ADVERTISEMENT

‘ಸಾಮಾಜಿಕ ನ್ಯಾಯವಲ್ಲ, ಸಾಮಾಜಿಕ ಅನ್ಯಾಯ’

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ‘ಗ್ಯಾರಂಟಿ’ಗೆ ಬಳಕೆ ಖಂಡನೀಯ: ಅರ್ಜುನ ಭದ್ರೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:57 IST
Last Updated 18 ಜುಲೈ 2024, 5:57 IST
ಅರ್ಜುನ ಭದ್ರೆ
ಅರ್ಜುನ ಭದ್ರೆ   

ಕಲಬುರಗಿ: ‘ಸಾಮಾಜಿಕ ನ್ಯಾಯ ಒದಗಿಸುವುದಾಗಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಡವರು, ಶೋಷಿತರಿಗೆ ಸಾಮಾಜಿಕ ಅನ್ಯಾಯ ಮಾಡುತ್ತಿದೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಕಿಡಿಕಾರಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್‌ ಸರ್ಕಾರವು ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ನಕಲಿನಂತೆ ವರ್ತಿಸುತ್ತಿದೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಪೈಕಿ ₹11 ಸಾವಿರ ಕೋಟಿ ಗ್ಯಾರಂಟಿಗೆ ಬಳಸಿದ್ದ ಸರ್ಕಾರ, 2024–25ನೇ ಸಾಲಿನ ಇದೀಗ ಮತ್ತೆ ₹14,282 ಕೋಟಿ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡಲು ಮುಂದಾಗಿದೆ. ಎರಡೂ ಹಣ ಸೇರಿದರೆ ಒಂದು ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಬಳಸುವ ಒಟ್ಟು ಅನುದಾನದ ಶೇ 27ರಷ್ಟು ಮೊತ್ತವಾಗುತ್ತದೆ. ಇಷ್ಟು ಮೊತ್ತ ಗ್ಯಾರಂಟಿಗೆ ಹೋದರೆ, ಪರಿಶಿಷ್ಟರ ಅಭಿವೃದ್ಧಿಗೆ ಏನು ಉಳಿಯುತ್ತದೆ? ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಧಿಕಾರಿಗಳ ನಿಯೋಜನೆ ಆಡಳಿತಾತ್ಮಕ ವಿಚಾರ. ಆದರೂ, ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆ ನೀಡುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಕಳೆದ ವರ್ಷ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಸಮಾಜದ ಪರ ಕಾಳಜಿ ತೋರಿದ್ದರು. ಆದರೆ, ಎಸ್‌ಸಿಎಸ್‌ಪಿ, ಟಿಎಸ್‌ಪಿಯ ಇಷ್ಟು ದೊಡ್ಡ ಮೊತ್ತವನ್ನು ಗ್ಯಾರಂಟಿಗೆ ಬಳಸಲು ಮುಂದಾದರೂ, ಸಮುದಾಯದ ಸಚಿವರಾಗಲಿ, ಶಾಸಕರಾಗಲಿ ಸಣ್ಣ ಧ್ವನಿಯೂ ಎತ್ತದಿರುವುದು ಖಂಡನೀಯ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ,  ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಖನ್ನಾ ಹಾಗೂ ಸೂರ್ಯಕಾಂತ ಆಜಾದಪುರ, ಕಲಬುರಗಿ ತಾಲ್ಲೂಕು ಸಂಚಾಲಕ ಕಪೀಲ ಸಿಂಗೆ, ಆಳಂದ ತಾಲ್ಲೂಕು ಸಂಚಾಲಕ ಸಾಯಬಣ್ಣ ಉಪಸ್ಥಿತರಿದ್ದರು.

ಪ್ರತಿಭಟನೆ 22ಕ್ಕೆ’ ‘ಬಡವರು ಪರಿಶಿಷ್ಟರು ತುಳಿತಕ್ಕೊಳಗಾದವರಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ಸಾಮಾಜಿಕ ಅನ್ಯಾಯ ಖಂಡಿಸಿ ಜುಲೈ 22ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಅಂದು ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್‌ ಪ್ರತಿಮೆ ಆವರಣದಿಂದ(ಜಗತ್‌) ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಅರ್ಜುನ ಭದ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.