ಕಲಬುರಗಿ: ‘ನಗರದಲ್ಲಿ ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದರು.
ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ(ಕೆಕೆಸಿಸಿಐ) ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಉದ್ಯಮ ಸ್ಥಾಪನೆಗೆ ಸರ್ಕಾರ ಮುತುವರ್ಜಿ ವಹಿಸುತ್ತಿದೆ. ಜಿಲ್ಲೆಗೊಂದು ಯೋಜನೆ ಅಡಿ ಪ್ರತಿ ಜಿಲ್ಲೆಗೆ ಬೃಹತ್ ಉದ್ಯಮ ಸ್ಥಾಪಿಸುವ ಚಿಂತನೆ ನಡೆದಿದೆ. ದಾಲ್ ಮಿಲ್‌ಗಳಿಗೆ ಪುನಶ್ಚೇತನ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಮರನಾಥ ಪಾಟೀಲ, ‘ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಉತ್ತೇಜನ ನೀಡುವ ಅಗತ್ಯವಿದೆ’ ಎಂದರು.
‘ಸರ್ಕಾರಗಳು ಯಾವುದೇ ಯೋಜನೆ ಕೊಡುವಾಗ ಉತ್ತರ ಕರ್ನಾಟಕ ಅಂದರೆ ಕೇವಲ ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಎಂದು ಪರಿಗಣಿಸುತ್ತವೆ. ಕಲಬುರಗಿ, ಬೀದರ್ ಕೂಡ ಉತ್ತರ ಕರ್ನಾಟಕದ ಒಂದು ಭಾಗ ಎಂಬುವುದು ಗಮನದಲ್ಲಿ ಇರಿಸಿಕೊಳ್ಳುತ್ತಿಲ್ಲ. ಈ ಭಾಗದಲ್ಲಿ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದೆ ನಾಶೀನ್ ಡಾ.ಸೈಯದ್ ಶಾ ಖುಸ್ರೋ ಹುಸೇನಿ, ಮಾದನಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಬಿ.ಜಿ. ಪಾಟೀಲ, ಖನೀಜ್ ಫಾತಿಮಾ, ಎಫ್‌ಕೆಸಿಸಿಐ ಅಧ್ಯಕ್ಷ ಪಿ.ವಿ. ಗೋಪಾಲರೆಡ್ಡಿ, ರಾಯಚೂರಿನ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಬೀದರ್ ಅಧ್ಯಕ್ಷ ಬಿ.ಜಿ. ಶೆಟಕಾರ, ಯಾದಗಿರಿ ಅಧ್ಯಕ್ಷ ದಿನೇಶಕುಮಾರ ಜೈನ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ರಾಜ್ಯ ಕಾರ್ಯದರ್ಶಿ ಭೀಮಾಶಂಕರ ಪಾಟೀಲ, ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷರಾದ ಉಮಾಕಾಂತ ನಿಗ್ಗುಡಗಿ, ಅಮರನಾಥ ಸಿ.ಪಾಟೀಲ, ಸೋಮಶೇಖರ ಟೆಂಗಳಿ ಇದ್ದರು.
ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಶರಣು ಪಪ್ಪಾ ಸ್ವಾಗತಿಸಿದರು. ಸಂಜನಾ ಹುಬ್ಬಳ್ಳಿ ನಿರೂಪಿಸಿದರು.
ಕೆಕೆಸಿಸಿಐ ಸಂಸ್ಥಾಪನಾ ದಿನಾಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ
ಕೆಕೆಸಿಸಿಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಕ ಪ್ರದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್ ಅಪ್ಪ ಅವರಿಗೆ ‘ಶ್ರೇಷ್ಠ ಸಮಾಜ ಸೇವಾ ಪ್ರಶಸ್ತಿ’, ಗೋಪಾಲ ಬೊರ್ಗಾಂವಕರ್ ಮತ್ತು ಶ್ರೀಪಾದ ತ್ರ್ಯಂಬಕರಾವ್ ಘಂಟೋಜಿ ಅವರಿಗೆ ‘ಜೀವಮಾನ ಸಾಧನೆ’, ಡಾ.ಎಸ್.ಎಸ್ ಕಟ್ಟಿ ಮತ್ತು ಲಕ್ಷ್ಮಿಣ ದಸ್ತಿ ಅವರಿಗೆ ‘ಶ್ರೇಷ್ಠ ಸಾರ್ವಜನಿಕ ಸೇವಾ ಪ್ರಶಸ್ತಿ’, ವಿಷ್ಣುದಾಸ್ ತಪಾಡಿಯಾ ಮತ್ತು ಮಲ್ಲಿನಾಥ ಗಣೇಶ ಅವರಿಗೆ ‘ಶ್ರೇಷ್ಠ ಕೈಗಾರಿಕೋದ್ಯಮಿ’, ರವೀಂದ್ರ ಕುಮಾರ ಬೆಕನಾಳ, ವಿಶಾಲ ಗಾಂಧಿ, ಖಲೀಲ್ ಮಖ್ಸೂದ್ ಅಲಿ, ಪ್ರದೀಪ ಗೋಳೆದ್, ಅಶೋಕ ಗುತ್ತೇದಾರ, ಸುಭಾಷ ಕಮಲಾಪುರೆ ಮತ್ತು ವಿಪಿ ಜಾಜಿ ಅವರಿಗೆ ‘ಶ್ರೇಷ್ಠ ವ್ಯಾಪಾರಿ’, ವೀರಣ್ಣ ಮಹಾಂತಗೊಳ್ ಮತ್ತು ಎಲ್‌ಬಿ ಬನ್ನಿಕೊಪ್ಪ ಅವರಿಗೆ ‘ಶ್ರೇಷ್ಠ ಹಣಕಾಸು ಸೇವೆ ಪ್ರಶಸ್ತಿ’, ಶಿವಶರಣಪ್ಪ ಎಸ್ ಭೀಮಳ್ಳಿ ಅವರಿಗೆ ‘ಯುವ ಮತ್ತು ಯಶಸ್ವಿ ಉದ್ಯಮಿ’, ಮುಕ್ತಾ ಜೇಗರಕಲ್ ಅವರಿಗೆ ‘ಮಹಿಳಾ ಉದ್ಯಮಿ’ ಹಾಗೂ ಅನಿಲ್ ಜವಳಿಗಿ ಅವರಿಗೆ ಶ್ರೇಷ್ಠ ನವೀನ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.