ಕಲಬುರ್ಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ(ಕುಡಾ) ಮಾಜಿ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್ ಮೇಲೆ ಭಾನುವಾರ ಬೆಳಗಿನಜಾವ2 ಗಂಟೆ ಸುಮಾರಿಗೆ ಹಲ್ಲೆ ಮಾಡಲಾಗಿದೆ.
ಗುಲಬರ್ಗಾ ಉತ್ತರ ಮತಕ್ಷೇತ್ರದ ಶಾಸಕಿ ಕನ್ನೀಜ್ ಫಾತಿಮಾ ಬೆಂಬಲಿಗರು ತಮ್ಮನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ. ಶಾಸಕಿಯ ಕುಮ್ಮಕ್ಕೇ ಇದಕ್ಕೆ ಕಾರಣ ಎಂದು ಚುಲಬುಲ್ ಇಲ್ಲಿಯ ರೋಜಾ ಪೊಲೀಸ್ ಠಾಣೆಗೆ ದೂರು ಸಲ್ಲಿದಿದ್ದಾರೆ.
ಬೆಳಗಿನಜಾವ 2 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ 100ಕ್ಕೂ ಹೆಚ್ಚು ಜನರು ಮಾರಕಾಸ್ತ್ರ, ಬಂದೂಕಿನೊಂದಿಗೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದರು. ಮನೆಯಲ್ಲಿರುವ ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿಪುಡಿ ಮಾಡಿದ್ದಾರೆ. ಆದ್ದರಿಂದ ಶಾಸಕಿ ಫಾತಿಮಾ ಸೇರಿದಂತೆ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಚುಲಬುಲ್ ಒತ್ತಾಯಿಸಿದರು.
ಕನ್ನೀಜ್ ಫಾತಿಮಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರು ಚುಲಬುಲ್ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಲಬರ್ಗಾ ಉತ್ತರ ಮತಕ್ಷೇತ್ರದ ಮಾಜಿ ಶಾಸಕ ದಿ.ಖಮರುಲ್ ಇಸ್ಲಾಂ ಅವರಿಗೆ ಚುಲಬುಲ್ ಅತ್ಯಂತ ಆಪ್ತರಾಗಿದ್ದರು. ಈ ಕಾರಣಕ್ಕಾಗಿಯೇ ಖಮರುಲ್ ಅವರು, ಮಹಮ್ಮದ್ ಅಸಗರ ಚುಲಬುಲ್ ಅವರನ್ನು ಎರಡು ಅವಧಿಗೆ ಕುಡಾ ಅಧ್ಯಕ್ಷರನ್ನಾಗಿ ಮಾಡಿದ್ದರು. ಅವರ ನಿಧನದ ಬಳಿಕ ಚುಲಬುಲ್ ಉತ್ತರ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್ ಖಮರುಲ್ ಪತ್ನಿ ಕನ್ನೀಜ್ ಫಾತಿಮಾ ಅವರಿಗೆ ಟಿಕೆಟ್ ನೀಡಿತ್ತು. ಹೈಕಮಾಂಡ್ ನಡೆಯಿಂದ ಸಿಟ್ಟಿಗೆದ್ದ ಚುಲಬುಲ್, ಉತ್ತರ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ನಗರದಲ್ಲಿ ಈಚೆಗೆ ನಡೆದ ಮಿಲ್ಲಿ ಕೌನ್ಸಿಲ್ ಸಭೆಯಲ್ಲಿ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಬದಲು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರಿಗೆ ಬೆಂಬಲ ನೀಡುವ ನಿರ್ಣಯ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.