ADVERTISEMENT

ಜ್ಯೇಷ್ಠತಾ ಪಟ್ಟಿ ಬಿಡುಗಡೆ: 16 ಜಿಲ್ಲೆಯ ಪಿಡಿಒಗಳ ಬಡ್ತಿಗೆ ಸಂಚಕಾರ?

1600ಕ್ಕೂ ಅಧಿಕ ಪಿಡಿಒಗಳಿಗೆ ಅನ್ಯಾಯ ಆರೋಪ

ಮನೋಜ ಕುಮಾರ್ ಗುದ್ದಿ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
 ಪ್ರಿಯಾಂಕ್ ಖರ್ಗೆ
 ಪ್ರಿಯಾಂಕ್ ಖರ್ಗೆ   

ಕಲಬುರಗಿ: ನ್ಯಾಯಾಲಯದಲ್ಲಿನ ಪ್ರಕರಣ, ಮತ್ತಿತರ ಕಾರಣಗಳಿಂದಾಗಿ ತಡವಾಗಿ ಸೇವೆಗೆ ಸೇರಿದ 16 ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಆಕ್ಷೇಪದ ಮಧ್ಯೆಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯು ‘ಅಧಿಕಾರಿಗಳು ಸೇವೆಗೆ ಸೇರಿದ ದಿನಾಂಕ’ವನ್ನು ಪರಿಗಣಿಸಿ ಇದೇ 13ರಂದು ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ.‌

ಮುಂಬಡ್ತಿಯಿಂದ ವಂಚಿತರಾಗಲಿರುವ ಪಿಡಿಒಗಳು ನಡೆಸಿದ ಹೋರಾಟಕ್ಕೆ ಇಲಾಖೆ ಕಿವಿಗೊಡದೇ ಇದ್ದುದರಿಂದ ಇದನ್ನು ಪ್ರಶ್ನಿಸಿ ಬಡ್ತಿ ವಂಚಿತರಾಗಲಿರುವ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ. 

ರಾಜ್ಯದಲ್ಲಿ ಮೊದಲ ಬಾರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಸೃಷ್ಟಿಯಾದ ನಂತರ 2009ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ರಾಜ್ಯದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲು ತಡೆಯಾಜ್ಞೆ ಇದ್ದುದರಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವುದು ವಿಳಂಬವಾಯಿತು. ಯಾವ ಜಿಲ್ಲೆಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇದ್ದಿಲ್ಲವೋ ಅಂತಹ ಜಿಲ್ಲೆಗಳು 2019ರ ಜನವರಿ 8ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದವು. ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದಂತಹ ಜಿಲ್ಲೆಗಳಲ್ಲಿ ತಡೆಯಾಜ್ಞೆ ತೆರವುಗೊಂಡ ನಂತರ ಹಂತ–ಹಂತವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲಾಯಿತು. ಕಲಬುರಗಿ, ಯಾದಗಿರಿ, ದಾವಣಗೆರೆ, ಮೈಸೂರು, ತುಮಕೂರು ಸೇರಿದಂತೆ ತಡವಾಗಿ ಸೇವೆಗೆ ಸೇರ್ಪಡೆಯಾದ ಪಿಡಿಒಗಳಿಗೆ ಮುಂಬಡ್ತಿ ಎಂಬುದು ಗಗನ ಕುಸುಮವಾಗಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲ್ಯಾಣ ಕರ್ನಾಟಕದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

2010 ಹಾಗೂ 2014ರಲ್ಲಿ ನೇಮಕವಾದ ರಾಜ್ಯದ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದಂತಹ ಅಂಕಗಳ ಆಧಾರದ ಮೇಲೆ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿತ್ತು. ಆದರೆ, ಕೆಲ ಜಿಲ್ಲೆಗಳ ಅಧಿಕಾರಿಗಳ ಲಾಬಿಗಾಗಿ ಜ್ಯೇಷ್ಠತಾ ಪಟ್ಟಿಯನ್ನು ಸೇವೆಗೆ ಸೇರಿದ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಪ್ರಕಟಿಸಿದ್ದಾರೆ. ಇದು ತಮ್ಮದಲ್ಲದ ತಪ್ಪಿನಿಂದ ತಡವಾಗಿ ಬೇರೆ ಬೇರೆ ದಿನಾಂಕಗಳಂದು ಸೇವೆಗೆ ಸೇರಿದ ಪಿಡಿಒಗಳಿಗೆ ಮರಣ ಶಾಸನವಾಗಿದೆ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಮಾನಪಡೆ.

