ADVERTISEMENT

ವಾಡಿ | ಕಳೆ ನಿಯಂತ್ರಣಕ್ಕೆ ರೈತರ ಹರಸಾಹಸ; ಕಳೆನಾಶಕಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:53 IST
Last Updated 23 ಅಕ್ಟೋಬರ್ 2024, 5:53 IST
ವಾಡಿ ಸಮೀಪದ ಬೋಜುನಾಯಕ ತಾಂಡಾದ ಜಮೀನು ಒಂದರಲ್ಲಿ ಶೇಂಗಾ ಬೆಳೆಯ ಸಾಲುಗಳ ಮಧ್ಯೆ ಕಳೆನಾಶಕ ಸಿಂಪಡಿಸುತ್ತಿರುವುದು
ವಾಡಿ ಸಮೀಪದ ಬೋಜುನಾಯಕ ತಾಂಡಾದ ಜಮೀನು ಒಂದರಲ್ಲಿ ಶೇಂಗಾ ಬೆಳೆಯ ಸಾಲುಗಳ ಮಧ್ಯೆ ಕಳೆನಾಶಕ ಸಿಂಪಡಿಸುತ್ತಿರುವುದು   

ವಾಡಿ: ನಾಲವಾರ ವಲಯದಲ್ಲಿ ಉತ್ತಮ ಮಳೆಯಾಗಿದ್ದು ಶೇಂಗಾ ಬೆಳೆಗಳ ಮಧ್ಯೆ ಸ್ಪರ್ಧೆಯೆಂಬಂತೆ ಕಳೆಯೂ ಬೆಳೆಯುತ್ತಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತಿದ ಹಿಂಗಾರು ಹಂಗಾಮಿನ ವಾಣಿಜ್ಯ ಬೆಳೆ ಶೇಂಗಾ ಹುಲುಸಾಗಿ ಬೆಳೆಯುತ್ತಿದೆ. ಬೆಳೆಗಳ ಮಧ್ಯೆ ಯಥೇಚ್ಛವಾಗಿ ಕಳೆ ಬೆಳೆಯುತ್ತಿದ್ದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕಳೆಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವುದು ಕಂಡು ಬರುತ್ತಿದೆ.

ನಾಲವಾರ ವಲಯದಲ್ಲಿ ಹಿಂಗಾರು ಹಂಗಾಮಿನ ಶೇಂಗಾ ಬಿತ್ತನೆ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಕಳೆಯು ಹೆಚ್ಚಾಗುತ್ತಿದ್ದು ಬೆಳೆ ನಿರ್ವಹಣೆ ಸವಾಲಾಗಿದೆ. ಕೂಲಿ ಕಾರ್ಮಿಕರ ಕೊರತೆ ಮತ್ತು ಕಡಿಮೆ ವೆಚ್ಚದ ಕಾರಣದಿಂದ ಕಳೆನಾಶಕ ಸಿಂಪಡಣೆ ಎಲ್ಲೆಡೆ ಕಂಡು ಬರುತ್ತಿದೆ.

ADVERTISEMENT

ಮಳೆಯಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದ್ದು ಕಳೆನಾಶಕ ಸಿಂಪಡಣೆಗೆ ಸೂಕ್ತ ಸಮಯವಾಗಿದೆ ಎನ್ನುವ ಕೃಷಿತಜ್ಞರ ಅಭಿಪ್ರಾಯದ ಮೇರೆಗೆ ಎಲ್ಲೆಡೆ ಸಿಂಪಡಣೆ ಮಾಡಲಾಗುತ್ತಿದೆ. ಹೊಲದಲ್ಲಿ ಹುಟ್ಟಿ ಬೆಳೆಯುವ ಎಲ್ಲಾ ರೀತಿಯ ಕಿರು ಕಸಗಳನ್ನು ಕಳೆನಾಶಕ ಬಳಸಿ ನಾಶಪಡಿಸಲಾಗುತ್ತಿದೆ.

ಮಹಿಳಾ ಕೂಲಿ ಕಾರ್ಮಿಕರಿಗೆ ಪ್ರತಿ ದಿನಕ್ಕೆ ₹ 200ರಿಂದ ₹250 ಕೂಲಿ ಬೇಡಿಕೆ ಬರುತ್ತಿರುವುದರಿಂದ ಕಡಿಮೆ ವೆಚ್ಚದಲ್ಲಿ ಸಿಗುತ್ತಿರುವ ಕಳೆನಾಶಕವನ್ನು ಬಳಸಲಾಗುತ್ತಿದೆ. ₹1000 ವೆಚ್ಚದಲ್ಲಿ 4 ಎಕರೆ ಸಿಂಪಡಣೆಗೆ ಅಗತ್ಯವಾದಷ್ಟು ಕಳೆನಾಶಕ ಸಿಗುತ್ತಿದೆ.

ಕಳೆಗಳ ನಾಶಕ್ಕೆ ಬರೀ ವಿಷ ಸಿಂಪರಣೆಯೊಂದೇ ದಾರಿ ಎನ್ನುವ ಹಂತಕ್ಕೆ ತಂದು ನಿಲ್ಲಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕಳೆ ನಾಶಕ ಬಳಕೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ ಬರುತ್ತಿದ್ದು ಶೇ 15 ರಿಂದ 20 ಪ್ರತಿಶತ ಮಾರಾಟ ಹೆಚ್ಚಿದೆ ಎನ್ನುತ್ತಾರೆ ವರ್ತಕರು.

ಒಂದು ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆದು ನಿಂತ ಕಳೆಗಳನ್ನು ಕೀಳಲು ಕೂಲಿಯಾಳುಗಳಿಗೆ ₹ 5-6ಸಾವಿರ ರೂಪಾಯಿ ವೆಚ್ಚ ತಗಲಿದರೆ ರೆ ಕಳೆನಾಶಕಕ್ಕೆ ಕೇವಲ ₹1,100 ದಿಂದ 1,500 ರೂಪಾಯಿ ಖರ್ಚು ಮಾಡಿದರೆ ಸಾಕು. ಇದು ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಮಳೆಯಿಂದ ಭೂಮಿ ತೇವಾಂಶವಾಗಿದ್ದು ಕಳೆ ಎದ್ದು ನಿಲ್ಲುತ್ತಿದೆ. ಕಳೆನಿಯಂತ್ರಣಕ್ಕೆ ಆಳುಗಳ ಕೊರತೆ ಹಾಗೂ ಅಧಿಕ ಖರ್ಚು ಹಿನ್ನೆಲೆಯಲ್ಲಿ ಕಳೆನಾಶಕ ಅನಿವಾರ್ಯವಾಗಿದೆ
-ನೂರು ಪವಾರ ಬೋಜು ನಾಯಕ, ತಾಂಡಾ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.