ADVERTISEMENT

ಕಲಬುರ್ಗಿ: ‍‍‍ಕುಂಚದಲ್ಲಿ ದೃಶ್ಯಕಾವ್ಯ ಮೂಡಿಸುವ ಕಲಾವಿದೆ

ಪ್ರಕೃತಿ, ಹೆಣ್ತನಕ್ಕೆ ಜೀವ ತುಂಬುವ ಕಲಾವಿದೆ; ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ

ಹನಮಂತ ಕೊಪ್ಪದ
Published 14 ಮಾರ್ಚ್ 2021, 2:59 IST
Last Updated 14 ಮಾರ್ಚ್ 2021, 2:59 IST
ಲಕ್ಷ್ಮಿ ಪೊದ್ದಾರ್
ಲಕ್ಷ್ಮಿ ಪೊದ್ದಾರ್   

ಕಲಬುರ್ಗಿ: ‍‍‍ಪ್ರೌಢಶಾಲೆಯಲ್ಲಿದ್ದಾಗ ಕ್ಯಾನ್ವಾಸ್‌ ಮೇಲೆ ರಚಿಸುತ್ತಿದ್ದ ವರ್ಣರಂಜಿತ ಚಿತ್ರಗಳಿಗೆ ಶಿಕ್ಷಕರಿಂದ ಸಿಕ್ಕ ಪ್ರೋತ್ಸಾಹದಿಂದ ಪ್ರೇರಣೆಗೊಂಡು, ಮುಂದೆ ಅದೇ ಕಲೆಯನ್ನು ವೃತ್ತಿಯನ್ನಾಗಿಸಿಕೊಂಡವರು ಕಲಾವಿದೆ ಲಕ್ಷ್ಮಿ ಪೊದ್ದಾರ. ಅವರದ್ದು ಕ್ರಿಯೇಟಿವ್ ಪೇಂಟಿಂಗ್.

ಇಲ್ಲಿನ ಬಸವೇಶ್ವರ ಕಾಲೊನಿಯಲ್ಲಿ ವಾಸವಿರುವ ಲಕ್ಷ್ಮಿ ಅವರು 6 ವರ್ಷಗಳಿಂದ ಶ್ರೀಗುರು ವಿದ್ಯಾಪೀಠದಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಅವರು ಅಲ್ಲಿಯೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪಡೆದಿದ್ದಾರೆ.

ಪ್ರೌಢಶಾಲೆಯಲ್ಲಿದ್ದಾಗ ಅವರ ಚಿತ್ರಕಲೆ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕ ಗುರುನಾಥ ಶಿವಪುರೆ ಯಾಳಸಂಗಿ ಇದೇ ಕಲೆಯಲ್ಲಿ ಮುಂದುವರೆಯಲು ಪ್ರೋತ್ಸಾಹಿಸಿದರು. ಮುಂದೆ ಕಲಬುರ್ಗಿಯಲ್ಲಿ ವಿಷ್ಯುವಲ್ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಚಿತ್ರಕಲೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು.

ADVERTISEMENT

2004ರಲ್ಲಿ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆ ಯಿಂದ ಈಚೆಗೆ ಕಲಬುರ್ಗಿ ಯಲ್ಲಿ ನಡೆದ ಚಿತ್ರಸಂತೆ ಯವರೆಗೂ 60ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕಲಬುರ್ಗಿಯ ಅಂಕುರ ಆರ್ಟ್ ಗ್ಯಾಲರಿ, ಡೆಕ್ಕನ್ ಆರ್ಟ್ ಸೊಸೈಟಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಐಡಿಯಲ್ ಫೈನ್ ಆರ್ಟ್ ಕಾಲೇಜು, ದಿ ಆರ್ಟ್ ಇಂಟೆಗ್ರಷನ್ ಫೈನ್ ಆರ್ಟ್ ಕಾಲೇಜು, ಹೈದರಾಬಾದ್ ಆರ್ಟ್ ಸೊಸೈಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರಕಲಾ ಪ್ರದರ್ಶನಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

2006 ಮತ್ತು 2008ರಲ್ಲಿ ಹಂಪಿಯಲ್ಲಿ ನಡೆದ ಲ್ಯಾಂಡ್‌ಸ್ಕೇಪ್ ಪೆಂಟಿಂಗ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. 2018ರಲ್ಲಿ ಹೊಸಪೇಟೆಯಲ್ಲಿಕಿರ್ಲೊಸ್ಕರ್ ವತಿಯಿಂದ ನಡೆದ ‘ನದಿ ಸಂರಕ್ಷಿಸಿ’ ಅಭಿಯಾನದಲ್ಲೂ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ. ಮಹಿಳಾ ಸಬಲೀಕರಣ, ಹೆಣ್ತನ, ಪ್ರಕೃತಿ, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿಗೆ ಅವರ ಕಲಾಕೃತಿಗಳಲ್ಲಿ ಜೀವ ತುಂಬಿದ್ದಾರೆ.

ಚಿತ್ರಕಲೆಯಲ್ಲಿನ ಅವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. 2013ರಲ್ಲಿ ಅತ್ಯುತ್ತಮ ಉದಯೋನ್ಮುಖ ಕಲಾವಿದೆ ಪ್ರಶಸ್ತಿ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ದೃಶ್ಯಬೆಳಕು ಪ್ರಶಸ್ತಿ, ಎಂ.ಎಫ್.ಹುಸೇನ್ ಶತಮಾನೋತ್ಸವ ರಾಷ್ಟ್ರೀಯ ಪುರಸ್ಕಾರ, ಇಂಡಿಯನ್ ರಾಯಲ್ ಅಕಾಡೆಮಿ ಅವಾರ್ಡ್ ಪಡೆದುಕೊಂಡಿರುವುದು ಅವರ ಹೆಗ್ಗಳಿಕೆ. 2020ರಲ್ಲಿ ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಗಿದೆ.

‘ಚಿತ್ರಕಲೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದಕ್ಕೆ ಸಂತಸವಿದೆ. ನನ್ನ ಕಲೆಗೆ ಕುಟುಂಬದವರೂ ಪ್ರೋತ್ಸಾಹ ನೀಡಿದ್ದರಿಂದಲೇ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಮತ್ತಷ್ಟು ವಿಭಿನ್ನ ಪರಿಕಲ್ಪನೆಯ ಚಿತ್ರಗಳನ್ನು ರಚಿಸುವ ಹಂಬಲ ಹೊಂದಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ.

ಯೋಗ ಮತ್ತು ಪ್ರಕೃತಿ​
ಹೆಣ್ಣು ಮತ್ತು ಪ್ರಕೃತಿ
ಗೋವು ಮತ್ತು ಹೆಣ್ಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.