‘ದಶಕದ ಕಗ್ಗಂಟು ಬಿಡಿಸುವ ಯತ್ನ’

ಪಿಡಿಒಗಳ ಜ್ಯೇಷ್ಠೆತೆಗೆ ಸಂಬಂಧಿಸಿದಂತೆ ಹಲವರು ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆ ಮೇರೆಗೆ ಅಡ್ವೊಕೇಟ್ ಜನರಲ್, ಸೇವಾ ನಿಯಮಗಳ ಪರಿಣತರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಇದೀಗ ಪಟ್ಟಿ ತಯಾರಿಸಲಾಗಿದೆ. ಆ ಮೂಲಕ ದಶಕದ ಹಿಂದಿನ ಕಗ್ಗಂಟನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಜ್ಯೇಷ್ಠತಾ ಪಟ್ಟಿಯ ಕರಡು ಪ್ರಕಟವಾಗಿದ್ದಕ್ಕೆ ವ್ಯಕ್ತವಾದ ಭಿನ್ನಾಭಿಪ್ರಾಯಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಪಿಡಿಒಗಳ ಸಂಘದ ಮುಖಂಡರನ್ನು ಕರೆಸಿ ಅವರೊಂದಿಗೆ ಸಮಾಲೋಚಿಸಿದ ಬಳಿಕ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಅಧಿಕಾರಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತ
ರಾಗಿದ್ದೇವೆ. ಈ ಪಟ್ಟಿಯಿಂದ ಯಾರಿಗೂ ಹಿಂಬಡ್ತಿಯಾಗುವುದಿಲ್ಲ. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಇತ್ಯರ್ಥ ಮಾಡುತ್ತೇವೆ. ಹಿಂದೆ
ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಈ ಸಮಸ್ಯೆ ಇತ್ಯರ್ಥಪಡಿಸುವ ಗೋಜಿಗೇ ಹೋಗಿರಲಿಲ್ಲ. ಪಿಡಿಒಗಳ ನೇಮಕಾತಿ ಜಿಲ್ಲಾ ಮಟ್ಟದಲ್ಲಿ ಆಗಿದ್ದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಈಗ ನಾವು ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ’ ಎಂದರು.  

7ನೇ ರ‍್ಯಾಂಕ್ ಪಡೆದಿದ್ದವರಿಗೆ 3200ನೇ ಸ್ಥಾನ!

2000ರಲ್ಲಿ ನಡೆದ ಪಿಡಿಒ ನೇರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದ ಅಧಿಕಾರಿ (ಈಗ ಕಾರ್ಯನಿರ್ವಾಹಕ ಅಧಿಕಾರಿ)ಗೆ ಜೂನ್ 13ರಂದು ಪ್ರಕಟಿಸಲಾದ ಜ್ಯೇಷ್ಠತಾ ಪಟ್ಟಿಯಲ್ಲಿ 3200ನೇ ರ‍್ಯಾಂಕಿಂಗ್ ಸಿಕ್ಕಿದೆ. ಹೀಗೆ, ತಡವಾಗಿ ಕರ್ತವ್ಯಕ್ಕೆ ಸೇರ್ಪಡೆಯಾದವರಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನಗಳು ಸಿಕ್ಕಿವೆ. ಇದಕ್ಕೆ ಪರಿಹಾರವೆಂದರೆ ನೇಮಕಾತಿ ಅಧಿಸೂಚನೆ ದಿನಾಂಕವನ್ನೇ ಎಲ್ಲ ಜಿಲ್ಲೆಗಳ ಪಿಡಿಒಗಳಿಗೆ ಅನ್ವಯಿಸುವುದು ಎನ್ನುತ್ತಾರೆ ಅನಿಲಕುಮಾರ ಮಾನಪಡೆ.

ಈಗ ಪ್ರಕಟಿಸಿರುವ ಜ್ಯೇಷ್ಠತಾ ಪಟ್ಟಿಯನ್ನು ಹಿಂದಕ್ಕೆ ಪಡೆಯದಿದ್ದರೆ ತಮ್ಮದಲ್ಲದ ತಪ್ಪಿಗೆ ತಡವಾಗಿ ಸೇವೆಗೆ ಸೇರ್ಪಡೆಯಾದ ಪಿಡಿಒಗಳಿಗೆ ಮುಂದಿನ 20 ವರ್ಷ ಬಡ್ತಿಯೇ ಸಿಗುವುದಿಲ್ಲ.
-ಹೆಸರು ಹೇಳಲಿಚ್ಛಿಸದ ತಾ.ಪಂ. ಇಒ
ಜಿಲ್ಲೆಯ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ರಾಗಿದ್ದು, ನ್ಯಾಯ ಕೊಡಿಸುವ ನಿರೀಕ್ಷೆ ಇದೆ. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ.-
-ಅನಿಲಕುಮಾರ ಮಾನಪಡೆ, ಜಿಲ್ಲಾ ಅಧ್ಯಕ್ಷ, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.