲಾಗುವುದು’ ಎಂದು ಡಾ. ರಾಜಾರಾಮ್ ಬಿ.ಸಿ ಮಾಹಿತಿ ನೀಡಿದರು.

ಜೇವರ್ಗಿಯಲ್ಲಿ ಹಾಲಮರಡಿ, ಕೊಟ್ಟುರು, ತೈವಥಿಗೆ ಮತ್ತು ಆಗಳ್ಗಿ ಎಂಬ ಹಳ್ಳಿಗಳೇ ಇಲ್ಲ. ಇವುಗಳ ಹೆಸರನ್ನೇ ಹೋಲುವ ಕೊಟ್ನೂರು, ಕೊಲ್ಕೂರು, ಅಳಗಿ ಎಂಬ ಗ್ರಾಮಗಳಿವೆ. ಉಳಿದವು ಇಲ್ಲ

-ಸಂಜೀವಕುಮಾರ, ತಹಶೀಲ್ದಾರ್ , ಜೇವರ್ಗಿ

ಬಾಚಿಮಟ್ಟಿ ಮಾತ್ರ ಸುರಪುರ ತಾಲ್ಲೂಕಿಗೆ ಬರುತ್ತದೆ. ಉಳಿದ ಯಾವುದೇ ಗ್ರಾಮಗಳ ಮಾಹಿತಿ ಇಲ್ಲ. ಬೇರೆ ತಾಲ್ಲೂಕುಗಳಲ್ಲಿ ಇರಬಹುದು. ಈ ಬಗ್ಗೆ ಇತಿಹಾಸ ತಜ್ಞರಿಂದ ತಿಳಿಯಬಹುದು

-ಸುಬ್ಬಣ್ಣ ಜಮಖಂಡಿ,ಸುರಪುರ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.