ಚಿತ್ತಾಪುರ: ಪಟ್ಟಣ ಹೊರವಲಯದ ಐತಿಹಾಸಿಕ ನಾಗಾವಿ ಅಗ್ರಹಾರದ ಜೈನ ಮಂದಿರದಲ್ಲಿದ್ದ ಜೈನ ತೀರ್ಥಂಕರ (ಪಾರ್ಶ್ವನಾಥ) ವಿಗ್ರಹ ಕಳವಿಗೆ ಯತ್ನ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿದೆ.
ಕಲಬುರಗಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸರ್ಕಾರಿ ವಸ್ತುಸಂಗ್ರಹಾಲಯದ ದ್ವಿತೀಯ ದರ್ಜೆ ಸಹಾಯಕ ಮಹೆಬೂಬ್ ಜಿಲಾನಿ ಅವರು ಚಿತ್ತಾಪುರ ಠಾಣೆಗೆ ಆಗಮಿಸಿ ಘಟನೆಯ ಕುರಿತು ದೂರು ನೀಡಿದ್ದಾರೆ.
ಪೊಲೀಸರು ಪುರಾತತ್ವ ಇಲಾಖೆ ಸಿಬ್ಬಂದಿ ಸಮಕ್ಷಮದಲ್ಲಿ ಘಟನೆ ನಡೆದ ಜೈನ ಮಂದಿರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಎಎಸ್ಐ ಚಂದ್ರಾಮ, ಸಿಬ್ಬಂದಿ ನಾಗೇಂದ್ರ, ಮಲ್ಲಿಕಾರ್ಜುನ ಎಮ್ಮೆನೋರ್, ರಾಮಲಿಂಗ ಬಾನರ, ನಾಗಾವಿ ಅಗ್ರಹಾರದ ಕಾವಲುಗಾರ ನಾಗಣ್ಣ ಇದ್ದರು.
ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ
ಚಿತ್ತಾಪುರ: ನಾಗಾವಿ ಜೈನ ಮಂದಿರ ದಲ್ಲಿನ ತೀರ್ಥಂಕರ (ಪಾರ್ಶ್ವನಾಥ) ವಿಗ್ರಹ ಕಳವಿಗೆ ಯತ್ನಿಸಿದ ದುಷ್ಕರ್ಮಿಗಳ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಾಗಾವಿ ದೇವಸ್ಥಾನದಲ್ಲಿನ ಐತಿಹಾಸಿಕ ಶಿಲ್ಪಗಳ ರಕ್ಷಣೆಗೆ ಹೆಚ್ಚಿನ ಕಾವಲುಗಾರರನ್ನು ನೇಮಿಸಬೇಕು. ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ನಾಗಾವಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಅಮಿತ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ವಿಭಾಗೀಯ ಸಹ ಕಾರ್ಯದರ್ಶಿ ಅಂಬರೇಶ ಸುಲೇಗಾಂವ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಕಾರ್ಯದರ್ಶಿ ಮೇಘರಾಜ ಗುತ್ತೇದಾರ, ಬಿಜೆಪಿ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಬಿಜೆಪಿ ಮುಖಂಡ ಗೋಪಾಲ ರಾಠೋಡ, ಕೋಟೇಶ್ವರ ರೇಷ್ಮಿ, ಅಶ್ವಥ್ ರಾಠೋಡ, ಶಾಮ ಮೇಧಾ, ಶಿವರಾಂ ಚವಾಣ್, ಅಜಯಕುಮಾರ, ಮಲ್ಲಿಕಾರ್ಜುನ ಮುಗುಳನಾಗಾಂವ, ಮಲ್ಲಿಕಾರ್ಜುನ ಉಪ್ಪಾರ, ಮಹಾದೇವ, ಸಾಬಣ್ಣ ಪೂಜಾರಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಪೂಜಾರಿ, ಮನೋಜ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.