ಕಾಳಗಿ: ನವರಾತ್ರಿ ದಸರಾ ಹಬ್ಬದ ಅಂಗವಾಗಿ ಪಟ್ಟಣದ ಅಂಬಾಭವಾನಿ ದೇವಸ್ಥಾನದ ಮುಂಭಾಗದಲ್ಲಿ ಸ್ಥಳೀಯರು ಶನಿವಾರ ಸಂಜೆ ಬನ್ನಿ ಮುರಿದು ವಿಜಯದಶಮಿ ಆಚರಿಸಿ ಸಂಭ್ರಮಿಸಿದರು.
ಹಲಗೆಯೊಂದಿಗೆ ದೇವಸ್ಥಾನಕ್ಕೆ ಬಂದ ಜನರು ಚಂದ್ರಶೇಖರ ಜೋಶಿ ನೇತೃತ್ವದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಅಕ್ಷತೆ ಹಾಕಿದರು. ಜಗದೀಶ ಮಾಲಿಪಾಟೀಲ, ಭೀಮರಾಯ ಜಮಾದಾರ ತಲವಾರ ಹಿಡಿದು ಬನ್ನಿ ಮುರಿದರು. ನಂತರದಲ್ಲಿ ಎಲ್ಲರೂ ಬನ್ನಿ ಕಡಿದುಕೊಂಡು ಅಂಬಾಭವಾನಿಗೆ ಅರ್ಪಿಸಿ ಮಂಗಳಾರತಿ ಮಾಡಿದರು.
ಮುಖಂಡ ಸುಭಾಷ ಕದಂ, ಪರಮೇಶ್ವರ ಮಡಿವಾಳ, ರಾಘವೇಂದ್ರ ಗುತ್ತೇದಾರ, ಜಗನ್ನಾಥ ಚಂದನಕೇರಿ, ಮಹೇಶ ಮೋರೆ, ಬಾಬುರಾವ ಪೂಜಾರಿ, ಚಂದ್ರಶೇಖರ ಮಾನಶೆಟ್ಟಿ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.
ಬೆಳಿಗ್ಗೆಯಿಂದಲೇ ಅನೇಕರು ವಿವಿಧೆಡೆ ಬನ್ನಿಮರಕ್ಕೆ ವಿಶೇಷ ಪೂಜೆ ಮಾಡಿ ಕಾಯಿ ಕರ್ಪೂರ ಸಲ್ಲಿಸಿದರು. ಬನ್ನಿ ಎಲೆ ತಂದು ದೇವಸ್ಥಾನಗಳಲ್ಲಿ ಅರ್ಪಿಸಿ ದರ್ಶನ ಮಾಡಿದರು. ಬಹಳಷ್ಟು ಜನರು ನೀಲಕಂಠ ಕಾಳೇಶ್ವರ ದೇವಸ್ಥಾನದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಮೀಸಲು ಬನ್ನಿ ಮುರಿದರು. ಸಂಜೆಯಾಗುತ್ತಿದ್ದಂತೆ ಬಂಧುಬಳಗ, ಸ್ನೇಹಿತರನ್ನು ಭೇಟಿ ಮಾಡಿ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.